ಮೆಟ್ರೊ ಪ್ರಯಾಣಿಕರೇ…ಕೇರ್ ಫುಲ್

Are you going by metro..be careful

04-12-2017

ನೀವು ಪ್ರತಿದಿನ ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡುತ್ತೀರಾ? ಹಾಗಿದ್ರೆ ಈ ವಿಷಯ ಸರಿಯಾಗಿ ತಿಳ್ಕೊಳ್ಳಿ. ಯಾರಾದ್ರೂ ಮೆಟ್ರೊ ರೈಲು ನಿಲ್ದಾಣದ ಯಾವುದೇ ಪ್ರದೇಶದಲ್ಲಾಗಲಿ ಅಥವ ರೈಲಿನ ಒಳಗಾಗಲಿ ಮದ್ಯಪಾನ ಮಾಡಿ ಬಂದರೆ, ಸೀನ್ ಕ್ರಿಯೇಟ್ ಮಾಡಿದರೆ, ಅಥವ ಕೆಟ್ಟ ಭಾಷೆ ಬಳಸಿ ಮಾತನಾಡಿದ್ರೆ ಅಂಥವರಿಗೆ ಬೀಳುತ್ತೆ ಬರೋಬ್ಬರಿ 5 ಸಾವಿರ ರೂಪಾಯಿ ದಂಡ. 

ಇಷ್ಟು ಮಾತ್ರವಲ್ಲ, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೆಟ್ರೊ ರೈಲು ನಿರ್ವಹಣೆ ಮಸೂದೆ ಪ್ರಕಾರ, ಯಾರಾದರೂ ಮೆಟ್ರೊ ಆವರಣದಲ್ಲಿ ಕಸಹಾಕಿದರೆ, ಗಲೀಜು ಮಾಡಿದರೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.  ಒಂದುವೇಳೆ ಯಾರಾದರೂ ವ್ಯಕ್ತಿ, ಬಂದೂಕು ಇತ್ಯಾದಿ ಅಪಾಯಕಾರಿ ವಸ್ತುಗಳೊಂದಿಗೆ ಮೆಟ್ರೊ ರೈಲು ಹತ್ತಿರುವುದು ಪತ್ತೆಯಾದರೆ, ಅಂಥವರಿಗೆ 50 ಸಾವಿರ ರೂಪಾಯಿ ದಂಡ ಮತ್ತು 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದಕ್ಕೂ ಮೀರಿದಂತೆ, ಪ್ರಾಣ ಹಾನಿ ಮಾಡುವ ಉದ್ದೇಶದ ಯಾವುದೇ ರೀತಿಯ ವಿಧ್ವಂಸಕ ಕೃತ್ಯ ಎಸಗಿದವರಿಗೆ, ಜೀವಾವಧಿ ಶಿಕ್ಷೆ ಅಥವ ಗಲ್ಲು ಶಿಕ್ಷೆ ವಿಧಿಸುವುದಕ್ಕೂ ಹೊಸ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಹೊಸ ಮಸೂದೆಯಲ್ಲಿ, ಕೇವಲ ಮೆಟ್ರೊ ಪ್ರಯಾಣಿಕರಿಗೆ ಮಾತ್ರವಲ್ಲ ಮೆಟ್ರೊ ಸಿಬ್ಬಂದಿಗೂ ಅನ್ವಯವಾಗುವ ಹಲವಾರು ನಿಯಮಗಳಿವೆ. ಪ್ರಯಾಣಿಕರಿಗೆ ತೊಂದರೆಯಾಗುವ ಅಥವ ಜೀವಕ್ಕೆ ಆಪತ್ತು ತರುವ ರೀತಿಯಲ್ಲಿ ಯಾರಾದರೂ ಮೆಟ್ರೊ ಸಿಬ್ಬಂದಿ ವರ್ತಿಸಿದರೆ ಅವರಿಗೆ ಕಠಿಣ ಶಿಕ್ಷೆ ಕಾದಿದೆ. ಮೆಟ್ರೊ ಸಿಬ್ಬಂದಿಯ ಸಾಮಾನ್ಯ ದುರ್ವತನೆಗೆ 10 ಸಾವಿರ ರೂಪಾಯಿಗಳ ವರೆಗೆ ದಂಡ ವಿಧಿಸಬಹುದು. ಪ್ರಯಾಣಿಕರಿಗೆ ಅಪಾಯಕಾರಿಯಾಗುವ ರೀತಿಯಲ್ಲಿ ವರ್ತಿಸಿದ ಮೆಟ್ರೊ ಸಿಬ್ಬಂದಿಗೆ 30 ಸಾವಿರ ರೂಪಾಯಿ ದಂಡ ಮತ್ತು  2 ವರ್ಷಗಳ ವರೆಗಿನ ಜೈಲು ಶಿಕ್ಷೆಯನ್ನೂ ವಿಧಿಸಲು ಅವಕಾಶವಿದೆ.

ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ರೂಪಿಸಿರುವ, ಮೆಟ್ರೊ ರೈಲು (ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ) ಮಸೂದೆಯನ್ನು ಪರಿಶೀಲಿಸಲು ಕಾನೂನು ಇಲಾಖೆಗೆ ಕಳಿಸಿಕೊಡಲಾಗಿದೆ. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ, ಈ ಮಸೂದೆ ಕೇಂದ್ರ ಸಚಿವ ಸಂಪುಟದ ಮುಂದೆ ಬರಲಿದೆ, ಆನಂತರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಮೆಟ್ರೊ ರೈಲಿನ ಪ್ರಯಾಣ ದರ ನಿಗದಿ ಪಡಿಸುವ ಸಲುವಾಗಿ, ಒಂದು ಶಾಶ್ವತ ಪ್ರಾಧಿಕಾರ ಸ್ಥಾಪಿಸುವ ಬಗ್ಗೆಯೂ ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗೆ, ದೆಹಲಿ ಮೆಟ್ರೊ ರೈಲಿನ ಪ್ರಯಾಣ ದರ ಏರಿಕೆ ಮಾಡಿದ್ದು ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಒಟ್ಟಿನಲ್ಲಿ ಮೆಟ್ರೊ ರೈಲು ಸಂಚಾರವನ್ನು ಸುರಕ್ಷಿತ ಮತ್ತು ಸುಖದಾಯಕವಾಗಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲ ಕ್ರಮಗಳನ್ನೂ, ನಾಗರಿಕರು ಸ್ವಾಗತಿಸಬಹುದು.  

 


ಸಂಬಂಧಿತ ಟ್ಯಾಗ್ಗಳು

Metro Central government ಮಸೂದೆ ಶಿಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ