‘ನನ್ನ ಸಾವಿಗೆ ಸಾಲವೇ ಕಾರಣ’06-12-2017

ಬೆಂಗಳೂರು: ನಗರದ ಬೈಯ್ಯಪ್ಪನಹಳ್ಳಿಯ ಬೆನ್ನಿಗಾನಹಳ್ಳಿಯಲ್ಲಿ ಸಾಲದ ಕಂತು ಪಾವತಿಸುವಂತೆ ಎಸ್‍ಬಿಐ ಬ್ಯಾಂಕ್ ಸಿಬ್ಬಂದಿ ಮನೆ ಬಳಿ ಬಂದು ಒತ್ತಡ ಹಾಕಿದ್ದರಿಂದ ನೊಂದ ಒಲಾ ಕ್ಯಾಬ್ ಚಾಲಕರೊಬ್ಬರು ನಿನ್ನೆ ರಾತ್ರಿ ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಬೆನ್ನಿಗಾನಹಳ್ಳಿಯ ಅನಿಲ್(26) ಎಂದು, ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಅನಿಲ್ ಮೊಬೈಲ್ ವೀಡಿಯೊ ಮಾಡಿ ಯಾರು ಸಾಲ ಮಾಡಬೇಡಿ, ಹೆಂಡತಿ ಮಕ್ಕಳು ಯಾರಿಂದಲೂ ನನಗೆ ಬೇಜಾರಿಲ್ಲ, ನನ್ನ ಸಾವಿಗೆ ಸಾಲವೇ ಕಾರಣ, ಸಾಲ ಮಾಡಬೇಡಿ ಫ್ರೆಂಡ್ಸ್ ಎಂದು ಹೇಳಿದ್ದಾರೆ.

ಬೈಯ್ಯಪ್ಪನಹಳ್ಳಿಯ ಎಸ್‍ಬಿಐ ಬ್ಯಾಂಕ್ ಶಾಖೆಯಿಂದ ಕ್ಯಾಬ್ ಖರೀದಿಸಲು 5 ಲಕ್ಷ ಸಾಲ ಪಡೆದಿದ್ದ ಅನಿಲ್, ಅದರಲ್ಲಿ 3ಲಕ್ಷ ಪಾವತಿಸಿದ್ದರು. ಆದರೆ ಕೆಲವು ತಿಂಗಳಿನಿಂದ ಸಾಲದ ಕಂತು ಪಾವತಿಸದೇ ಸುಸ್ಥಿದಾರನಾಗಿದ್ದರು. ಸಾಲದ ಕಂತು ಪಾವತಿಸದ ಅನಿಲ್ ಮನೆ ಬಳಿ ನಿನ್ನೆ ಬಂದ ಬ್ಯಾಂಕ್ ಸಿಬ್ಬಂದಿ, ಸಾಲದ ಕಂತು ಪಾವತಿಸದಿದ್ದರೆ ಮನೆ ಹರಾಜು ಮಾಡುವುದಲ್ಲದೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿ ಹೋಗಿದ್ದರು. ಮನೆ ಬಳಿ ಬ್ಯಾಂಕ್‍ನವರು ಬಂದಿದ್ದಕ್ಕೆ ನೊಂದ ಅನಿಲ್ ರಾತ್ರಿ 8ರ ವೇಳೆ ನೇಣು ಬಿಗಿದುಕೊಂಡಿದ್ದರು.

ಕೂಡಲೇ ಮನೆಯವರು ರಕ್ಷಣೆಗೆ ಧಾವಿಸಿ ಹಗ್ಗದಿಂದ ಇಳಿಸಿ ಅನಿಲ್‍ನನ್ನು ಸ್ಥಳೀಯ ಆಸ್ಪತ್ರಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತ ಅನಿಲ್‍ಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೈಯ್ಯಪ್ಪನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ