ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರಗಳ್ಳತನ ಹಿನ್ನೆಲೆ ಐವರು ಸರಗಳ್ಳರ ಬಂಧನ

Kannada News

11-04-2017

ಬೆಂಗಳೂರು,ಏ.11- ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರಗಳ್ಳತನ ಮನೆಗಳವು ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಕುಖ್ಯಾತ ಐವರು ಸರಗಳ್ಳರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು 15 ಪ್ರಕರಣಗಳನ್ನು ಪತ್ತೆಹಚ್ಚಿ 14 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಂಗಸಂದ್ರದ ರಮೇಶ್ ಆಲಿಯಾಸ್ ಜೀವನ್ (24), ತಮಿಳುನಾಡಿನ ಡೆಂಕಣಿಕೋಟೆಯ ನಾಗರಾಜ್ ಆಲಿಯಾಸ್ ನಾಗ (22), ರಾಜೇಶ್ (25), ಹೆಬ್ಬಗೂಡಿಯ ಶಾಮಸುಂದರ್ ಆಲಿಯಾಸ್ ಶ್ಯಾಮ್ (21), ಹುಸ್ಕೂರ್ ಗೇಟ್‍ನ ರಂಗಸ್ವಾಮಿ ಆಲಿಯಾಸ್ ರಂಗ (22) ಬಂಧಿತ ಆರೋಪಿಗಳಾಗಿದ್ದು ಅವರಿಂದ  14 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನ್ಯಾಯಾಂಗ ಬಂಧನದಲ್ಲಿದ್ದ ಡೆಂಕಣಿಕೋಟೆಯ ಮಾದೇಶ್ ಆಲಿಯಾಸ್ ಮಾದೇವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳ ಬಗ್ಗೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಆರೋಪಿಗಳನ್ನು ಜಯನಗರ ಉಪ ವಿಭಾಗದ ಅಪರಾಧ ಪತ್ತೆದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಡಾ. ಎಸ್.ಟಿ. ಶರಣಪ್ಪ ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ಜಯನಗರ, ಬನಶಂಕರಿ, ಸಿದ್ದಾಪುರ, ಜೆಪಿನಗರ, ರಾಜಗೋಪಾಲನಗರ, ಹೆಬ್ಬಗೋಡಿ, ಆನೇಕಲ್ ಇನ್ನಿತರ ಕಡೆಗಳಲ್ಲಿ ಸರ ಅಪಹರಣ, ಮನೆಕಳವು, ಸುಲಿಗೆ ಸೇರಿ 15 ಪ್ರಕರಣಗಳು ಪತ್ತೆಯಾಗಿವೆ. ಬಂಧಿತರಿಂದ 440 ಗ್ರಾಂ ಚಿನ್ನಾಭರಣ, 2 ದ್ವಿಚಕ್ರವಾಹನ ಸೇರಿ 14 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಬಸವನಗುಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮನೆಗಳ್ಳರ ಸೆರೆ
ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಮೂವರನ್ನು ತಲಘಟ್ಟಪುರ ಪೊಲೀಸರು ಬಂಧಿಸಿ 6 ಲಕ್ಷ 9 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ತಲಘಟ್ಟಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೋಣನಕುಂಟೆಯ ಮಂಜುನಾಥ್ ಆಲಿಯಾಸ್ ಮಂಜ (20), ಗುಬ್ಬಲಾಳದ ಯಶವಂತ್ ಆಲಿಯಾಸ್ ಪೆಟ್ಟಿ (21), ಕೃಷ್ಣ ಅರಸ್ ಆಲಿಯಾಸ್ ಕಿಟ್ಟಿ (19) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 5 ಸಾವಿರ ನಗದು, 132 ಗ್ರಾಂ ಚಿನ್ನಾಭರಣ, ಮೊಬೈಲ್, ಹೋಂಡಾ ಆಕ್ಟೀವಾ, ದ್ವಿಚಕ್ರ ವಾಹನ ಸೇರಿದಂತೆ 6 ಲಕ್ಷ 9 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಮನೆಕಳವು ಮಾಡಿದ 7 ಪ್ರಕರಣಗಳು ಪತ್ತೆಯಾಗಿವೆ.
ಮೋಜಿಗಾಗಿ ಕಳವು
ಮೋಜಿನ ಜೀವನಕ್ಕಾಗಿ ಸರ ಅಪಹರಣ, ದ್ವಿಚಕ್ರ ವಾಹನ ಕಳವು, ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿ 3 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ
ಬನಶಂಕರಿಯ 2ನೇ ಹಂತದ ಗಿರೀಶ್ ಆಲಿಯಾಸ್ ಗಿರಿ (20), ಉತ್ತರಹಳ್ಳಿಯ ವಿಠಲ್ ನಗರದ ರೋಹಿತ್ (19), ಮಾರೇನಹಳ್ಳಿಯ ನಾಗರಾಜ್ (19) ಬಂಧಿತ ಆರೋಪಿಗಳಾಗಿದ್ದು, ಇವರ ಜತೆ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಮತ್ತೊಬ್ಬ ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳಿಂದ 3 ಲಕ್ಷ ಬೆಲೆಯ 3 ಚಿನ್ನದ ಸರಗಳು, 4 ಮೊಬೈಲ್ಗಳು, 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಗಿರಿನಗರ, ಕೆಂಪೇಗೌಡ ನಗರ, ಜೆಪಿನಗರ, ಕೋರಮಂಗಲ, ರಾಜಾಜಿನಗರಗಳಲ್ಲಿ ನಡೆದಿದ್ದ 3 ಸರ ಕಳವು, 3 ದ್ವಿಚಕ್ರ ವಾಹನ ಕಳವು, 4 ಮೊಬೈಲ್ ಕಳವು ಸೇರಿದಂತೆ 10 ಪ್ರಕರಣಗಳು ಪತ್ತೆಯಾಗಿವೆ

Links :ಸಂಬಂಧಿತ ಟ್ಯಾಗ್ಗಳು

1 1 1 1


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ