ಕೃಷಿ ಇಲಾಖೆ ವಿರುದ್ಧ ಆಂಜನೇಯ ಗರಂ

Anjaneya disappoint Against Agriculture Department

07-12-2017

ಬೆಂಗಳೂರು: ಪರಿಶಿಷ್ಟ ಸಮುದಾಯದ  ಅಭಿವೃದ್ಧಿಗೆ ನೀಡಿದ ಹಣವನ್ನು ಕೃಷಿ ಇಲಾಖೆ ಉದ್ದೇಶ ಪೂರ್ವಕವಾಗಿ ಖರ್ಚು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ, ಈ ಸಂಬಂಧ ಕೃಷಿ ಇಲಾಖೆಗೆ ನೋಟೀಸ್ ಕೊಡಲು ನಿರ್ಧರಿಸಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ಕೃಷಿ ಇಲಾಖೆಯಲ್ಲಿ ಇಸ್ರೇಲ್, ಚೀನಾದಂತಹ ರಾಷ್ಟ್ರಗಳು ಸಾಧಿಸಿದ ಪ್ರಗತಿಯನ್ನು ಅರಿಯಲು ದಲಿತ ಕೃಷಿ, ಕೂಲಿ ಕಾರ್ಮಿಕರನ್ನು ವಿದೇಶಕ್ಕೆ ಕಳಿಸಲು ಸೂಚನೆ ನೀಡಲಾಗಿತ್ತು, ಹಣವನ್ನೂ ಒದಗಿಸಲಾಗಿತ್ತು, ಆದರೆ ಕೃಷಿ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಆ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ದಲಿತ ಕೃಷಿ, ಕೂಲಿ ಕಾರ್ಮಿಕರನ್ನು ವಿದೇಶಗಳಿಗೆ ಅಧ್ಯಯನಕ್ಕೆ ಕಳಿಸಿದ್ದರೆ ಅಲ್ಲಾಗಿರುವ ಪ್ರಗತಿಯನ್ನು ಕಣ್ಣಾರೆ ನೋಡಿ ಬರುತ್ತಿದ್ದರು. ಆ ಮೂಲಕ ವ್ಯವಸ್ಥೆಗೆ ಅವರಿಂದ ಅನುಕೂಲವಾಗುತ್ತಿತ್ತು. ಆದರೆ ಕಳೆದ ವರ್ಷವೂ ಕೃಷಿ ಇಲಾಖೆ ದಲಿತ ಕೃಷಿ ಕೂಲಿ ಕಾರ್ಮಿಕರನ್ನು ವಿದೇಶಕ್ಕೆ ಕಳಿಸಲಿಲ್ಲ. ಈ ವರ್ಷವೂ ಕಳಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯಪರಿಷತ್ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಅಗತ್ಯದ ಹಣವನ್ನೂ ಪೂರೈಸಲಾಗಿದೆ. ಆದರೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಆ ಸಮುದಾಯದವರು ಮೇಲೆ ಬರುವುದು ಇಷ್ಟವಿಲ್ಲ ಎಂದು ದೂರಿದರು. ಹೀಗೆಯೇ ಪರಿಶಿಷ್ಟ ಜಾತಿ, ಪಂಗಡದ ರೈತರು ಟ್ರಾಕ್ಟರ್ ಖರೀದಿ ಮಾಡಲು ನೀಡಲಾಗುತ್ತಿದ್ದ ಎರಡು ಲಕ್ಷ ರೂಪಾಯಿಗಳನ್ನು ಮೂರು ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿತ್ತು, ಆದರೆ ಕೃಷಿ ಇಲಾಖೆಯವರು ಉದ್ದೇಶಪೂರ್ವಕವಾಗಿ ಎರಡು ಲಕ್ಷ ರೂಗಳಂತೆ ಹಣ ನೀಡಿದ್ದಾರೆ ಎಂದು ಕೆಂಡ ಕಾರಿದರು.

ಇದಕ್ಕೆ ಕಾರಣರಾದ ಕೃಷಿ ಇಲಾಖೆ ಉನ್ನತಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುತ್ತೇನೆ .ನೋಟೀಸ್ ಜಾರಿ ಮಾಡುತ್ತೇವೆ ಎಂದು ಹೇಳಿದರು. ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 27703 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು ಈ ಪೈಕಿ 11,626 ಕೋಟಿ ರೂ ವೆಚ್ಚವಾಗಿದೆ. ಇದು ಒಟ್ಟಾರೆ ಶೇಕಡಾ 42 ರಷ್ಟು ಸಾಧನೆ ಎಂದು ವಿವರ ನೀಡಿದರು.

ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಸಂಬಂಧ ಸರ್ಕಾರದ ಮೂವತ್ತೇಳು ಇಲಾಖೆಗಳಿಗೆ ಹಣ ಒದಗಿಸಲಾಗುತ್ತದೆ. ಈ ಪೈಕಿ ಉನ್ನತ ಶಿಕ್ಷಣ, ಮುಜುರಾಯಿ,ಕನ್ನಡ ಮತ್ತು ಸಂಸ್ಕೃತಿ, ಕೈಗಾರಿಕೆ, ಕೃಷಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಇಂದಿನ ಸಭೆಗೆ ಹಾಜರಾಗಿರಲಿಲ್ಲ. ಹೀಗಾಗಿ ಅವರಿಗೆ ನೋಟೀಸ್ ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ಮೀಸಲಿಟ್ಟ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದ್ದು ಜನವರಿ ತಿಂಗಳ ವೇಳೆಗೆ ಮತ್ತೊಂದು ಸಭೆ ನಡೆಸಿ ಮೀಸಲಿಟ್ಟ ಹಣದಲ್ಲಿ ಆಗಿರುವ ವೆಚ್ಚವೆಷ್ಟು ಎಂಬುದನ್ನು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಗೆ ಒದಗಿಸಿದ ಹಣದಲ್ಲಿ ಶೇಕಡಾ ಮೂರರಷ್ಟು ಹಣ ಮಾತ್ರ ವೆಚ್ಚವಾಗಿದೆ. ಕೌಶಲ್ಯಾಭಿವೃದ್ದಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗಣನೀಯ ಪ್ರಗತಿಯಿಲ್ಲ, ಕನಿಷ್ಟ ಪ್ರಗತಿಯೂ ಆಗಿಲ್ಲ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದವರ ಬಳಿ ವಿವರ ಪಡೆಯುವುದಾಗಿ ಉತ್ತರ ನೀಡಿದರು.

ಗುಡ್ಡಗಾಡು ಜನಾಂಗದವರ ಆರೋಗ್ಯಾಭಿವೃದ್ಧಿ ಯೋಜನೆಗಾಗಿ ಹಣ ನೀಡಲಾಗಿದೆ.ಆದರೆ ಎರಡೂವರೆ ಸಾವಿರ ಟಿ.ಬಿ.ರೋಗಿಗಳು ಆ ಸಮುದಾಯದಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಗಾರರು ಕೇಳಿದಾಗ,ಆ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದರು. ಯಾವ್ಯಾವ ಇಲಾಖೆಗಳಿಗೆ ಏನೇನು ಗುರಿ ನೀಡಲಾಗಿದೆಯೋ?ಅದನ್ನು ಸಾಧಿಸಬೇಕು ಎಂಬುದೇ ನಮ್ಮ ಕಳಕಳಿ. ಎಲ್ಲ ಇಲಾಖೆಗಳು ಈ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ದೇಶದಲ್ಲೇ ಯಾವ ರಾಜ್ಯವೂ ಪರಿಶಿಷ್ಟರಿಗಾಗಿ ಈ ಪ್ರಮಾಣದ ಹಣ ಒದಗಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ನುಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ