ಸುಫಾರಿ ಕೊಟ್ಟು ಕೊಲೆ ಹಿನ್ನೆಲೆ ಆರೋಪಿಗಳ ಬಂಧನ

Kannada News

12-04-2017 532

ಬೆಂಗಳೂರು, ಏ. 12- ಸಾಲ ಪಡೆದ ಹಣ ವಾಪಸ್ಸು ಕೊಡದ ಮಹಿಳೆಯರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ ಲೇವಾದೇವಿಗಾರ ಪತಿಯನ್ನು ಸ್ನೇಹಿತನ ಜೊತೆ ಸೇರಿ ಪತ್ನಿಯೇ 30 ಲಕ್ಷ ರೂಗಳ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದು  ಆರೋಪಿಗಳೆಲ್ಲರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಸ್ನೇಹಿತನ ಜೊತೆ ಸೇರಿ 30 ಲಕ್ಷ ರೂ.ಗಳ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಪೊಲೀಸರಿಗೆ ದೂರು ನೀಡಿ ನಾಟಕವಾಡಿದ್ದ ಐನಾತಿ ಪತ್ನಿ ಸೇರಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೂರ್ವ ವಿಭಾಗದ ಪೊಲೀಸರು ಎಲ್ಲರನ್ನೂ ಜೈಲಿಗಟ್ಟಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಪುಲಿಕೇಶಿ ನಗರದ ಆಕೆಯ ಸ್ನೇಹಿತ ಶ್ರೀಧರ್ ಕೊಲೆಗೈದ ಪೆರಿಯಾರ್ ನಗರದ ದಿನೇಶ್, ಪ್ಯಾಟ್ರಿಕ್, ಪ್ರಭುನನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಅವಿನಾಶ್ ಎಂಬಾತನಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಏ. 6 ರಂದು ಸಂಜೆ 4ರ ವೇಳೆ ಕಲ್ಪಳ್ಳಿ ಸ್ಮಶಾನದ ಬಳಿಯ ರೈಲ್ವೆ ಗೇಟ್ ಪಕ್ಕದಲ್ಲಿ ಲೇವಾದೇವಿಗಾರ ಕುಮಾರ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ಪತ್ತೆಗಾಗಿ ಪೂರ್ವ ವಿಭಾಗದ ಪೊಲೀಸರ ವಿಶೇಷ ತಂಡ ರಚಿಸಲಾಗಿದ್ದು, ತಂಡವು ತನಿಖೆ ಕೈಗೊಂಡಾಗ ಕುಮಾರ್ ಸಿನಿಮಿಯ ರೀತಿಯಲ್ಲಿ ಕೊಲೆಯಾಗಿರುವುದು ಪತ್ತೆಯಾಗಿದೆ.
ಕುಮಾರ್ ಯಾರು!
ಹಲಸೂರಿನ ಕುಮಾರ್(50) ಹಲವು ವರ್ಷಗಳಿಂದ ಲೇವಾದೇವಿ ವ್ಯವಹಾರ ನಡೆಸುತ್ತಿದ್ದು,ಹಲವರಿಗೆ ಸಾಲ ನೀಡಿ ಬಡ್ಡಿ ವಸೂಲು ಮಾಡುತ್ತಿದ್ದ. ಈತನಿಂದ ಬಹಳಷ್ಟು ಮಹಿಳೆಯರು ಕೂಡ ಸಾಲ ಪಡೆದಿದ್ದರು.ಸಾಲ ಹಾಗೂ ಸಾಲದ ಮೇಲಿನ ಬಡ್ಡಿಯನ್ನು ವಾಪಸ್ಸು ಕೊಡದ ಮಹಿಳೆಯರನ್ನು ಕುಮಾರ್ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದನು ಹಲವು ದಿನಗಳಿಂದ ಪತಿಯ ಹೆಂಗಸರ ಸಹವಾಸ  ತಿಳಿದ ಪತ್ನಿ ಡೋರಿನ್ ಕುಮಾರ್ ಎಷ್ಟು ಬಾರಿ ಬುದ್ಧಿ ಹೇಳಿದರು ಪತಿಯ ನಡವಳಿಕೆ ಸರಿಯಾಗಿರಲಿಲ್ಲ.
ಕೆಲ ದಿನಗಳ ಹಿಂದೆ ಕುಮಾರ್ನಿಂದ ಶ್ರೀಧರ್ ಎಂಬ ವ್ಯಕ್ತಿಯು 5 ಲಕ್ಷ ರೂ.ಗಳ ಸಾಲ ಪಡೆದಿದ್ದು. ಕಾಲ ಕಾಲಕ್ಕೆ ಬಡ್ಡಿ ಪಾವತಿಸುತ್ತಿದ್ದ. ಕುಮಾರ್ ಬಳಿ ಬರುತ್ತಿದ್ದ ಶ್ರೀಧರ್ ಡೋರಿನ್‍ಗೆ ಪರಿಚಯವಾಗಿ ಆಕೆಯು ಕೂಡ ಆತನಿಂದ ಬಡ್ಡಿ ವಸೂಲು ಮಾಡುತ್ತಿದ್ದಳು. ಹೀಗೆ ಇವರಿಬ್ಬರ ಪರಿಚಯ ಗಾಢವಾಗಿ ಪಡೆದಿತ್ತು.
ಪತಿಯ ಹೆಂಗಸರ ಸವಾಸದಿಂದ ರೋಸಿ ಹೋಗಿದ್ದ ಡೋರಿನ್, ಆತನಿಗೆ ತಕ್ಕ ಶಾಸ್ತಿ ಮಾಡಬೇಕಿರುವುದನ್ನು ಶ್ರೀಧರ್ ಬಳಿ ಪ್ರಸ್ತಾಪಿಸಿದ್ದಳು. ಪತಿಯನ್ನು ಮುಗಿಸಿದರೆ ನೀನು ಕೊಡಬೇಕಾಗಿರುವ 5 ಲಕ್ಷ ಸಾಲ ಮನ್ನಾ ಮಾಡುವುದಲ್ಲದ್ದೆ 30 ಲಕ್ಷ ರೂ.ಗಳ ಸುಪಾರಿ ಕೊಡುವುದಾಗಿಯೂ ತಿಳಿಸಿದ್ದಳು.
ಹಣಕ್ಕಾಗಿ ಆಸೆ ಬಿದ್ದ ಶ್ರೀಧರ್ ತನಗೆ ಪರಿಚಯವಿದ್ದ ಕೊಲೆ ಯತ್ನ, ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಭು ಎಂಬಾತನನ್ನು ಸಂಪರ್ಕಿಸಿದ್ದ. ಪ್ರಭು ತನಗೆ ಪರಿಚಯವಿದ್ದ ಕೊಲೆಯತ್ನ, ಕಳ್ಳತನದಲ್ಲಿ ಭಾಗಿಯಾಗಿದ್ದ ದಿನೇಶ್ ಹಾಗೂ ಮತ್ತಿಬ್ಬರಾದ ಅವಿನಾಶ್, ಪ್ಯಾಟ್ರಿಕ್ ಸೇರಿಕೊಂಡು ಕುಮಾರನ ಕೊಲೆಗೆ ಸಂಚು ರೂಪಿಸಿದ್ದರು.
ಅದರಂತೆ ಏ. 6 ರಂದು ಮಧ್ಯಾಹ್ನ ಕುಮಾರ್‍ಗೆ ಪರಿಚಯವಿದ್ದ ಕ್ಲಾರ ಮತ್ತು ರೇವತಿ ಅವರನ್ನು ಸಂಪರ್ಕಿಸಿ ಅವರ ಮೂಲಕ ಕುಮಾರ್‍ನನ್ನು ಕಲ್ಪಳ್ಳಿ ಸ್ಮಶಾನದ ಬಳಿ ಕರೆಸಿಕೊಂಡಿದ್ದಾರೆ.
ಸುಫಾರಿಯಲ್ಲಿ 2 ಲಕ್ಷ
ಸ್ನೇಹಿತ ಮಣಿ ಎಂಬಾತನ ಜತೆ ಡಿಯೋ ಸ್ಕೂಟರ್‍ನಲ್ಲಿ ಬಂದ ಕುಮಾರನನ್ನು ಅಡ್ಡಗಟ್ಟಿದ ಅವಿನಾಶ್, ದಿನೇಶ್ ಹಾಗೂ ಪ್ಯಾಟ್ರಿಕ್ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಕುಮಾರ್ ಅವರ ಪತ್ನಿ ಡೋರಿನ್ ಅವರೇ ಪುಲಿಕೇಶಿ ನಗರ ಪೊಲೀಸರಿಗೆ ದೂರು ನೀಡಿದ್ದರು.
ಕೊಲೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕುಮಾರ್ ಮೊಬೈಲ್ ಕರೆಗಳನ್ನು ಪರಿಶೀಲಿಸಿ ಆತನಿಗೆ ಬಂದ ಕೊನೆಯ ಕರೆಯ ಮೇಲೆ ಕ್ಲಾರ ಹಾಗೂ ರೇವತಿ ಅವರನ್ನು ವಿಚಾರಣೆಗೊಳಪಡಿಸಿದ್ದು, ಅವರ ಪಾತ್ರ ಕೊಲೆಯಲ್ಲಿರುವುದು ಕಂಡುಬಂದರೆ ಅವರನ್ನೂ ಬಂಧಿಸಲಾಗುವುದು. ಡೋರಿನ್ ಸುಪಾರಿ ಹಣದಲ್ಲಿ ಕೇವಲ 2 ಲಕ್ಷ ಮುಂಗಡವಾಗಿ ಕೊಟ್ಟಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪ್ರವೀಣ್ ಸೂದ್ ತಿಳಿಸಿದರು.
ದಿನೇಶ್ ಬಂಧನದಿಂದ ಇಂದಿರಾನಗರದ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ದಿವ್ಯ ಅವರ ಮನೆಯಲ್ಲಿ ನಡೆದಿದ್ದ 19 ಲಕ್ಷ ರೂ.ಗಳ ಕಳ್ಳತನ ಪ್ರಕರಣ ಕೂಡ ಪತ್ತೆಯಾಗಿದೆ.
ಆರೋಪಿಗಳ ಬಂಧನದಿಂದ ಒಟ್ಟು 5 ಪ್ರಕರಣಗಳು ಪತ್ತೆಯಾಗಿದ್ದು, ಮಾರಕಾಸ್ತ್ರಗಳು, ಬೈಕ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ, ಹೇಮಂತ್ ಲಿಂಬಾಳ್ಕರ್, ಡಿಸಿಪಿಗಳಾದ ಲಾಬುರಾಮ್, ಅಜಯ್ ಹಿಲ್ಲೋರಿ,  ಡಾ. ಎಸ್.ಬಿ ಶರಣಪ್ಪ ಅವರಿದ್ದರು.

Links :
ಸಂಬಂಧಿತ ಟ್ಯಾಗ್ಗಳು

1 1 1 1


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ