ರವಿ ಬೆಳಗೆರೆಗೆ ನ್ಯಾಯಾಂಗ ಬಂಧನ

Judicial custody to Ravi Belagere

11-12-2017 261

ಬೆಂಗಳೂರು:  ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿರುವ ಕೃತ್ಯದಲ್ಲಿ ಬಂಧಿತರಾಗಿರುವ ಹಿರಿಯ ಪತ್ರಕರ್ತ ರವಿಬೆಳೆಗೆರೆಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು ಇಂದಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುವಂತಾಗಿದೆ.
ಸುಪಾರಿ ನೀಡಿದ ಪ್ರಕರಣದಲ್ಲಿ ಕಳೆದ ಡಿ.8ರಂದು ಬಂಧಿಸಿ ಅಂದು ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 4 ದನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿದ್ದ ರವಿ ಬೆಳಗೆರೆ ಅವರ ಪೊಲೀಸ್ ಕಸ್ಟಡಿ ಇಂದು ಮುಗಿದಿದ್ದರಿಂದ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನಗರದ 1ನೇ ಎಸಿಎಂಎಂ ನ್ಯಾಯಾಲಕ್ಕೆ ಹಾಜರಾದ ರವಿಬೆಳಗೆರೆ ಅವರನ್ನು ನ್ಯಾಯಮೂರ್ತಿ ಜಗದೀಶ್ ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಅಲ್ಲಿಂದ ನೇರವಾಗಿ ಪರಪ್ಪನ ಅಗ್ರಹಾರ ಜೈಲಿಗೆ ರವಿ ಬೆಳಗೆರೆಯನ್ನು ಕರೆದೊಯ್ಯಲಾಗಿದ್ದು ಈ ತಿಂಗಳ 23ರವರೆಗೆ ಅವರು ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ರವಿ ಬೆಳಗೆರೆ ವಿರುದ್ಧ ಸುಪಾರಿ ನೀಡಿದ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರು 307 ಕೊಲೆಯತ್ನ ಹಾಗೂ 120ಬಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ. ಇದಲ್ಲದೆ ಮನೆಯಲ್ಲಿ ಜಿಂಕೆ ಚರ್ಮ ಆಮೆ ಚಿಪ್ಪು ಸಿಕ್ಕಿರುವುದರಿಂದ ವನ್ಯ ಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕೂಡ ಪ್ರಕರಣ ದಾಖಲಾಗಿದೆ.
ಆಳಿಯ ಶ್ರೀನಗರ ಕಿಟ್ಟಿ ನಿನ್ನೆ ರಾತ್ರಿ ತಂದಿದ್ದ ಊಟವನ್ನ ಸೇವಿಸಿ ಸಿಸಿಬಿ ಅಧಿಕಾರಿಗಳ ವಿಚಾರಣೆ ಎದುರಿಸಿ ಮಲಗಿದ್ದ ರವಿ ಬೆಳೆಗೆರೆ ಪೊಲೀಸ್ ಕಸ್ಟಡಿ ಇಂದಿಗೆ ಮುಗಿಯಲಿದ್ದರಿಂದ ಬೆಳಗ್ಗೆ 6 ಗಂಟೆಗೆ ಎದ್ದು ಸಿಸಿಬಿ ಸಿಬ್ಬಂದಿ ತಂದಿದ್ದ ಶುಗರ್ ಲೆಸ್ ಕಾಫಿ ಕುಡಿದು ಸಿಗರೇಟ್ ಸೇದಿ ರಿಲ್ಯಾಕ್ಸ್ ಮೂಡ್‍ ನಲ್ಲಿದ್ದರು.
ಬೆಳಿಗ್ಗೆ 10ರ ವೇಳೆ ಸಿಸಿಬಿ ಸಿಬ್ಬಂದಿ ಬೆಳಗೆರೆಯವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಬಿಗಿ ಭದ್ರತೆಯೊಂದಿಗೆ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಮಧ್ಯಾಹ್ನ 12ರ ವೇಳೆಗೆ ಸಿಸಿಬಿ ಪೊಲೀಸರು ಹಾಜರು ಪಡಿಸಿದರು.
ವಿಚಾರಣೆಗೆ ಬೆಳಗೆರೆ ಅವರು ಹಾಜರಾದ ನಂತರ ಮಧ್ಯಾಹ್ನ 1ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಮೂರ್ತಿ ಜಗದೀಶ್ ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ವಿಚಾರಣೆಯನ್ನು ಡಿ.23ಕ್ಕೆ ಮುಂದೂಡಿದರು. ಬೆಳಗೆರೆಯ ಪರವಾಗಿ ಹಿರಿಯ ವಕೀಲ ದಿವಾಕರ್ ವಾದಿಸಿದರು.

ಹೆಗ್ಗರವಳ್ಳಿ ದೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಸುಪಾರಿ ಪ್ರಕರಣದ ಸಂಬಂಧ ರವಿ ಬೆಳಗೆರೆ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ನಿನ್ನೆ ರವಿ ಬೆಳಗೆರೆ ಸುನೀಲ್ ಹೆಗ್ಗರವಳ್ಳಿಗೆ ಕರೆ ಮಾಡಿ 'ಯಶೋಮತಿಗೂ ನಿನಗೂ ಸಂಬಂಧ ಇದೆ ಎಂದು ಟಿವಿಯಲ್ಲಿ ನೀನು ಹೇಳಿದ್ಯಾ' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರವಾಗಿ ಸುನೀಲ್ ಹೆಗ್ಗರವಳ್ಳಿ ' ನಾನ್ಯಾಕೆ ಹೇಳಲಿ ಸಂಬಂಧ ಇದೆ ಅಂತ, ಇದ್ದಿದ್ದರೆ ತಾನೆ ಹೇಳೋದು' ಎಂದು ಪ್ರತಿಕ್ರಿಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸುನೀಲ್ ಹೆಗ್ಗರವಳ್ಳಿ ಇಂದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಹೋಗಿ ರವಿ ಬೆಳಗೆರೆ ವಿರುದ್ಧ ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣವನ್ನು ಬೆಳಗೆರೆ ಎದುರಿಸುವಂತಾಗಿದೆ. ದೂರು ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ಹೆಗ್ಗರವಳ್ಳಿ, ನಿನ್ನೆ ರಾತ್ರಿ 9.30 ರ ಸಮಯದಲ್ಲಿ ರವಿ ಬೆಳಗೆರೆ ಅವರು ಮಧು ಎಂಬುವರ ಫೋನ್‍ನಿಂದ ಕರೆ ಮಾಡಿ ಮಾತನಾಡಿದ್ದಾರೆ. ಸಿಸಿಬಿ ಕಸ್ಟಡಿಯಲ್ಲಿರುವಾಗ ಆರೋಪಿ ಮೊಬೈಲ್ ಬಳಸಲು ಅವಕಾಶ ನೀಡಿದ್ದು ಯಾಕೆ..? ಈ ಬಗ್ಗೆ ತನಿಖೆ ನಡೆಯಬೇಕು. ಅದಕ್ಕಾಗಿಯೇ ಸುಬ್ರಹ್ಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದೇನೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯುವ ವಿಶ್ವಾಸವಿದೆ ಎಂದಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ