ಭಾವಸಾರ ಕ್ಷತ್ರಿಯ ಬೃಹತ್ ಸಮಾವೇಶ

Massive convention of Bhavasar Kshatriya

12-12-2017

ಬೆಂಗಳೂರು: ರಾಜ್ಯದಲ್ಲಿ 25 ಲಕ್ಷ ಜನ ಸಂಖ್ಯೆಯಿರುವ ಹಿಂದುಳಿದ ಭಾವಸಾರ ಕ್ಷತ್ರಿಯ ಜನಾಂಗವನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಸಮುದಾಯಕ್ಕೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಈ ತಿಂಗಳ 16 ಮತ್ತು 17 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಹಿಂದುಳಿದ ವರ್ಗಗಳ ಪ್ರಬಲ ಜಾತಿಗಳು ಭಾವಸಾರ ಕ್ಷತ್ರಿಯ ಸಮುದಾಯಕ್ಕೆ ಸಿಗಬೇಕಾಗಿರುವ ಸವಲತ್ತುಗಳನ್ನು ಕಸಿದುಕೊಂಡಿದ್ದು, ಇದರಿಂದಾಗಿ ಸಮುದಾಯ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಜ್ಯಾಧ್ಯಕ್ಷ ಸುಧೀರ್ ಎಸ್. ನವಲೆ ಅಸಮಾಧಾನ ವ್ಯಕ್ತಪಡಿಸಿದರು.

ಸವಲತ್ತು ಪಡೆಯಲು ನಾವೀಗ ಸಂಘಟಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದೇ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ: ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತಿತರ ಸಂಪುಟ ಸಹೋದ್ಯೋಗಿಗಳು ಪಾಲ್ಗೊಳ್ಳಲಿದ್ದಾರೆ. ಸಂಜೆ ನಡೆಯಲಿರುವ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಭಾಗಿಯಾಗಲಿದ್ದು, ಮರು ದಿನ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಗವಹಿಸುತ್ತಾರೆ ಎಂದರು.

ಸಮುದಾಯಕ್ಕೆ ಸೌಲಭ್ಯ ಪಡೆಯಲು ಪಕ್ಷಾತೀತವಾಗಿ ಹೋರಾಟ ಮಾಡಲು ನಿರ್ಧರಿಸಿದ್ದು, ಸಮುದಾಯದ ಅಭ್ಯುದಯಕ್ಕಾಗಿ ಭಾವಸಾರ ಕ್ಷತ್ರಿಯ ನಿಗಮ ಸ್ಥಾಪಿಸಿ ಪ್ರತ್ಯೇಕ ನಿಧಿ ಮೀಸಲಿಡಬೇಕು. ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಕ್ಕೆ ಸೂಕ್ತ ರೀತಿಯಲ್ಲಿ ಸರ್ಕಾರಿ ಸೌಲಭ್ಯಗಳಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದರು. ಮೂಲತಃ ಭಾವಸಾರ ಕ್ಷತ್ರಿಯ ಸಮುದಾಯ ದರ್ಜಿ ವೃತ್ತಿಯಲ್ಲಿ ತೊಡಗಿದ್ದು, ಈ ಹಿಂದೆ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಟೈಲರಿಂಗ್ ಫೆಡರೇಷನ್ ಸ್ಥಾಪಿಸಿದ್ದು, ಸೊರಗುತ್ತಿರುವ ಇದಕ್ಕೆ ಕಾಯಕಲ್ಪ ನೀಡುವ ಕೆಲಸ ಆಗಬೇಕು ಎಂದು ಸುಧೀರ್ ನವಲೆ ಒತ್ತಾಯಿಸಿದರು.

ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿದೆ. 38 ವರ್ಷಗಳ ಹಿಂದೆ ಪ್ರಭಾಕರ್ ಆರ್. ತೇಲ್ಕರ್ ಅವರು ಚಿತ್ತಾಪುರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಯಾರೊಬ್ಬರೂ ಶಾಸನ ಸಭೆಗೆ ಆಯ್ಕೆಯಾಗಿಲ್ಲ. ಹೀಗಾಗಿ ನಮ್ಮ ಸಮುದಾಯ ರಾಜಕೀಯವಾಗಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರು. ಅಲ್ಲದೇ ರಾಜ್ಯದ ಯಾವುದೇ ನಿಗಮ ಮತ್ತು ಮಂಡಳಿಗಳಿಗೆ ನಮ್ಮ ಸಮುದಾಯಕ್ಕೆ ಅವಕಾಶ ಕಲ್ಪಿಸಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನೇಮಕಾತಿ ಮಾಡಲು ಮುಂದಾಗಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನಾಂಗಕ್ಕೆ ಸ್ಪರ್ಧಿಸಲು ಎಲ್ಲಾ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು. ವಿಧಾನಪರಿಷತ್ತಿಗೆ ಸಮುದಾಯದ ಮುಖಂಡರನ್ನು ನಾಮನಿರ್ದೇಶನ ಮಾಡಬೇಕೆಂದು ಸುಧೀರ್ ಎಸ್.ನವಲೆ ಒತ್ತಾಯಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ