ಲಾಯರ್‌ಗಳ ವಿರುದ್ಧ ‘ಸುಪ್ರೀಂ’ ಕಿಡಿ…

SC asks Centre to bring law to regulate lawyers

06-12-2017 292

ವಕೀಲ ವೃತ್ತಿಗೆ ಸಂಬಂಧಿಸಿದಂತೆ ನೀತಿ ನಿಯಮ ರೂಪಿಸಿ, ಕಾನೂನು ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್, ವಕೀಲರ ಶುಲ್ಕವನ್ನು ಮಿತಿಗೊಳಿಸುವಂತೆಯೂ ಹೇಳಿದೆ.  ದೇಶದಲ್ಲಿ ವಕೀಲಿ ವೃತ್ತಿ ಸಂಪೂರ್ಣವಾಗಿ ಕಮರ್ಶಿಯಲ್ ಆಗಿದ್ದು, ಇಲ್ಲಿ ಬೇರೆ ಎಲ್ಲಕ್ಕಿಂತಲೂ ಹಣವೇ ಪ್ರಧಾನವಾಗಿ ಕಂಡುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಲಾಯರುಗಳು ತಮ್ಮ ಕಕ್ಷೀದಾರರಿಂದ ಭಾರೀ ಮೊತ್ತದ ಫೀ ಕೇಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ವಕೀಲರು, ದೊಡ್ಡ ಮೊತ್ತದ ಶುಲ್ಕ ಕೇಳುವ ಮೂಲಕ ಬಡಜನರು ನ್ಯಾಯಪಡೆಯುವುದೇ ಕಷ್ಟಕರವಾಗುವಂತೆ ಮಾಡುತ್ತಿದ್ದಾರೆ ಎಂದಿರುವ ಸುಪ್ರೀಂಕೋರ್ಟ್, ವಕೀಲರಿಗೆ ಕನಿಷ್ಟ ಮತ್ತು ಗರಿಷ್ಟ ಶುಲ್ಕಗಳನ್ನು ನಿಗದಿಪಡಿಸುವಂತೆ ಸರ್ಕಾರಕ್ಕೆ ಹೇಳಿದೆ.

ವಕೀಲಿ ವೃತ್ತಿಯ ನೈತಿಕತೆ ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಮತ್ತು ಹೆಚ್ಚು ಹಣವಿಲ್ಲ ಅನ್ನುವ ಕಾರಣಕ್ಕಾಗಿ ಬಡವರು, ಉತ್ತಮ ವಕೀಲರ ಸೇವೆ ಪಡೆಯಲು ಆಗದೇ ಇರುವಂಥ ಪರಿಸ್ಥಿತಿ ತಪ್ಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಆದರ್ಶ್ ಗೋಯಲ್ ಮತ್ತು ಯು.ಯು.ಲಲಿತ್ ಅವರ ಪೀಠ ಅಭಿಪ್ರಾಯ ಪಟ್ಟಿದೆ.  ಇದರ ಜೊತೆಗೆ, ಕೋರ್ಟ್‌ ಮೂಲಕ ಕಕ್ಷಿದಾರರಿಗೆ ಸಿಗುವ ಪರಿಹಾರ ಮೊತ್ತದಲ್ಲಿ ವಕೀಲರು ಪಾಲು ಕೇಳುವಂಥ ದುರ್ನಡತೆ ತೋರುತ್ತಿದ್ದಾರೆ, ಅಂಥವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಕಿಡಿಕಾರಿದೆ.

‘ವಕೀಲಿ ವೃತ್ತಿ ಅನ್ನುವುದು, ನ್ಯಾಯ ದೊರಕಿಸಿಕೊಡುವ ವ್ಯವಸ್ಥೆಯ ಅತಿ ಮುಖ್ಯ ಅಂಗ, ಆದರೆ ವೃತ್ತಿಯಲ್ಲಿ ನೈತಿಕ ಮೌಲ್ಯಗಳನ್ನೇ ಇಟ್ಟುಕೊಳ್ಳದವರು, ಹೇಗೆತಾನೆ ನ್ಯಾಯ ಸಿಗುವಂತೆ ಮಾಡುತ್ತಾರೆ’ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ವಕೀಲರ ದುಬಾರಿ ಶುಲ್ಕದ ಬಗ್ಗೆ ಪ್ರಸ್ತಾಪಿಸಿದ ಸುಪ್ರೀಂಕೋರ್ಟ್, ವಕೀಲರು ನೀಡುವ ಸೇವೆಗೆ ಶುಲ್ಕ ನಿಗದಿಪಡಿಸುವುದು ಸಂಸತ್ತಿನ ಕರ್ತವ್ಯ ಎಂದು ಅಭಿಪ್ರಾಯ ಪಟ್ಟಿದೆ. ವಕೀಲಿ ವೃತ್ತಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮತ್ತು ಅದನ್ನು ಉತ್ತರದಾಯಿಯಾಗಿ ಮಾಡುವ ಸಂಬಂಧ ಕಾನೂನು ಆಯೋಗ ಮಾಡಿದ್ದ ಶಿಫಾರಸುಗಳ ಬಗ್ಗೆಯೂ ಕೋರ್ಟ್ ಪ್ರಸ್ತಾಪ ಮಾಡಿದೆ.ಸಂಬಂಧಿತ ಟ್ಯಾಗ್ಗಳು

Supreme Court Lawyer ನೀತಿ ನಿಯಮ ಕಕ್ಷೀದಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ