ಆಧಾರ್ ಲಿಂಕ್‌, ಡೆಡ್‌ ಲೈನ್ ಬಂತು

Aadhaar linking deadline...!

05-12-2017

ಕೇಂದ್ರ ಸರ್ಕಾರದ ಸೂಚನೆ ಪ್ರಕಾರ, ನೀವೆಲ್ಲರೂ ಹಲವಾರು ಸೇವೆಗಳು ಅಥವ ದಾಖಲೆಗಳ ಜೊತೆಗೆ ನಿಮ್ಮ ಆಧಾರ್ ಸಂಖ್ಯೆ ಸೇರಿಸುವುದು ಕಡ್ಡಾಯವಾಗಿದೆ. ಆಧಾರ್ ಜೋಡಣೆಗೆ ನಿಗದಿ ಪಡಿಸಿರುವ ಡೆಡ್‌ ಲೈನ್ ಹತ್ತಿರ ಬರುತ್ತಿದ್ದು, ಸಾಧ್ಯವಾದಷ್ಟೂ ಬೇಗ ನೀವು ಆಧಾರ್ ಲಿಂಕ್ ಮಾಡಬೇಕಾಗಿದೆ.

ಎಲ್ಲಕ್ಕಿಂತ ಮೊದಲನೆಯದಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಗುರುತುಪತ್ರದ ನಂಬರ್ ಸೇರಿಸಬೇಕಾಗಿದೆ. ಇದಕ್ಕಾಗಿ, ನಿಮಗೆ ಸೇವೆ ನೀಡುತ್ತಿರುವ ಬಿಎಸ್‌ಎನ್ಎಲ್ ಅಥವ ಇನ್ಯಾವುದೇ ಸಂಸ್ಥೆಯ ಗ್ರಾಹಕ ಸೇವಾಕೇಂದ್ರಕ್ಕೆ ಭೇಟಿ ನೀಡಿ, ಆಧಾರ್ ಸಂಖ್ಯೆ ಸೇರಿಸಬಹುದು. ಎರಡನೆಯದಾಗಿ, ನಿಮ್ಮ ಬ್ಯಾಂಕ್ ಖಾತೆ ಜೊತೆಗೆ ಆಧಾರ್ ಸಂಖ್ಯೆ ಜೋಡಿಸಬೇಕು. ನಿಮ್ಮ ಬ್ಯಾಂಕಿನ ಶಾಖೆಗೆ ಭೇಟಿ ಕೊಡುವ ಮೂಲಕ ಇದನ್ನು ಮಾಡಬಹುದು ಅಥವ ಇಂಟರ್ ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕವೂ ಆಧಾರ್ ಲಿಂಕ್ ಮಾಡಬಹುದು.

ಮೂರನೆಯದಾಗಿ, ನಿಮ್ಮ ಪ್ಯಾನ್ ಅಥವ ಪರ್ಮನೆಂಟ್ ಅಕೌಂಟ್ ನಂಬರ್‌ ಗೆ ಆಧಾರ್ ನಂಬರ್ ಸೇರಿಸಬೇಕು. ಇದಕ್ಕಾಗಿ, ನೀವು ಆದಾಯ ತೆರಿಗೆ ಇಲಾಖೆಯ ವೆಬ್‌ ಸೈಟ್‌ಗೆ ಭೇಟಿ ಕೊಟ್ಟು ಅಲ್ಲಿರುವ ಸೂಚನೆ ಅನುಸರಿಸಬೇಕು. ನಾಲ್ಕನೆಯದಾಗಿ, ನಿಮ್ಮ ಇನ್ಶುರೆನ್ಸ್ ಪಾಲಿಸಿಗಳ ಜೊತೆಗೆ ಆಧಾರ್ ಸಂಖ್ಯೆ ಸೇರಿಸಬೇಕು. ಇದಕ್ಕಾಗಿ ಎಲ್‌ಐಸಿ, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಐಸಿಐಸಿಐ ಇತ್ಯಾದಿ ಸಂಸ್ಥೆಗಳ ವೆಬ್‌ ಸೈಟ್‌ಗೆ ಭೇಟಿಕೊಡಬೇಕು. ಅಲ್ಲಿ ನಿಮ್ಮ ಪಾಲಿಸಿ ನಂಬರ್ ಮತ್ತು ಜನ್ಮದಿನಾಂಕ ನಮೂದಿಸಬೇಕು. ಈ ಮಾಹಿತಿ ಪರಿಶೀಲನೆ ಬಳಿಕ, ನಿಮ್ಮ ಆಧಾರ್ ಸಂಖ್ಯೆ ಸೇರಿಸಲು ಸೂಚಿಸಲಾಗುತ್ತದೆ.

ಐದನೆಯದಾಗಿ, ನೀವು ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆ, ಜೀವವಿಮೆ ಅಥವ ಪಿಂಚಿಣಿ ಪಾಲಿಸಿ ಹೊಂದಿದ್ದಲ್ಲಿ ಅದರ ಜೊತೆಗೆ ಆಧಾರ್ ಸಂಖ್ಯೆ ಜೋಡಿಸಬೇಕಾಗಿದೆ. ಇದಕ್ಕಾಗಿ, ಇಂಡಿಯ ಪೋಸ್ಟ್ ವೆಬ್‌ಸೈಟ್‌ಗೆ  ಭೇಟಿ ನೀಡಿ ಅಲ್ಲಿಂದ ಆಧಾರ್ ಲಿಂಕ್ ಮಾಡುವ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದನ್ನು ಭರ್ತಿ ಮಾಡಿ ನೀವು ವ್ಯವಹಾರ ನಡೆಸುವ ಅಂಚೆ ಕಚೇರಿಗೆ ತಲುಪಿಸಬೇಕು. ಇನ್ನು ನೀವೇನಾದರೂ ಮ್ಯೂಚ್ಯುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದ್ದಲ್ಲಿ, ಕ್ಯಾಮ್ಸ್ ಅಂಡ್ ಕಾರ್ವಿ ವೆಬ್‌ ಸೈಟ್‌ಗೆ ಭೇಟಿ ನೀಡುವ ಮೂಲಕ ಆಧಾರ್ ಸಂಖ್ಯೆ ಲಿಂಕ್ ಮಾಡಬಹುದು.

ನಿಮ್ಮ ಮೊಬೈಲ್ ಫೋನ್ ಜೊತೆಗೆ, ಆಧಾರ್ ಸೇರಿಸಲು 2018 ಫೆಬ್ರವರಿ 6 ಕಡೇ ದಿನಾಂಕವೆಂದು ಪ್ರಕಟಿಸಲಾಗಿದೆ. ಆದರೆ, ಬ್ಯಾಂಕ್ ಖಾತೆ, ಪ್ಯಾನ್ ಸಂಖ್ಯೆ, ಫೋಸ್ಟ್ ಆಫೀಸ್, ಇನ್ಶುರೆನ್ಸ್ ಪಾಲಿಸಿಗಳ ಜೊತೆ ಆಧಾರ್ ಸೇರಿಸಲು ಇದೇ ಡಿಸೆಂಬರ್ ತಿಂಗಳ 31 ಕಡೇ ದಿನಾಂಕ. ಒಂದು ವೇಳೆ, ನೀವು ಆಧಾರ್ ಲಿಂಕ್ ಮಾಡದಿದ್ದರೆ, ನಿಮ್ಮ ಫೋನ್ ನಂಬರ್‌ ಇದ್ದೂ ಇಲ್ಲದಂತಾಗುತ್ತದೆ, ನಿಮ್ಮ ಬ್ಯಾಂಕ್ ಖಾತೆ, ಪೋಸ್ಟ್ ಆಫೀಸ್ ಖಾತೆಗಳು ಸ್ಥಗಿತಗೊಳ್ಳುತ್ತವೆ, ನಿಮ್ಮ ಆದಾಯ ತೆರಿಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ, ಏಳಿ ಎಚ್ಚರಗೊಳ್ಳಿ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಕ್ರಮ ಕೈಗೊಳ್ಳುವ ಮೊದಲು, ಎಲ್ಲದಕ್ಕೂ ಆಧಾರ್ ಸೇರಿಸಿ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ