‘ನಮ್ಮ ಪಕ್ಷಕ್ಕೆ ವಲಸೆ ಹೆಚ್ಚಾಗಲಿದೆ’06-12-2017

ಬೆಂಗಳೂರು: ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಸಾಕಷ್ಟು ಬದಲಾವಣೆ ಆಗಲಿದ್ದು, ಎರಡೂ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ವಲಸೆ ಹೆಚ್ಚಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ. ನಗರದ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಫಲಿತಾಂಶದ ನಂತರ ರಾಷ್ಟ್ರೀಯ ಪಕ್ಷಗಳಿಂದ ಹಲವರು ಜೆಡಿಎಸ್ ಸೇರಲಿದ್ದಾರೆ. ಹೀಗಾಗಿ ಫಲಿತಾಂಶಕ್ಕಾಗಿ ಅವರೆಲ್ಲಾ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದರು.

ಹತ್ತು ವರ್ಷಗಳಲ್ಲಿ ಎರಡು ಸಾರ್ವತ್ರಿಕ ಚುನಾವಣೆ ಎದುರಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಹಲವು ನಿರ್ದಿಷ್ಟ ಕ್ಷೇತ್ರಗಳತ್ತ ಚಿತ್ತ ಹರಿಸಿದೆ. ಆದರೆ ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಿದ್ದು, ಒಟ್ಟಾರೆ 113 ಸ್ಥಾನ ಗೆಲ್ಲುವ ಗುರಿ ಇದೆ. ಇಲ್ಲದಿದ್ದರೆ ರಾಜ್ಯಪಾಲರಿಂದ ಸರ್ಕಾರ ರಚನೆಗೆ ಆಹ್ವಾನ ಬರುವುದಿಲ್ಲ ಎಂದರು.

ಕಡಿಮೆ ಸ್ಥಾನಗಳನ್ನು ಗೆದ್ದರೆ ಬೇರೆ ಪಕ್ಷದ ಬಾಗಿಲಿಗೆ ಹೋಗುವ ಸ್ಥಿತಿ ಬರುತ್ತದೆ. ಉತ್ತರ ಕರ್ನಾಟಕದಲ್ಲಿ ಪಕ್ಷ ದುರ್ಬಲವಾಗಿರುವುದು ನಿಜ. ಆದರೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲೂ ಪಕ್ಷಕ್ಕೆ ಉತ್ತಮ ಅವಕಾಶವಿದೆ ಎಂದು ಹೇಳಿದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಅದಾನಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಈಗ ಅಂತಹಾ ಕಂಪನಿಗೇ  ಮುಖ್ಯಮಂತ್ರಿ ಸಿದ್ದರಾಮಯ್ಯ ಮಣೆ ಹಾಕಿದ್ದಾರೆ. ಉಡುಪಿ ಬಳಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಹಸಿರು ನಿಶಾನೆ ತೋರಲಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅದಾನಿ ಪಾತ್ರವನ್ನು ಮುಚ್ಚಿಹಾಕುವ ತಂತ್ರ ಇದಾಗಿದೆ ಎಂದು ಕುಮಾರ ಸ್ವಾಮಿ ಆರೋಪಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ