ಹಂತಕರನ್ನು ಬಂಧಿಸುವಂತೆ ಒತ್ತಾಯ

gauri death: protest against government

05-12-2017

ಬೆಂಗಳೂರು: ಹಿರಿಯ ಪತ್ರಕರ್ತೆ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಗೈದ ಹಂತಕರನ್ನು ಕೂಡಲೇ ಬಂಧಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಗೌರಿ ಲಂಕೇಶ್ ಬಳಗ ನಗರದಲ್ಲಿ ಇಂದು ಪ್ರತಿಭಟನಾ ಮೆರವಣಿಸಿತು.

ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಗೌರಿ ಲಂಕೇಶ್ ಬಳಗದ ನೇತೃತ್ವದಲ್ಲಿ ವಿಚಾರವಾದಿಗಳ ಹತ್ಯೆ ಖಂಡಿಸಿ, ಪ್ರಗತಿಪರರರು ಬೃಹತ್ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾವರೆಗೂ ಪ್ರತಿಭಟನಾ ನಡಿಗೆ ಹೊರಟ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ಸೇರಿ ಹಲವರನ್ನು ಪೊಲೀಸರು ಮಾರ್ಗ ಮಧ್ಯೆ ಬಂಧಿಸಿದರು.

ನಂತರ ಚಂದ್ರಶೇಖರ ಪಾಟೀಲ ಅವರಿದ್ದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಮನವಿ ಸಲ್ಲಿಸಿ ಗೌರಿ ಹಂತಕರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದೆ ಬಂಧನಕ್ಕೂ ಮುನ್ನ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ಗೌರಿ ಅವರ ಹತ್ಯೆಯಾಗಿ ಇಂದಿಗೆ 90 ದಿನಗಳು ಕಳೆದಿವೆ. ಆದರೂ ಇದುವರೆಗೂ ಹಂತಕರ ಬಂಧನವಾಗಿಲ್ಲ. ತನಿಖೆಯೂ ಚುರುಕುಗೊಂಡಿಲ್ಲ ಎಂಬ ಅನುಮಾನವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೌರಿ ಹತ್ಯೆಯಾಗಿ ಮೂರು ತಿಂಗಳು, ವಿಚಾರವಾದಿ ಡಾ.ಎಂ.ಎಂ. ಕಲ್ಬುರ್ಗಿಯವರ ಹತ್ಯೆಯಾಗಿ 30 ತಿಂಗಳುಗಳು ಕಳೆದಿವೆ. ಆದರೂ ಒಬ್ಬ ಆರೋಪಿಯ ಬಂಧನವೂ ಆಗಿಲ್ಲ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವತಂತ್ರಕ್ಕೆ ಧಕ್ಕೆ ಆಗಲಿದೆ. ಸ್ವತಂತ್ರವಾಗಿ ಮಾತನಾಡುವ ಹಕ್ಕು ಕಸಿದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಗೌರಿ ಲಂಕೇಶ್ ಸಹೋದರಿ, ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿ, ಹಂತಕರ ಬಂಧನ ಶೀಘ್ರವಾಗಬೇಕು. ಇಲ್ಲದಿದ್ದರೆ, ತನಿಖೆಯ ತೀವ್ರತೆ ಕಡಿಮೆಯಾಗುತ್ತದೆ ಹಾಗೂ ರಾಜ್ಯ ಸರ್ಕಾರದ ಮೇಲೆ ಭರವಸೆಯೂ ಇಲ್ಲದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಮಾತನಾಡಿ, ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಬಿಜೆಪಿ ಮೌನವಾಗಿದೆ. ಜೊತೆಗೆ ಪ್ರಪಂಚದ ಎಲ್ಲಾ ವಿದ್ಯಮಾನಗಳ ಬಗ್ಗೆ ಸಕ್ರಿಯವಾಗಿ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ. ಹಂತಕರು ಎಲ್ಲಿದ್ದಾರೆ ಎಂದು ಮೋದಿ ಅವರಿಗೆ ತಿಳಿದಿರಬಹುದೇ ಎಂದು ಟೀಕಿಸಿದರು. ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಪ್ರಗತಿಪರರು ಸೇರಿದಂತೆ, ಎಲ್ಲಾ ವರ್ಗದ ಜನರು ಹೋರಾಟವನ್ನು ತೀವ್ರಗೊಳಿಸಲಿದ್ದಾರೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ವಕೀಲರಾದ ಅನಂತ್ ನಾಯಕ್, ಹಿರಿಯ ಸಾಹಿತಿ ಕೆ. ನೀಲಾ, ತ್ರಿಮೂರ್ತಿ ಸೇರಿದಂತೆ ಪ್ರಮುಖರಿದ್ದರು.


ಸಂಬಂಧಿತ ಟ್ಯಾಗ್ಗಳು

chandrashekhar patil Protest ಗೌರಿ ಲಂಕೇಶ್ ಅಧಿಕೃತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ