ಮಹಡಿಯಿಂದ ಕೆಳಗೆ ನೂಕಿ ವ್ಯಕ್ತಿ ಕೊಲೆ

Murder in drunken immersion

07-12-2017

ಬೆಂಗಳೂರು: ನಂದಿನಿ ಲೇಔಟ್‍ನ ಪೊಲೀಸ್ ವಸತಿ ಗೃಹದ ಸಮುಚ್ಛಯದಲ್ಲಿ ನಿನ್ನೆ ಮಧ್ಯರಾತ್ರಿ  ಕುಡಿದ ಮತ್ತಿನಲ್ಲಿ ಜಗಳ ತೆಗೆದ ಸರ್ಕಾರಿ ನೌಕರನೊಬ್ಬ ಮೊದಲ ಮಹಡಿಯಿಂದ ಕೆಳಗೆ ನೂಕಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ (ಡಿಜಿ) ಕಚೇರಿಯ ಪ್ರಥಮ ದರ್ಚೆ ಸಹಾಯಕ ಉದಯ್‍ ಕುಮಾರ್‍ ನನ್ನು ಕೊಲೆಗೈದಿದ್ದಾನೆ.

ಡಿಜಿ ಕಚೇರಿಯ ಸಿಬ್ಬಂದಿ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಉದಯ್‍ ಕುಮಾರ್(34)ನನ್ನು ಕೊಲೆಗೈದ ಆರೋಗ್ಯ ಇಲಾಖೆಯ ವಿಕಾಸಸೌಧದಲ್ಲಿದ್ದ ಸೆಕ್ಷನ್ ಆಫೀಸರ್ ರಾಜು(37)ನಂದಿನಿ ಲೇಔಟ್ ಪೊಲೀಸರ ಅತಿಥಿಯಾಗಿದ್ದಾನೆ. ಡಿಜಿ ಕಚೇರಿಯಲ್ಲಿ ದಲಾಯತ್ ಆಗಿದ್ದ ವಿಠ್ಠಲ್ ಅವರಿಗೆ ನಂದಿನಿ ಲೇಔಟ್‍ನ ಪೊಲೀಸ್ ವಸತಿ ಗೃಹದಲ್ಲಿ ಮನೆಯೊಂದನ್ನು ನೀಡಲಾಗಿತ್ತು.

ಅನುಕಂಪದ ಆಧಾರದ ಮೇಲೆ ಮೂರು ತಿಂಗಳ ಹಿಂದಷ್ಟೆ ಪ್ರಥಮ ದರ್ಜೆ ಸಹಾಯಕನಾಗಿ ನೇಮಕಗೊಂಡಿದ್ದ ಮದ್ದೂರಿನ ಉದಯ್‍ ಕುಮಾರ್, ಕಬ್ಬನ್ ಪಾರ್ಕ್‍ನ ಎನ್‍ಜಿಓ ವಸತಿ ಗೃಹದಲ್ಲಿ ತಂಗಿದ್ದು, ಪೊಲೀಸ್ ವಸತಿಗೃಹಕ್ಕಾಗಿ ಹುಡುಕಾಟ ನಡೆಸಿದ್ದು, ಕೆಲಸದ ವೇಳೆ ಪರಿಚಯವಾಗಿದ್ದ ದಲಾಯತ್ ವಿಠ್ಠಲ್ ಬಳಿ ಮನೆ ಹುಡುಕುತ್ತಿರುವ ವಿಷಯ ತಿಳಿಸಿದ್ದನು.

ನಂದಿನಿ ಲೇಔಟ್‍ನ ನಮ್ಮವಸತಿ ಗೃಹದಲ್ಲಿ ಮನೆಯೊಂದು ಖಾಲಿ ಇದೆ. ಬಂದು ನೋಡಿಕೊಂಡು ಹೋಗುವಂತೆ ವಿಠ್ಠಲ್ ಹೇಳಿದ್ದು, ನಿನ್ನೆ ಸಂಜೆ ಮನೆ ನೋಡಲು ಉದಯ್‍ಕುಮಾರ್ ಮುಂದಾಗಿದ್ದರು. ಕೆಲಸ ಮುಗಿಸಿ ಮನೆಗೆ ಹೋಗಿದ್ದ ವಿಠ್ಠಲ್‍ಗೆ ಮನೆ ನೋಡಿಕೊಂಡು ಬರಲು ನಿಮ್ಮ ವಸತಿ ಗೃಹಕ್ಕೆ ಬರುವುದಾಗಿ ಉದಯ್‍ಕುಮಾರ್ ತಿಳಿಸಿದ್ದರು.

ಮೊದಲೇ ವಿಠ್ಠಲ್ ಜೊತೆ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಆರೋಪಿ ಗೋಕಾಕ್ ಮೂಲದ ರಾಜು, ಉದಯ್‍ ಕುಮಾರ್ ಬರುವುದಕ್ಕೆ ಅಡ್ಡಿಪಡಿಸಿದ್ದ. ನಮ್ಮ ಇಬ್ಬರಿಗೆ ಮನೆ ಸಾಕಾಗುವುದಿಲ್ಲ. ಅವನನ್ನು ಏಕೆ ಕರೆಯುತ್ತೀಯ ಎಂದು ಜಗಳ ಮಾಡಿದ್ದ. ಆದರೂ ವಿಠ್ಠಲ್ ನಮ್ಮ ಅಧಿಕಾರಿ ಮನೆಗೆ ಬಂದು ಹೋಗಲಿದ್ದಾರೆ. ಅದಕ್ಕೆ ನೀನು ಅಡ್ಡಿಪಡಿಸಬೇಡ ಎಂದಿದ್ದು ಇಬ್ಬರ ನಡುವೆ ಈ ವಿಷಯವಾಗಿ ಮಾತಿಗೆ ಮಾತು ಬೆಳೆದಿತ್ತು. ರಾತ್ರಿ 7ರ ವೇಳೆ ವಿಠ್ಠಲ್ ಮನೆಗೆ ಉದಯ್ ಕುಮಾರ್ ಹೋದಾಗಲೂ ರಾಜು ವಿರೋಧ ವ್ಯಕ್ತಪಡಿಸಿದ್ದನಾದರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ಉದಯ್ ಕುಮಾರ್ ವಿಠ್ಠಲ್ ಜೊತೆ ಮಾತನಾಡುತ್ತ ಕುಳಿತಿದ್ದು, ನಂತರ ಮೂವರೂ ಸೇರಿ ಮದ್ಯಪಾನ ಮಾಡಿದ್ದಾರೆ.

ಮದ್ಯದ ಅಮಲಿನಲ್ಲಿ ರಾತ್ರಿ 11ರ ವೇಳೆ ಜಗಳವುಂಟಾಗಿದ್ದು, ಉದಯ್ ಕುಮಾರ್ ಮನೆಗೆ ಬಂದಿದ್ದಕ್ಕೆ ಮೊದಲೇ ಆಕ್ರೋಶಗೊಂಡಿದ್ದ ರಾಜು, ಜಗಳವಾಡುತ್ತ ಮನೆಯಿಂದ ಹೊರಗೆ ಉದಯ್‍ ಕುಮಾರ್‍ ನನ್ನು ಎಳೆದುಕೊಂಡು ಬಂದು ಕೆಳಗೆ ತಳ್ಳಿದ್ದಾನೆ.

ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಉದಯ್ ಕುಮಾರ್‍ ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿರುವ ನಂದಿನಿ ಲೇಔಟ್ ಪೊಲೀಸ್ ಇನ್ಸ್ ಪೆಕ್ಟರ್ ಐಯ್ಯಣ್ಣರೆಡ್ಡಿ ಅವರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

first division section officer ವಿರೋಧ ಇನ್ಸ್ ಪೆಕ್ಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ