ಶೀಘ್ರದಲ್ಲೇ 'ಪಶುಮೇಳ'

Soon

06-12-2017

ಬೆಂಗಳೂರು: ಪ್ರಕೃತಿ ವಿಕೋಪದಿಂದ ಕಂಗಾಲಾಗಿರುವ ರೈತರು ಕೃಷಿಗೆ ಪರ್ಯಾಯವಾಗಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಜನವರಿ ಮೊದಲವಾರ ರಾಜ್ಯಮಟ್ಟದ ‘ಪಶುಮೇಳ’ ನಡೆಸಲು ಉದ್ದೇಶಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ.

ಅಕಾಲಿಕ ಮಳೆಯ ಕಾರಣದಿಂದ, ಇಲ್ಲವೇ ಮಳೆಯ ಕೊರತೆಯಿಂದ ಕೃಷಿಕರು ಆತಂಕಕ್ಕೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೈನುಗಾರಿಕೆ, ಮೀನು, ಹಂದಿ, ಮೊಲ, ಕುರಿ ಸಾಕಾಣಿಕೆಗೆ ಹೆಚ್ಚು ಒತ್ತು ನೀಡಬೇಕಾದ ಅನಿವಾರ್ಯತೆ ಇದೆ ಎಂದು ಮಾಹಿತಿ ನೀಡಿರುವ ಸಚಿವರು, ಪಶುಸಂಗೋಪನೆ ಮತ್ತಷ್ಟು ಲಾಭದಾಯಕವಾಗಬೇಕಿದ್ದು, ಇದೇ ಕಾರಣಕ್ಕಾಗಿ ಜಗತ್ತಿನ ಹೊಸ ತಳಿಗಳ ಪರಿಚಯ ಮಾಡಿಕೊಡುವುದರಿಂದ ಹಿಡಿದು ಎಲ್ಲ ರೀತಿಯ ಮಾಹಿತಿಯನ್ನು ರೈತರಿಗೆ ಪಶುಮೇಳದಲ್ಲಿ ಒದಗಿಸಲಾಗುವುದು ಎಂದಿದ್ದಾರೆ.

ಮೊಲ ಸಾಗಾಣಿಕೆ ಪ್ರಕ್ರಿಯೆಗೆ ಆಸಕ್ತರು ಮುಂದಾಗಿದ್ದರೂ ವಿವಿಧ ಕಾರಣಗಳಿಂದ ಮೊಲದ ಮಾಂಸಕ್ಕೆ ಸೂಕ್ತ ಮಾರುಕಟ್ಟೆ ಲಭ್ಯವಾಗುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೆಲವೇ ಮೊಲ ಸಾಕಾಣಿಕೆದಾರರ ತಂತ್ರದಿಂದ ಮೊಲದ ಮಾಂಸಕ್ಕೆ ಸೂಕ್ತ ಮಾರುಕಟ್ಟೆ ಲಭ್ಯವಾಗುತ್ತಿಲ್ಲ. ಪರಿಣಾಮವಾಗಿ ಕೆಲವೇ ಐಷಾರಾಮಿ ಹೋಟೆಲುಗಳಲ್ಲಿ ಮೊಲದ ಮಾಂಸದ ತಿನಿಸು ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ಕುರಿತು ಅವರ ಗಮನಸೆಳೆದಾಗ, ಈ ಕುರಿತು ಪರಿಶೀಲಿಸುವುದಾಗಿ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ನಡೆದಿರುವ ಹೊಸ ಅವಿಷ್ಕಾರಗಳ ಕುರಿತು ಪಶುಮೇಳದಲ್ಲಿ ರೈತರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಇದರಿಂದ ಹಾಲು, ಮಾಂಸದ ಉತ್ಪಾದನೆ ಹೆಚ್ಚಲಿದ್ದು, ಆ ಮೂಲಕ ಕೃಷಿ ಕೈ ಕೊಟ್ಟರೂ ಪಶು ಸಂಗೋಪನೆ ರೈತರ ಕೈ ಹಿಡಿಯಲಿದೆ ಎಂದಿದ್ದಾರೆ. ಇದೇ ಕಾರಣಕ್ಕಾಗಿ ಸದ್ಯದಲ್ಲೇ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ  ಅವರು, ಈ ಸಭೆಯ ನಂತರ ಪಶುಮೇಳದ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

A.manju pashu mela ಪಶುಮೇಳ ರಾಜ್ಯಮಟ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ