'ರಾಜ್ಯಾದ್ಯಂತ ವಿವಿಗಳಲ್ಲಿ ಏಕರೂಪ ಅಂಕಪಟ್ಟಿ'

Uniform marks card in universities across the state

07-12-2017

ಬೆಂಗಳೂರು: ರಾಜ್ಯಾದ್ಯಂತ ಇನ್ನು ಮುಂದೆ ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಏಕರೂಪದ ಅಂಕಪಟ್ಟಿಯನ್ನು ಒದಗಿಸುವಂತೆ ಸೂಚನೆ ನೀಡುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯಗಳು ನೀಡುವ ಅಂಕಪಟ್ಟಿಯಲ್ಲಿ ಏಕರೂಪವಿಲ್ಲ. ಅದಕ್ಕಾಗಿ ಏಕರೂಪದ ದರವೂ ನಿಗದಿಯಾಗಿಲ್ಲ ಎಂಬ ಆರೋಪವನ್ನು ಒಪ್ಪಿಕೊಂಡರು. ಆದರೆ ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ನಕಲಿ ಅಂಕಪಟ್ಟಿ ಹಗರಣ ನಡೆದಿದೆ. ಕಪ್ಪು ಪಟ್ಟಿಗೆ ಸೇರಿದ ಕಂಪನಿಗಳಿಂದ ಪಡೆದ ಪೇಪರುಗಳಲ್ಲಿ ಅಂಕಪಟ್ಟಿಯನ್ನು ಮುದ್ರಿಸಲಾಗಿದೆ ಎಂಬುದಕ್ಕೂ ತಮ್ಮ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದರು.

ಅಂಕಪಟ್ಟಿಯನ್ನು ತಯಾರಿಸುವುದು, ವಿತರಿಸುವುದು ವಿಶ್ವವಿದ್ಯಾನಿಲಯದ ಕೆಲಸ. ಆದರ ಪ್ರಕಾರ ಈ ಬಾರಿ ಆರು ವಿವಿಗಳು ಎಂ.ಎಸ್.ಐ.ಎಲ್ ಸೂಚಿಸಿದ ಕಂಪನಿಗಳ ಮೂಲಕ ಹದಿನೆಂಟು ರೂಗಳಿಂದ ಮೂವತ್ತಾರು ರೂಗಳ ಪೇಪರುಗಳನ್ನು ಖರೀದಿಸಿ ಅಂಕಪಟ್ಟಿ ಮುದ್ರಿಸಿದ್ದಾರೆ.

ಎಂ.ಎಸ್.ಐ.ಎಲ್ ಸರ್ಕಾರದ ಸಂಸ್ಥೆ. ಅದು ಆರ್.ಬಿ.ಐ ನಿಯಮಾವಳಿಯ ಪ್ರಕಾರವೇ ದೇವರ್ಸ್ ಎಂಬ ಕಂಪನಿ ಸೇರಿದಂತೆ ಮೂರು ಕಂಪನಿಗಳಿಗೆ ಅಂಕಪಟ್ಟಿ ತಯಾರಿಸಲು ಅಗತ್ಯವಾದ ಪೇಪರ್ ಒದಗಿಸಲು ಸೂಚನೆ ನೀಡಿದೆ. ಉಳಿದಂತೆ ಹಲವು ವಿಶ್ವವಿದ್ಯಾನಿಲಯಗಳು ಅದನ್ನು ಖರೀದಿಸಿಲ್ಲ. ಈ ಹಿಂದೆ ದುಬಾರಿ ದರ ತೆತ್ತು ಅಂಕಪಟ್ಟಿ ರೂಪಿಸುವ ಪೇಪರುಗಳನ್ನು ಖರೀದಿ ಮಾಡಲಾಗುತ್ತಿತ್ತು, ಆದರೆ ಈಗ ಆ ದರ ಕಡಿಮೆಯಾಗುವಂತೆ ನೋಡಿಕೊಂಡಿದ್ದು ವಿಶ್ವವಿದ್ಯಾನಿಲಯಗಳಿಗೆ 2.25 ಕೋಟಿ ರೂ ಉಳಿತಾಯವಾಗಿದೆ ಎಂದರು.

ಈ ಹಿಂದೆ ರೂಪಿತವಾಗುತ್ತಿದ್ದ ಅಂಕಪಟ್ಟಿಗಳ ಗುಣಮಟ್ಟ ಕಡಿಮೆಯಿತ್ತು, ಹರಿದು ಹೋಗುವುದರಿಂದ ಹಿಡಿದು, ನೀರಿನಲ್ಲಿ ಬಿದ್ದರೆ ಹಾಳಾಗುವ ಮಟ್ಟಿಗೆ ಕೆಟ್ಟದಾಗಿತ್ತು, ಆದರೆ ಈಗ ಅಂಕಪಟ್ಟಿಗಳಿಗೆ ಬಳಸಲಾಗುತ್ತಿರುವ ಪೇಪರ್ ಹರಿಯುವುದೂ ಇಲ್ಲ, ನೀರಿನಲ್ಲಿ ಬಿದ್ದರೆ ಹಾಳಾಗುವುದೂ ಇಲ್ಲ ಎಂದು ವಿವರಿಸಿದರು. ಅಂಕಪಟ್ಟಿ ಹಗರಣದ ಕುರಿತು ಎನ್.ಎಸ್.ಯು.ಐ ಮುಖಂಡ ಮಂಜುನಾಥ್ ಅವರು ತಮ್ಮ ಗಮನಕ್ಕೆ ತರುವ ಬದಲು ಸುಖಾ ಸುಮ್ಮನೆ ಆರೋಪ ಮಾಡಿದ್ದಾರೆ. ತಮ್ಮನ್ನು ಹಲ ಬಾರಿ ಭೇಟಿ ಮಾಡಿದರೂ ಈ ವಿಷಯದ ಕುರಿತು ಪ್ರಸ್ತಾಪ ಮಾಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಈ ಹಿಂದೆ ತಮ್ಮನ್ನು ಭೇಟಿ ಮಾಡಿದಾಗ ಅವರು ವಿಟಿಯು ತಾಂತ್ರಿಕ ಕಾಲೇಜುಗಳಲ್ಲಿ ಫೇಲಾದ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಕೇಳಿಕೊಳ್ಳಲು ಬಂದಿದ್ದರು, ಆದರೆ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಇದೇ ಕಾರಣಕ್ಕಾಗಿ ಅವರು ತಮ್ಮ ವಿರುದ್ಧ ಆರೋಪ ಮಾಡಿದರು ಎಂದು ನಾನು ಭಾವಿಸುವುದಿಲ್ಲ. ಆದರೆ ಅಂಕಪಟ್ಟಿ ರಚನೆಯಲ್ಲಿ ಹಗರಣ ನಡೆದಿದ್ದೇ ಆದರೆ ಎಂ.ಎಸ್.ಐ.ಎಲ್ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ತನಿಖೆ ನಡೆಸುವುದಾಗಿ ಹೇಳಿದರು. ನಾನು ರಾಜಕಾರಣಕ್ಕೆ ಬಂದಿರುವುದು ಜನಸೇವೆ ಮಾಡಲೇ ಹೊರತು ದುಡ್ಡು ಮಾಡಲು ಅಲ್ಲ. ಅದರ ಅಗತ್ಯವೂ ನನಗಿಲ್ಲ ಎಂದ ಸಂದರ್ಭದಲ್ಲಿ ಬಸವರಾಜ ರಾಯರೆಡ್ಡಿ ಭಾವೋದ್ವೇಗರಾದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ