ಕೆಪಿಸಿಸಿಯಲ್ಲಿ ವೀರಪ್ಪ ಮೊಯಿಲಿ ಸುದ್ದಿಗೋಷ್ಠಿ

11-12-2017 339
ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಸಂಸದ ಹಾಗು ರಾಜ್ಯ ಕಾಂಗ್ರೆಸ್ ನ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರುವ ಡಾ.ಎಂ.ವೀರಪ್ಪ ಮೊಯಿಲಿ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಪ್ರಣಾಳಿಕೆ ಸಮಿತಿ ರಚನೆ ಬಳಿಕ ಆರು ಪ್ರದೇಶಗಳಲ್ಲಿ ಸಭೆ ನಡೆಸಲಾಗಿದೆ, ಎಲ್ಲಾ ಜಿಲ್ಲೆಗಳ ವಿವಿಧ ವಿಭಾಗಗಳ ಪ್ರತಿನಿಧಿಗಳ ಜೊತೆ ಸಮಾಲೋಚನೆ ಮಾಡಿದ್ದೇವೆ, ಕೈಗಾರಿಕಾ ಮತ್ತು ವಾಣಿಜ್ಯ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.
ಇಂದು ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ಇದೆ, ಈ ಸಭೆ ಮಧ್ಯಾಹ್ನ ನಡೆಯಲಿದೆ, ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ಉದ್ಯಮಿಗಳೊಂದಿಗೆ ಪ್ರತ್ಯೇಕ ಚರ್ಚೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು. ಅಲ್ಲದೇ ಜನವರಿ 11 ರಂದು ಪ್ರಣಾಳಿಕೆ ಸಮಿತಿಯ ಪ್ರಮುಖ ಸಭೆ ನಡೆಯಲಿದ್ದು, ಈ ಸಭೆ ಬಳಿಕ ಪ್ರಣಾಳಿಕೆಯ ಸ್ವರೂಪದ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದರು.
ನವ ಕರ್ನಾಟಕ ವಿಷನ್ ಬಗ್ಗೆ, ಪ್ರಣಾಳಿಕೆಯಲ್ಲಿ ಅಡಕ ಮಾಡುತ್ತೇವೆ, 30 ಜಿಲ್ಲೆಗಳಲ್ಲೂ ನವ ಕರ್ನಾಟಕ ವಿಷನ್ ಸಿದ್ಧಪಡಿಸಲಾಗಿದೆ, ಅದಲ್ಲದೇ ಬಿ.ಎಲ್.ಶಂಕರ್ ನೇತೃತ್ವದಲ್ಲಿ ಹಿಂದಿನ ಚುನಾವಣಾ ಪ್ರಣಾಳಿಕೆಯ ಪರಾಮರ್ಶೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಪ್ರಣಾಳಿಕೆಯಲ್ಲಿ ಉಲ್ಲೇಖಿಸುವ ಸರಕಾರದ ಕಾರ್ಯಕ್ರಮಗಳನ್ನು ವೆಬ್ ಸೈಟ್ ನಲ್ಲಿ ಹಾಕಲಿದ್ದೇವೆ, ಪ್ರತಿಬಿಂಬ ಹೆಸರಿನಲ್ಲಿ ಪ್ರಣಾಳಿಕೆಯಲ್ಲಿರುವ ಕಾರ್ಯಕ್ರಮಗಳ ವಿವರ, ಕಳೆದ ಸಲದ ಪ್ರಣಾಳಿಕೆಯ ಉಳಿದ ಕಾರ್ಯಕ್ರಮಗಳನ್ನು ಸಪ್ಲಿಮೆಂಟರಿ ಬಜೆಟ್ ನಲ್ಲಿ ಸೇರ್ಪಡೆ ಮಾಡಲಿದ್ದೇವೆ ಎಂದರು. ಕಳೆದ ನಾಲ್ಕೂವರೆ ವರ್ಷದಲ್ಲಿ 5 ಕೋಟಿ ಜನರಿಗೆ ಪ್ರಯೋಜನವಾಗುವ ವಿಶೇಷ ಕಾರ್ಯಕ್ರಮಗಳು ಜಾರಿಯಾಗಿದೆ, ರಾಜ್ಯದ ಜನ ಈ ಕಾರ್ಯಕ್ರಮಗಳ ಪ್ರಯೋಜನ ಪಡೆದಿದ್ದಾರೆ, ಕ್ಷೀರಭಾಗ್ಯ, ವಸತಿ, ಪಶು ಭಾಗ್ಯ, ಇಂದಿರಾ ಕ್ಯಾಂಟೀನ್, ರೈತರ ಸಾಲ ಮನ್ನಾ ಇತ್ಯಾದಿ ಜನಪರ ಕಾರ್ಯಕ್ರಮಗಳ ಜಾರಿ ಮಾಡಲಾಗಿದೆ ಎಂದರು.
ಕೇಂದ್ರ ಸರಕಾರ ಇದುವರೆಗೂ ಬರಪೀಡಿತ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ, ಆದರೆ ರಾಜ್ಯ ಸರಕಾರದಿಂದ ರೈತರ 50 ಸಾವಿರವರೆಗಿನ ಸಾಲ ಮನ್ನಾ ಆಗಿದೆ. 3 ಲಕ್ಷದ ವರೆಗೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಮನ್ನಾ ನೀಡುವ ಕಾರ್ಯಕ್ರಮ ಜಾರಿಯಲ್ಲಿದೆ ಮತ್ತು ಪ್ರತಿ ಲೀಟರ್ ಹಾಲಿಗೆ 5 ರೂ ರಿಯಾಯ್ತಿ ನೀಡಲಾಗ್ತಿದೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲದ ವಿತರಣೆ ಮಾಡಲಾಗ್ತಿದೆ ಎಂದು ಹೇಳಿದರು. ನಮ್ಮ ಪ್ರಣಾಳಿಕೆ ಜನಪರವಾಗಿರಲಿದೆ, ಐದು ಪ್ರಮುಖ ಕಾರ್ಯಕ್ರಮಗಳಿವೆ, ಆರ್ಥಿಕ, ಸಾಮಾಜಿಕವಾಗಿ ಆಮೂಲಾಗ್ರ ಬದಲಾವಣೆಯಾಗುವ ಕಾರ್ಯಕ್ರಮಗಳಿವೆ ಎಂದು ತಮ್ಮ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ರೂಪುರೇಷಗಳ ಬಗ್ಗೆ ಮಾಹಿತಿ ನೀಡಿದರು.
ಒಂದು ಕಮೆಂಟನ್ನು ಹಾಕಿ