ಹುಷಾರ್ ಇದು ‘ಮೆಟ್ರೊ ವಿಷಯ’

Be careful in metro-hydarabad

12-12-2017

ನೀವೇನಾದ್ರೂ ಮೆಟ್ರೊ ರೈಲಿನಲ್ಲಿ ಓಡಾಡ್ತಿದ್ದೀರಾ? ಹಾಗಿದ್ರೆ ಈ ವಿಚಾರ ತಿಳ್ಕೊಳ್ಳಲೇಬೇಕು. ಅತ್ಯಂತ ಮುಖ್ಯವಾಗಿ ನೀವು ಮೆಟ್ರೊ ಸ್ಟೇಷನ್ನಲ್ಲಾಗಲಿ ಅಥವ ರೈಲಿನ ಒಳಗಾಗಲಿ ಯಾರ ಜೊತೆಯೂ, ಯಾವುದೇ ಕಾರಣಕ್ಕೂ ಜಗಳ ಆಡಲೇಬಾರದು. ತಪ್ಪು ಅವರದ್ದೇ ಇರಲಿ ನಿಮ್ಮದೇ ಇರಲಿ, ಜಗಳ ಆಡಿದವರಿಗೆ 500 ರೂಪಾಯಿ ದಂಡ ಮತ್ತು ಅವರ ಮೆಟ್ರೊ ಕಾರ್ಡ್ ಅಥವ ಟಿಕೆಟ್ ಕಿತ್ತುಕೊಂಡು ಅವರನ್ನು ಮೆಟ್ರೊ ರೈಲಿನಿಂದ ಹೊರಹಾಕಲಾಗುವುದು.

ಇದರ ಜೊತೆಗೆ, ನಿಮಗೆ ರೈಲಿನಲ್ಲಿ ಸೀಟು ಸಿಗದೇ ಇರುವ ಪರಿಸ್ಥಿತಿಯಲ್ಲಿ ನಿಂತೇ ಪ್ರಯಾಣಿಸಬೇಕೇ ಹೊರತು ತುಂಬಾ ಸುಸ್ತಾಯಿತು ಎಂದು ಕೆಳಗೆ ಕುಳಿತಲ್ಲಿ ಅದಕ್ಕೂ 500 ರೂಪಾಯಿ ದಂಡ ಬೀಳುತ್ತೆ ಹುಷಾರು. ಇದು ಇಷ್ಟಕ್ಕೇ ನಿಲ್ಲುವುದಿಲ್ಲ, ಒಂದು ವೇಳೆ ನೀವೇನಾದರೂ ಅನಗತ್ಯವಾಗಿ ಒಂದು ಗಂಟೆಗಿಂತ ಹೆಚ್ಚು ಸಮಯ ಮೆಟ್ರೊ ರೈಲು ನಿಲ್ದಾಣದಲ್ಲಿ ಅಡ್ಡಾಡಿಕೊಂಡಿದ್ದರೆ ನಿಮ್ಮನ್ನು ಬಂಧಿಸಿ ಮೂರು ತಿಂಗಳ ಕಾಲ ಜೈಲಿಗೆ ಕಳಿಸಬಹುದು.

ಅನಧಿಕೃತವಾಗಿ ಮೆಟ್ರೊ ಸ್ಟೇಷನ್ ಪ್ರವೇಶಿಸುವುದು, ರೈಲಿನ ಒಳಗೆ ಮತ್ತು ಹೊರಗೆ ಏನಾದರೂ ಬರೆಯುವುದು, ಯಾವುದೇ ರೀತಿಯ ಸ್ಟಿಕ್ಕರ್ ಹಚ್ಚುವುದು ಕಂಡುಬಂದರೆ ಅದನ್ನೂ ಅಪರಾಧ ಎಂದು ಪರಿಗಣಿಸಿ ದಂಡ ವಿಧಿಸಲಾಗುವುದು. ಒಂದು ವೇಳೆ ಯಾವುದಾದರೂ ಕಾರಣಕ್ಕಾಗಿ ನಿಮ್ಮನ್ನು ಮೆಟ್ರೊ ರೈಲು ಬೋಗಿಯಿಂದ ಹೊರಗೆ ಹಾಕುವಂಥ ಪ್ರಸಂಗದಲ್ಲಿ, ನೀವು ಪ್ರತಿರೋಧ ಒಡ್ಡಿದಲ್ಲಿ ಅದಕ್ಕೆ ಒಂದು ಸಾವಿರ ರೂಪಾಯಿ ದಂಡ ಮತ್ತು 6 ತಿಂಗಳ ವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಮೆಟ್ರೊ ರೈಲಿನಲ್ಲಿ ಅಪಾಯಕಾರಿ ವಸ್ತುಗಳನ್ನು ಕೊಂಡೊಯ್ಯುವವರಿಗೆ 5 ಸಾವಿರ ರೂಪಾಯಿಗಳವರೆಗೆ ದಂಡ ಮತ್ತು 4 ವರ್ಷಗಳವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದು.

ಒಟ್ಟಿನಲ್ಲಿ, ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡುವ ನೀವು ಬುದ್ಧನಂತೆ ಸದಾ ಶಾಂತ ಚಿತ್ತರಾಗಿರಬೇಕು ಅಥವ ‘ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿ’ ಎಂಬ ಮಹಾತ್ಮ ಗಾಂಧಿಯವರ ಮಾತನ್ನು ಅನುಸರಿಸಬೇಕು. ಇಲ್ಲವಾದಲ್ಲಿ ಕಷ್ಟ ನಷ್ಟ ಅನುಭವಿಸುವ ಸಾಧ್ಯತೆಗಳೇ ಹೆಚ್ಚು. ಇಲ್ಲಿಯವರೆಗೂ ಹೇಳಿದ ನಿಯಮಗಳೆಲ್ಲ ಇತ್ತೀಚೆಗೆ ಆರಂಭವಾದ ಹೈದರಾಬಾದ್ ಮೆಟ್ರೊಗೆ ಸಂಬಂಧಿಸಿದವು. ಆದರೆ, ಬೆಂಗಳೂರಿನ ‘ನಮ್ಮ ಮೆಟ್ರೊ’ದವರೂ ಕೂಡ ಇದೇ ರೀತಿಯ ಸಾಕಷ್ಟು ನಿಯಮಗಳನ್ನು ರೂಪಿಸಿದ್ದಾರೆ. ಹೈದರಾಬಾದ್ ಮೆಟ್ರೊದವರ ರೀತಿಯ ನಿಯಮಗಳೇ ಇಲ್ಲೂ ಜಾರಿಗೆ ಬಂದರೆ ಆಶ್ಚರ್ಯವೇನೂ ಇಲ್ಲ, ಯಾವುದಕ್ಕೂ ಎಚ್ಚರವಿರಲಿ, ಇದು ಮೆಟ್ರೊ ವಿಷಯ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ