ಸಚಿವ  ಟಿ. ಬಿ. ಜಯಚಂದ್ರ ಅವರ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಗೊಂಡ ವಿಷಯಗಳು

Kannada News

12-04-2017

ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಂಡಿದ್ದ 28 ಅಂಗನವಾಡಿ ಕಾರ್ಯಕರ್ತೆಯರು ಹಾಗೂ  ಹತ್ತು ಅಂಗನವಾಡಿ ಸಹಾಯಕಿಯರನ್ನು ಮರು ನೇಮಕ ಮಾಡಿಕೊಳ್ಳಲು ರಾಜ್ಯ ಸಚಿವ ಸಂಪುಟವು ಮಹತ್ವಯುತ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ  ಸಚಿವ ಸಂಪುಟ ಸಭೆಯ ನಂತರ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ  ಟಿ. ಬಿ. ಜಯಚಂದ್ರ ಅವರು ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ವಜಾಗೊಂಡಿದ್ದ  ಅಂಗನವಾಡಿ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕರ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಸಂಪುಟವು ಅಂತಿಮ ಎಚ್ಚರಿಕೆ ನೀಡಿ ಅವರ  ಪದಾವಧಿ ಸಮಾಪನಗೊಂಡ ನಂತರ ಮರು ನೇಮಕ ಮಾಡಿ ಅವರ ಸೇವೆಯನ್ನು ಮುಂದುವರೆಸಲು ತೀರ್ಮಾನಿಸಿತು ಎಂದು ಸಚಿವರು ವಿವರಿಸಿದರು. 


ಜೂನ್‍ನಲ್ಲಿ ಮತ್ತೆ ವಿಧಾನ ಮಂಡಲ ಅಧಿವೇಶನ  
ಜುಲೈ ತಿಂಗಳಿನಿಂದ ರಾಷ್ಟ್ರವ್ಯಾಪೀ ಸರಕು ಮತ್ತು ಸೇವಾ ಕಾಯಿದೆ ಜಾರಿಗೊಳಿಸಬೇಕೆಂಬ ಹಿನ್ನೆಲೆಯಲ್ಲಿ ಲೇಖಾನುದಾನ ಪಡೆಯಲಾಗಿದ್ದ 2017-18 ನೇ ಸಾಲಿನ ರಾಜ್ಯ ಆಯವ್ಯಯದ  ಅನುಮೋದನೆ ಕುರಿತು ವಿಸ್ತøತ ಚರ್ಚೆಗೆ ಅವಕಾಶ ಕಲ್ಪಿಸಲು ಜೂನ್ ಮೊದಲ ವಾರದಲ್ಲಿ  ಮತ್ತೆ ರಾಜ್ಯ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ.

ನ್ಯಾಯಾಂಗ ಅಕಾಡೆಮಿ ಕಟ್ಟಡಕ್ಕೆ ಆಡಳಿತಾತ್ಮಕ ಅನುಮೋದನೆ
ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿ  ಕರ್ನಾಟಕ ನ್ಯಾಯಾಂಗ ಅಕಾಡೆಮಿ ನೂತನ ಕಟ್ಟಡ ನಿರ್ಮಾಣಕ್ಕೆ  ರಾಜ್ಯ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. 
ಅಭಿಯೋಜಕರು, ನ್ಯಾಯಾಂಗ ಅಧಿಕಾರಿಗಳು ಹಾಗೂ ನ್ಯಾಯಾಧೀಶರಿಗೆ ತರಬೇತಿ ನೀಡಿ ಅವರ ವೃತ್ತಿ ಕೌಶಲ್ಯವನ್ನು ವೃದ್ಧಿಸುವ ಕಾಯಕದಲ್ಲಿ ತೊಡಗಿರುವ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಕಟ್ಟಡದ ಮೊದಲ ಹಂತದ ಕಾಮಗಾರಿಗಳು 12 ಕೋಟಿ ರೂ ವೆಚ್ಚದಲ್ಲಿ ಈಗಾಗಲೇ ಪ್ರಾರಂಭವಾಗಿದ್ದು, ಮುಂದುವರೆದ ಕಾಮಗಾರಿಗಳಿಗಾಗಿ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ  84.02 ಕೋಟಿ ರೂ ಮಂಜೂರಾತಿಗೆ ಸಂಪುಟವು ಸಮ್ಮತಿ ನೀಡಿದೆ. ಒಟ್ಟಾರೆ 96.02 ಕೋಟಿ ರೂ ವೆಚ್ಚದಲ್ಲಿ ಈ ಕಟ್ಟಡವು ಮೈದೇಳಲಿದೆ. 


ಒಳಚರಂಡಿ ಯೋಜನೆಗಳಿಗೆ ಒಪ್ಪಿಗೆ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ 57 ಕೋಟಿ ರೂ, ಚಿತ್ರದುರ್ಗ ಜಿಲ್ಲೆಯ  ಹೊಸದುರ್ಗದಲ್ಲಿ 25.6 ಕೋಟಿ ರೂ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ  200 ಕೋಟಿ ರೂ ವೆಚ್ಚದಲ್ಲಿ ಒಳಚರಂಡಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ.  


ಕ್ರೀಡಾ ವಸತಿ ನಿಲಯಗಳು ಕ್ರೀಡಾ ಅಕಾಡೆಮಿಗಳಾಗಿ ಪರಿವರ್ತನೆ 
ಕಳೆದ 2016-17 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಉಡುಪಿ, ಮೈಸೂರು,  ಬಳ್ಳಾರಿ, ವಿಜಯಪುರ, ಕಲಬುರಗಿ ಹಾಗೂ ಬೆಳಗಾವಿ ನಗರಗಳಲ್ಲಿ ಆಯ್ದ ಕೀಡೆಗಳಿಗೆ ಮೀಸಲಿರುವ  ರಾಜ್ಯದ ಆರು ಕ್ರೀಡಾ ವಸತಿ ನಿಲಯಗಳನ್ನು 15.6 ಕೋಟಿ ರೂ ವೆಚ್ಚದಲ್ಲಿ    ಕ್ರೀಡಾ ಅಕಾಡೆಮಿಗಳನ್ನಾಗಿ ಪರಿವರ್ತಿಸಲು ಸಚಿವ ಸಂಪುಟವು ನಿರ್ಧರಿಸಿದೆ.

 
ನಗರ ಸಶಸ್ತ್ರ ಮೀಸಲು ಪಡೆ ಸ್ಥಾಪನೆ
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಉಲ್ಲಾಳ ಗ್ರಾಮದಲ್ಲಿ 21.14 ಎಕರೆ ಪ್ರದೇಶದಲ್ಲಿ 19.7 ಕೋಟಿ ರೂ ವೆಚ್ಚದಲ್ಲಿ ನಗರ ಸಶಸ್ತ್ರ ಮೀಸಲು ಪಡೆ  ಸ್ಥಾಪಸಿಲು ಸಚಿವ ಸಂಪುಟವು ಸಮ್ಮತಿಸಿದೆ. 


ಹಟ್ಟಿ ಇನ್ನು ಪಟ್ಟಣ ಪಂಚಾಯಿತಿ !
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಗ್ರಾಮ ಪಂಚಾಯತ್ತನ್ನು  ಪಟ್ಟಣ ಪಂಚಾಯತ್ ಎಂದು ಮೇಲ್ದರ್ಜೆಗೇರಿಸಲು ಸಂಪುಟವು ನಿರ್ಣಯಿಸಿದೆ. 
 

ಬಸ್ ಟರ್ಮಿನಲ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ 1.30 ಎಕರೆ ಪ್ರದೇಶದಲ್ಲಿ   ವಿಶೇಷ ಅಭಿವೃದ್ಧಿ ಯೋಜನೆಯಡಿ 20 ಕೋಟಿ ರೂ ವೆಚ್ಚದಲ್ಲಿ ಬಸ್ ಟರ್ಮಿನಲ್ ನಿರ್ಮಿಸಲು   ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ            

ಕೇಸ್ವಾನ್-2 ಕ್ಕೆ ಅನುಮೋದನೆ
ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಗಣಕ ಸಂಪರ್ಕಗಳನ್ನು  ಹೊಂದುವುದರ ಮೂಲಕ ಸರ್ಕಾರಿ ಸೇವೆಯಲ್ಲಿ ಕ್ಷಿಪ್ರತೆ ಹಾಗೂ ಪಾರದರ್ಶಕತೆ  ತರಲು ಪೂರಕವಾಗುವ  ಕರ್ನಾಟಕ ಸರ್ಕಾರ ರಾಜ್ಯ ವಿಸ್ತøತ ಜಾಲದ ಎರಡನೇ ಹಂತದ ವಿಸ್ತರಣೆಗೆ  ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದೆ. 
ಈ ಯೋಜನೆಯ ಅನುಷ್ಠಾನಕ್ಕಾಗಿ ಐದು ವರ್ಷಗಳ ಅವಧಿಗೆ ಬ್ಯಾಂಡ್ ವಿಡ್ತ್ ಪಡೆಯಲು  ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‍ಗೆ 185.6 ಕೋಟಿ ರೂ ಹಾಗೂ ಜಾಲದ  ಒಟ್ಟಾರೆ ನಿರ್ವಹಣೆಗೆ ವಿಪ್ರೋ ಸಂಸ್ಥೆಗೆ 615.82 ಕೋಟಿ ರೂ ಪಾವತಿಸಿ ಗುತ್ತಿಗೆ ನೀಡಲು ಸಂಪುಟವು ನಿರ್ಧರಿಸಿದೆ.


ಚತುಷ್ಪಥ ರಸ್ತೆ-ಮೇಲ್ಸೇತುವೆ-ಕೂಡು ರಸ್ತೆ ನಿರ್ಮಾಣ 
ದೇಸೂರು  ಹಾಗೂ ಬೆಳಗಾವಿ ನಿಲ್ದಾಣದ ನಡುವೆ ಚತುಷ್ಪಥ ರಸ್ತೆ-ಮೇಲ್ಸೇತುವೆ-ಕೂಡು ರಸ್ತೆ ಕಾಮಗಾರಿಗಳನ್ನು 27.28 ಕೋಟಿ ರೂ ಮೊತ್ತದಲ್ಲಿ ವೆಚ್ಚ ಹಂಚಿಕೆ ಆಧಾರದ ಮೇರೆಗೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಪೈಕಿ ರಾಜ್ಯ ಸರ್ಕಾರದ ಪಾಲು 14.54 ಕೋಟಿ ರೂ ಹಾಗೂ ರೈಲ್ವೇ ಮಂತ್ರಾಲಯದ ಪಾಲು 12.74 ಕೋಟಿ ರೂ ಆಗಿದೆ. 
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲು ಮಲಪ್ರಭ ನದಿಗೆ ಅಡ್ಡಲಾಗಿ  ತೋರಳ್ಳಿ, ಮಾಲವ ಮತ್ತು ರಾಮೇವಾಡಿ ಕ್ರಾಸ್ ಬಳಿ 19.25 ಕೋಟಿ ರೂ ಪರಿಷ್ಕøತ ಅಂದಾಜು ಮೊತ್ತದಲ್ಲಿ ಬಿಡ್ಜ್-ಕಂ-ಬ್ಯಾರೇಜ್ ನಿರ್ಮಾಣಕ್ಕೆ ಸಂಪುಟ ಸಮ್ಮತಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ