ಸಂಪುಟಸಭೆ ನಂತರ ಟಿಬಿಜೆ ಮಾತು

T.B. Jayachandra after cabinet meeting

11-12-2017

ಬೆಂಗಳೂರು: ರಾಜ್ಯಾದ್ಯಂತ ಬಡವರಿಗೆ ಉಚಿತವಾಗಿ ನೀಡಲಾಗುತ್ತಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ರೈತರ 10 ಅಶ್ವಶಕ್ತಿ ಸಾಮರ್ಥ್ಯದ ಪಂಪ್‍ ಸೆಟ್‍ಗಳಿಗೆ ಉಚಿತವಾಗಿ ನೀಡಲಾಗುತ್ತಿರುವ ವಿದ್ಯುತ್‍ಗೆ ಸಂಬಂಧಿಸಿದಂತೆ 12,553 ಕೋಟಿ ರೂ ಸಹಾಧಯವನ್ನು ವಿದ್ಯುತ್ ವಿತರಣಾ ಕಂಪೆನಿಗಳಿಗೆ ಒದಗಿಸಲು ಸರ್ಕಾರ ತೀರ್ಮಾನಿಸಿದೆ.

2017-18 ನೇ ಸಾಲಿಗೆ ಸಂಬಂಧಿಸಿದಂತೆ ಈ ಪ್ರಮಾಣದ ಹಣವನ್ನು ವಿದ್ಯುತ್ ಕಂಪನಿಗಳಿಗೆ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಪ್ರಕಟಿಸಿದರು. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತ್ಯಾಜ್ಯ ನೀರಿನ ಮರುಬಳಕೆ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು ಬೆಂಗಳೂರಿನ ನಂತರ ಇದೇ ಮೊದಲ ಬಾರಿ ಎಲ್ಲ ಜಿಲ್ಲೆಗಳಲ್ಲಿ ತ್ಯಾಜ್ಯ ನೀರನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವಿವರ ನೀಡಿದರು. ಬೆಂಗಳೂರಿಗೆ ಕಾವೇರಿಯಿಂದ ಹದಿನೆಂಟರಿಂದ ಹತ್ತೊಂಭತ್ತು ಟಿಎಂಸಿ ನೀರನ್ನು ತರಲಾಗುತ್ತಿದ್ದು ಇದನ್ನು ಬಳಸಿದ ನಂತರ ಸುಮಾರು ಹನ್ನೊಂದು ಟಿಎಂಸಿ ತ್ಯಾಜ್ಯ ನೀರು ಉಳಿಕೆಯಾಗುತ್ತಿದೆ.ಹೀಗಾಗಿ ಅದನ್ನು ಸಂಸ್ಕರಿಸಿ ಚಿಕ್ಕಬಳ್ಳಾಪುರ,ಕೋಲಾರ,ಆನೇಕಲ್‍ಗಳಿಗೆ ಪೂರೈಕೆ ಮಾಡುವ ಕೆಲಸ ಚಾಲ್ತಿಯಲ್ಲಿದೆ.

ಈ ಯೋಜನೆಯಡಿ ಸುಮಾರು ಇನ್ನೂರೈವತ್ತಾರು ಕೆರೆಗಳನ್ನು ಭರ್ತಿ ಮಾಡುವ ಕೆಲಸ ಚಾಲ್ತಿಯಲ್ಲಿದ್ದು ಇದೇ ರೀತಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಎದುರಾಗಬಹುದಾದ ಕೊರತೆಯನ್ನು ನೀಗಿಸುವ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಿಕೊಳ್ಳುವ ಕೆಲಸ ನಡೆಯಬೇಕಿದೆ ಎಂದರು. ಈ ಸಂಬಂಧ ಕಾರ್ಯನೀತಿಯೊಂದನ್ನು ರೂಪಿಸಬೇಕಾದ ಅಗತ್ಯವನ್ನು ಮನಗಂಡು ಆ ದಿಸೆಯಲ್ಲಿ ಕೆಲಸ ನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು. ಇದೇ ರೀತಿ ಕೆ-ಷಿಪ್ ಮೂರನೇ ಹಂತದ ಯೋಜನೆಯಡಿ 418 ಕಿಲೋಮೀಟರು ರಸ್ತೆಯನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು ಇದಕ್ಕಾಗಿ 5334 ಕೋಟಿ ರೂ ಹಣವನ್ನು ವೆಚ್ಚ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಕೊಳ್ಳೇಗಾಲ-ಹನೂರು ನಡುವೆ ದ್ವಿಪಥ ರಸ್ತೆ ನಿರ್ಮಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದ ಅವರು,ಹಾಗೆಯೇ ಬೆಂಗಳೂರಿನ ನಾಗವಾರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸೇವೆಯನ್ನು ಒದಗಿಸಲು ತೀರ್ಮಾನಿಸಲಾಗಿದ್ದು ಇದಕ್ಕೂ ಐದು ಸಾವಿರ ಕೋಟಿ ರೂಗಳಿಗಿಂತ ಹೆಚ್ಚು ವೆಚ್ಚವಾಗಲಿದೆ ಎಂದು ಹೇಳಿದರು.

ಸುಮಾರು ಮೂವತ್ತು ಕಿಲೋಮೀಟರುಗಳಷ್ಟು ಉದ್ದದ ಮೆಟ್ರೋ ರೈಲು ಕಾಮಗಾರಿ ನಡೆಯಲಿದ್ದು ಏಳು ನಿಲ್ದಾಣಗಳು ಸ್ಥಾಪನೆಗೊಳ್ಳಲಿವೆ.ಒಟ್ಟಿನಲ್ಲಿ 2021 ರ ವೇಳೆಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ನಗರ ಪ್ರದೇಶಗಳಲ್ಲಿ ತರಕಾರಿ ಬೆಳೆಯುವುದು ಸೇರಿದಂತೆ ತರಕಾರಿ ಮತ್ತು ಕೃಷಿಗೆ ಹೆಚ್ಚು ಉತ್ತೇಜನ ನೀಡಲು ತೀರ್ಮಾನಿಸಲಾಗಿದೆ.ಇದಕ್ಕಾಗಿ ರಚನೆಯಾದ ವಿಷನ್ ಗ್ರೂಪ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಎಲ್ಲ ಸರ್ಕಾರಿ ಮತ್ತು ಅರೆಸರ್ಕಾರಿ ವಲಯದ ಮುನ್ನೂರಕ್ಕೂ ಹೆಚ್ಚು ಸೇವೆಗಳು ಒಂದೇ ಸೂರಿನಡಿ ಸಿಗಬೇಕು ಎಂಬ ಉದ್ದೇಶದಿಂದ ಪೋರ್ಟಲ್ ಒಂದನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯದ ಸರ್ಕಾರಿ ನೇತ್ರ ಚಿಕಿತ್ಸಾಲಯಗಳಿಗೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲು 8.6 ಕೋಟಿ ರೂ ಒದಗಿಸಲು ಸರ್ಕಾರ ನಿರ್ಧರಿಸಿದೆ.ಅದೇ ರೀತಿ ನೇತ್ರ ವೈದ್ಯರು ತಿಂಗಳಿಗೆ ಕನಿಷ್ಟವೆಂದರೂ 75 ರೋಗಿಗಳ ಕಣ್ಣಿನ ಪೊರೆಯನ್ನು ತೆಗೆಯುವ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು. ಚಲನಚಿತ್ರ ಅಮೃತೋತ್ಸವ ಭವನ ನಿರ್ಮಾಣ ಸಂಬಂಧ ಹದಿಮೂರು ಕೋಟಿ ರೂಗಳನ್ನು ಒದಗಿಸಲು ತೀರ್ಮಾನಿಸಲಾಗಿದ್ದು ಒಟ್ಟಾರೆಯಾಗಿ ಇಪ್ಪತ್ತೆರಡು ಕೋಟಿ ರೂಗಳನ್ನು ವೆಚ್ಚ ಮಾಡಲಾಗುವುದು ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ