ಮತ್ಸ್ಯಗಂಧಿ ರೇಖಾಳ ಸಾಹಸಗಾಥೆ….

first and only licensed fisherwoman in india

13-12-2017

ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ, ಮಹಿಳಾ ಮುಖ್ಯಮಂತ್ರಿ,  ಮಹಿಳಾ ಪೈಲಟ್, ಮಹಿಳಾ ರೈಲು ಚಾಲಕಿ ಇತ್ಯಾದಿ ಎಲ್ಲರ ಬಗ್ಗೆ ನೀವೀಗಾಗಲೇ ಕೇಳಿದ್ದೀರಿ. ಆದರೆ, ಇದೀಗ ಕೇರಳದ ಕೆ.ಸಿ.ರೇಖಾ ಅವರು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಲೈಸನ್ಸ್ ಪಡೆದಿರುವ, ದೇಶದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 45 ವರ್ಷದ ರೇಖಾ ಕಳೆದ 10 ವರ್ಷಗಳಿಂದ ತನ್ನ ಪತಿ ಕಾರ್ತಿಕೇಯನ್ ಜೊತೆ, ತಮ್ಮ 20 ವರ್ಷ ಹಳೆಯದಾದ ಸಿಂಗಲ್ ಇಂಜಿನ್ ದೋಣಿಯಲ್ಲಿ ಕುಳಿತು, ಪ್ರತಿದಿನ ಅರಬ್ಬೀ ಸಮುದ್ರದಲ್ಲಿ ಸುಮಾರು 20ರಿಂದ 30 ನಾಟಿಕಲ್ ಮೈಲುಗಳ ದೂರ ಪ್ರಯಾಣ ಕೈಗೊಳ್ಳುತ್ತಾರೆ. ಇವರ ದೋಣಿಯಲ್ಲಿ ನೈಲಾನ್ ಬಲೆಯೊಂದನ್ನು ಬಿಟ್ಟರೆ ಬೇರೇನೂ ಇಲ್ಲ. ಇವರ ದೋಣಿಗೆ, ಜಿಪಿಎಸ್ ವ್ಯವಸ್ಥೆಯೂ ಇಲ್ಲ, ಇವರು ಲೈಫ್ ಜಾಕೆಟ್ ಕೂಡ ಬಳಸುವುದಿಲ್ಲ. ಕೇವಲ ಸಾಂಪ್ರದಾಯಕ ಅನುಭವಷ್ಟೇ ಇವರಿಗೆ ಆಧಾರ.

ಕಡಲಮ್ಮ ತಮ್ಮನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆಯಲ್ಲಿ ಸಮುದ್ರಕ್ಕಿಳಿಯುವ ಇವರು ಹಲವಾರು ಬಾರಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಿರುವನಂತಪುರದಿಂದ 300 ಕಿ.ಮೀ ಉತ್ತರಕ್ಕಿರುವ ತ್ರಿಶೂರಿನ ಚೆಟ್ಟುವ ಗ್ರಾಮದ ಈ ಮಹಿಳೆ,  ತನ್ನ ಪತಿಗೆ ಸಹಾಯಕಳಾಗಿ ಸಮುದ್ರಕ್ಕಿಳಿಯಲೇ ಬೇಕಾದ ಅನಿವಾರ್ಯತೆ ಉಂಟಾದಾಗ ಹೀಗಳೆದವರೇ ಹೆಚ್ಚು. ‘ಹೆಂಗಸರು ಹೊಟ್ಟೆಪಾಡಿಗಾಗಿ ಸಮುದ್ರಕ್ಕಿಳಿಯಬಾರದು, ತಮ್ಮ ಪತಿ ಮತ್ತು ಅಣ್ಣತಮ್ಮಂದಿರು ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಪ್ರಾರ್ಥಿಸುತ್ತಾ ತೀರದಲ್ಲಿ ಕಾಯುವುದಷ್ಟೇ ಹೆಂಗಸರ ಕೆಲಸ’ ಎನ್ನುವುದು ಅವರೆಲ್ಲರ ಮಾತಾಗಿತ್ತು. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಸಮುದ್ರ ಅಲೆಗಳ ಮೇಲೆ ಸವಾರಿ ಹೊರಟ ರೇಖಾ, ಇದೀಗ ಈ ಪ್ರದೇಶದ ‘ಹೀರೋ’ ಇದ್ದಹಾಗೆ.

ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆಯವರು, ರೇಖಾ ಅವರ ಸಾಹಸವನ್ನು ಗುರುತಿಸಿ ಸನ್ಮಾನಿಸಿದ್ದಾರೆ ಮತ್ತು ಆಳ ಸಮುದ್ರದ ಮೀನುಗಾರಿಕೆಗೆ ಲೈಸನ್ಸ್ ಪಡೆಯಲು ನೆರವಾಗಿದ್ದಾರೆ. ಒಟ್ಟಿನಲ್ಲಿ, ಭಾರತದಲ್ಲಿ ಮಹಿಳೆಯರು ಪ್ರವೇಶ ಮಾಡದೇ ಇರುವ ಮತ್ತು ತಮ್ಮ ಶಕ್ತಿ ಸಾಮರ್ಥ್ಯಗಳಿಂದ ಹೆಸರು ಮಾಡದೇ ಇರುವ ಕ್ಷೇತ್ರವೇ ಇಲ್ಲವೇನೋ ಅನ್ನುವುದು, ಮಹಿಳಾ ಸಬಲೀಕರಣದ ದೃಷ್ಟಿಯಿಂದ ಒಂದು ಹೆಗ್ಗಳಿಕೆ ಎನ್ನಬಹುದು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ