ಮಾಧ್ಯಮದ ಲೀಲೆ…ಅದೃಷ್ಟದ ಮಾಲೆ!

09-12-2017
ಹೋದ ವರ್ಷ ಆಗಸ್ಟ್ ತಿಂಗಳಲ್ಲಿ ಒಡಿಶಾ ರಾಜ್ಯದ ಒಬ್ಬ ವ್ಯಕ್ತಿ, ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ತನ್ನ ಊರಿಗೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯಾವಳಿಯನ್ನು ಟಿವಿಗಳಲ್ಲಿ ನೋಡಿದ ನೆನಪಿದೆಯೇ ನಿಮಗೆ?
ಆಂಬುಲೆನ್ಸ್ ಗೆ ಹಣ ನೀಡಲು ಶಕ್ತಿಯಿಲ್ಲದ ಕಾರಣ, ಭವಾನಿ ಪಟ್ಟಣದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಪತ್ನಿ ಶವವನ್ನು ಹೆಗಲಿಗೇರಿಸಿ, 12 ವರ್ಷದ ಮಗಳೊಂದಿಗೆ 50 ಕಿ.ಮೀ ದೂರದ ಮೇಲ್ಘಾರ ಎಂಬ ಊರಿನ ಕಡೆಗೆ ನಡೆಯುತ್ತಾ ಹೊರಟಿದ್ದ ದಾನಾ ಮಾಜ್ಹಿ ಎಂಬ ಬಡ ರೈತನ ಆ ಕರುಣಾಜನಕ ಕಥೆ, ಮಾಧ್ಯಮಗಳ ಮೂಲಕ ಇಡೀ ದೇಶ ಮತ್ತು ಜಗತ್ತನ್ನೇ ತಲುಪಿತ್ತು, ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿತ್ತು.
ಆದರೆ, ಆ ಘಟನೆ ನಡೆದು ಒಂದು ವರ್ಷಕ್ಕೂ ಹೆಚ್ಚು ಸಮಯ ಆಯಿತು. ಇದೀಗ ದಾನಾ ಮಾಜ್ಹಿಯ ಬದುಕು ಸಂಪೂರ್ಣವಾಗಿ ಬದಲಾಗಿದೆ. ಆ ಹೊತ್ತಿನ ಅಸಹಾಯಕ ವ್ಯಕ್ತಿ ಇವತ್ತು ಅನುಕೂಲಸ್ಥನಾಗಿ ಬದಲಾಗಿದ್ದಾನೆ. ಇವತ್ತು, ಆತ ಪ್ರಧಾನ್ ಮಂತ್ರಿ ಗ್ರಾಮೀಣ್ ವಿಕಾಸ್ ಯೋಜನೆ ಅಡಿ ಪಡೆದ ಸ್ವಂತ ಮನೆಯಲ್ಲಿ ವಾಸವಿದ್ದಾನೆ. ಆತ, ಹೊಚ್ಚ ಹೊಸ ಬೈಕ್ ಖರೀದಿಸಿದ್ದಾನೆ. ಅವನ ಮೂವರು ಹೆಣ್ಣು ಮಕ್ಕಳು ಭುವನೇಶ್ವರದ ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಒಂದು ಕಾಲದಲ್ಲಿ ಬ್ಯಾಂಕ್ ಅಕೌಂಟೇ ಇಲ್ಲದವನಾಗಿದ್ದ ದಾನಾ ಮಾಜ್ಹಿ, ಇವತ್ತು ಬ್ಯಾಂಕಿನಲ್ಲಿ ಒಂದಷ್ಟು ಲಕ್ಷಗಳ ಹಣವನ್ನು ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದಾನೆ. ಬಹ್ರೇನ್ ದೇಶದ ಪ್ರಧಾನಿ ಈತನಿಗೆ 9 ಲಕ್ಷ ರೂಪಾಯಿಗಳ ಹಣ ಸಹಾಯ ಮಾಡಿದ್ದರು. ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ತಮ್ಮಿಂದಾದ ನೆರವು ನೀಡಿದ್ದವು. ಅದೆಲ್ಲದರ ಫಲವಾಗಿ, ದಾನಾ ಮಾಜ್ಹಿ ಇಂದು ಅನುಕೂಲಸ್ಥ ನಾಗರಿಕನಾಗಿ ಬದಲಾಗಿದ್ದಾನೆ.
ಮತ್ತೊಂದು ವಿಚಾರವೆಂದರೆ, ಹೆಂಡತಿಯ ಶವ ಹೆಗಲ ಮೇಲೆ ಹೊತ್ತು ನಡೆಯುವ ಮೂಲಕ ಸುದ್ದಿಯಾಗಿದ್ದ ಮಾಜ್ಹಿಗೆ, ಹೊಸ ಹೆಂಡತಿಯೂ ಸಿಕ್ಕಿದ್ದಾಳೆ. ನಿಜವಾಗಿಯೂ ಇದೆಲ್ಲದಕ್ಕೂ ಮಾಧ್ಯಮದ ಮಹಿಮೆಯೇ ಕಾರಣ ಎನ್ನಬಹುದು. ಮಾಧ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಸಾರವಾದ ಕರುಳು ಕಿತ್ತು ಬರುವ ಆ ದೃಶ್ಯ ಎಲ್ಲರ ಮನುಷ್ಯತ್ವವನ್ನೇ ಅಲುಗಿಸಿಬಿಟ್ಟಿತ್ತು. ಸರ್ಕಾರಗಳು, ಸಂಸ್ಥೆಗಳ ಗಮನ ಸೆಳೆದಿತ್ತು, ಒಂದು ವೇಳೆ, ಆ ಘಟನೆ ನಡೆದೂಕೂಡ ವರದಿಯಾಗಿರದಿದ್ದರೆ, ದಾನಾ ಮಾಜ್ಹಿ ಎಂಬ ಆ ವ್ಯಕ್ತಿಯ ಕತೆ, ಈ ಹೊತ್ತು ಮತ್ತೆ ನಿಮ್ಮ ಮುಂದೆ ಖಂಡಿತಾ ಬರುತ್ತಿರಲಿಲ್ಲ. ಮಾಧ್ಯಮವೇ ಏನು ನಿನ್ನ ಮಹಿಮೆ?
ಒಂದು ಕಮೆಂಟನ್ನು ಹಾಕಿ