ಮಹತ್ವದ ಸಚಿವ ಸಂಪುಟ ಸಭೆ ಇಂದು

Important cabinet meeting today

11-12-2017

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದ್ದು, ವಿಧಾನಸೌಧದಲ್ಲಿ ನಡೆಯುವ ಸಭೆಯಲ್ಲಿ, 31 ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ರಾಜ್ಯದ ರೈತರ ಉಪಯೋಗಕ್ಕಾಗಿ ವಿಶೇಷ ಕೃಷಿ ಉತ್ಪನ್ನ ವಲಯಗಳನ್ನು ಗುರುತಿಸಿ ರಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಬೀದರ್ ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಈ ಸಾಲಿನಲ್ಲಿ 10 ಕೋಟಿ ರೂ.ಬ್ಯಾಂಕ್ ಸಾಲ ಪಡೆಯಲು ಸರ್ಕಾರಿ ಖಾತರಿ ನೀಡುವ ಬಗ್ಗೆ ಚರ್ಚೆ ಮತ್ತು ರಾಜ್ಯದಲ್ಲಿ ಸೇವಾ ಸಿಂಧು ಯೋಜನೆ ಆರಂಭಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ರಾಜ್ಯ ಸರಕಾರಿ ಜೀವ ವಿಮಾ ಇಲಾಖೆಯ ವಿಮಾದಾರರಿಗೆ 2012-14 ರ ದ್ವೈವಾರ್ಷಿಕ ಅವಧಿಗೆ ಬೋನಸ್ ಘೋಷಿಸುವ ಬಗ್ಗೆ, ಮತ್ತು  ಚಿಕ್ಕಮಗಳೂರಿನ ಮಸ್ಕಲಿ ಮತ್ತು ಸರಗೋಡು ಮೀಸಲು ಅರಣ್ಯ ಪ್ರದೇಶದ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿಗೆ 20 ಕೋಟಿಯ ವಿಶೇಷ ಪ್ಯಾಕೇಜ್ ಕಾರ್ಯಗತಗೊಳಿಸುವು ಕುರಿತು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ.

ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ಒಪಿಡಿ ಬ್ಲಾಕ್ ಕಟ್ಟಡದ ಮೇಲೆ 30 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡಗಳ ನಿರ್ಮಾಣ, ಜಿಲ್ಲೆ, ತಾಲ್ಲೂಕು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇತ್ರ ವಿಭಾಗದ ಉಪಕರಣ ಮತ್ತು ಸಲಕರಣೆಗಳನ್ನು 8 ಕೋಟಿ ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ ನೀಡುವ  ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ವಿಜಯಪುರದಲ್ಲಿ 20 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಮತ್ತು ಕೂಡು ರಸ್ತೆ ನಿರ್ಮಿಸಲು ಯೋಜನೆ, 2500 ಗ್ರಾಮ ಪಂಚಾಯ್ತಿಗಳಲ್ಲಿ ವೈಫೈ ಸೇವೆಗಳ ನಿಯೋಜನೆಗೆ ಹೊರಡಿಸಿರುವ ಆದೇಶದ ಬಗ್ಗೆಯು ಚರ್ಚೆಗೆ ಬರಲಿದೆ. ಕನ್ನಡ ಚಿತ್ರರಂಗದಲ್ಲಿ ಅಮೃತ ಮಹೋತ್ಸವ ಭವನ ನಿರ್ಮಾಣಕ್ಕೆ 22.84 ಕೋಟಿ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ, ಸ್ಮಾರ್ಟ್ ಸಿಟಿ ಅಭಿಯಾನದಡಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವಿಶೇಷ ಉದ್ದೇಶಿತ ವಾಹನಕ್ಕೆ ಅಧಿಕಾರ ಪ್ರತ್ಯಾಯೋಜನೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಸಾಗರ ಪಟ್ಟಣದಲ್ಲಿ ಒಳಚರಂಡಿ ಗೃಹ ಸಂಪರ್ಕ ಯೋಜನೆಗೆ 25.95 ಕೋಟಿ ರೂ, ಬಳ್ಳಾರಿಯ ಸಂಡೂರಿನಲ್ಲಿ 87.14 ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆ, ಮತ್ತು ನಗರ ತ್ಯಾಜ್ಯ ನೀರಿನ ಮರುಬಳಕೆಯ ಕಾರ್ಯನೀತಿಗೆ ಅನುಮೋದನೆ ನೀಡುವ ಸಾಧ್ಯತೆಗಳಿವೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹಣಕಾಸು ಸಂಸ್ಥೆಗಳಿಂದ 350 ಕೋಟಿ ರೂ ಸಾಲ ಪಡೆಯಲು ಸರಕಾರದ ಖಾತರಿ, ಕಣ್ವ ಜಲಾಶಯದ ಯೋಜನೆಯಡಿ ಬರುವ ನಾಲೆಗಳ ಆಧುನೀಕರಣ ಕಾಮಗಾರಿಗಳ 30.50 ಕೋಟಿ ಮೊತ್ತದ ಡಿಪಿಆರ್ ವರದಿ, ಬನವಾಸಿ ಏತ ನೀರಾವರಿ ಯೋಜನೆಗೆ 62.58 ಕೋಟಿ ರೂ ಮೊತ್ತದ ಡಿಪಿಆರ್ ವರದಿಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ಕುಲಹಳ್ಳಿ-ಹುನ್ನೂರು ಏತನೀರಾವರಿ ಯೋಜನೆಗೆ 73.75 ಕೋಟಿಯ ಡಿಪಿಆರ್ ಗೆ ಒಪ್ಪಿಗೆ ಸಾಧ್ಯತೆಯಿದ್ದು, ಪಶ್ಚಿಮ ವಾಹಿನಿ ಎಂಬ ಹೊಸ ಯೋಜನೆ 200 ಕೋಟಿ ಅಂದಾಜಿನಲ್ಲಿ ಕೈಗೆತ್ತಿಕೊಳ್ಳಲು ಯೋಜನೆ, 2018-19 ನೇ ಸಾಲಿಗೆ ಭಾಗ್ಯಜ್ಯೋತಿ, ಕುಟೀರಜ್ಯೋತಿ ಮತ್ತು 10 ಹೆಚ್ಪಿ ವರೆಗಿನ ನೀರಾವರಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಸಲು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಸಹಾಯಧನ ನೀಡಲು ಒಪ್ಪಿಗೆ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ