ಗುಂಡು ಹಾರಿಸಿ ರೌಡಿ ಸೆರೆ !

Rowdy arrested

04-12-2017

ಬೆಂಗಳೂರು: ನಗರದ ಮರಿಯಪ್ಪನ ಪಾಳ್ಯದ ಬಳಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಬೆದರಿಸಿ ಸ್ಕೂಟರ್, ಮೊಬೈಲ್ ನಗದು ದೋಚಿ ಪರಾರಿಯಾಗುತ್ತಿದ್ದ ರೌಡಿ ಅಶ್ವತ್ಥ್ ಮೇಲೆ ನಿನ್ನೆ ಮಧ್ಯರಾತ್ರಿ ಆರ್‍ಎಂಸಿ ಯಾರ್ಡ್ ಪೊಲೀಸರು ಗುಂಡು ಹಾರಿಸಿದ್ದಾರೆ.

ಬಲಗಾಲಿಗೆ ಗಾಯಗೊಂಡಿರುವ ಚಿಕ್ಕಸಂದ್ರದ ಅಶ್ವತ್ಥ್(22)ನನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಚಿಕಿತ್ಸೆ ಪಡೆಯುತ್ತಿರುವ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕ್ಕಸಂದ್ರದ ಅಶ್ವತ್ಥ್ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಜಗೋಪಾಲನಗರ ಠಾಣಾ ರೌಡಿ ಪಟ್ಟಿಯಲ್ಲಿದ್ದಾನೆ. ಆರೋಪಿಯು ರಾತ್ರಿ 12ರ ವೇಳೆ ಮರಿಯಪ್ಪನ ಪಾಳ್ಯದ  ವೃತ್ತದಲ್ಲಿ ಅಣ್ಣಿಯಪ್ಪ ಎಂಬುವವರನ್ನು ಅಡ್ಡಗಟ್ಟಿ ಸ್ಕೂಟರ್, ಮೊಬೈಲ್, 300 ರೂ. ನಗದು, ಕಸಿದು ರಾತ್ರಿ 12ರ ವೇಳೆ ಪರಾರಿಯಾಗಿದ್ದನು.

ಸುದ್ದಿ ತಿಳಿದ ಕೂಡಲೇ ರಾಜಗೋಪಾಲನಗರ ಹಾಗೂ ಆರ್.ಎಂ.ಸಿ.ಯಾರ್ಡ್ ಪೊಲೀಸರು ನಾಕಾಬಂಧಿ ನಡೆಸಿ ಕಾರ್ಯಾಚರಣೆ ನಡೆಸಿದಾಗ ಅಶ್ವತ್ಥ್ ಆರ್.ಎಂ.ಸಿ. ಯಾರ್ಡ್‍ನ ಕೋಡೆ ಕನ್ವೆಂನ್ಷಲ್ ಹಾಲ್‍ನ ಬಳಿಯ ಒಳಹೋಗುವ  ಕಿರಿದಾದ ರಸ್ತೆಯಲ್ಲಿ ಮಧ್ಯರಾತ್ರಿ 2.30ರ ವೇಳೆ ಹೋಗುತ್ತಿರುವ ಮಾಹಿತಿ ತಿಳಿದುಬಂದಿತ್ತು, ಕೂಡಲೇ ಕಾರ್ಯಾಚರಣೆ ಕೈಗೊಂಡ ಆರ್.ಎಂ.ಸಿ. ಯಾರ್ಡ್‍ನ ಇನ್ಸ್ ಪೆಕ್ಟರ್ ಮೊಹ್ಮದ್ ಮುಖರಮ್, ಸಬ್ ಇನ್ಸ್ ಪೆಕ್ಟರ್ ರಘು ಪ್ರಸಾದ್, ಪೇದೆ ಆಕಾಶ್ ಅವರಿದ್ದ ಐವರು ಸಿಬ್ಬಂದಿ, ಅಶ್ವತ್ಥ್ ನನ್ನು ಅಡ್ಡಗಟ್ಟಿದ್ದಾರೆ.

ಬಂಧಿಸಲು ಹೋದಾಗ ಪೇದೆ ಆಕಾಶ್ ಕೈಗೆ ಲಾಂಗ್‍ನಿಂದ ಹಲ್ಲೆ ನಡೆಸಿ ಅಶ್ವತ್ಥ್ ಪರಾರಿಯಾಗಲು ಯತ್ನಿಸಿದ್ದು, ಇನ್ಸ್ ಪೆಕ್ಟರ್ ಮುಖರಮ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಶರಣಾಗುವಂತೆ ಸೂಚಿಸಿದರೂ, ಕೇಳದೆ ಓಡಿಹೋಗುತ್ತಿದ್ದ ಅಶ್ವತ್ಥ್ ನ ಮೇಲೆ ಮತ್ತೊಂದು ಗುಂಡು ಹಾರಿಸಿದ್ದಾರೆ. ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡ ಅಶ್ವತ್ಥ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತನನ್ನು ವಶಕ್ಕೆ ತೆಗೆದುಕೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೇದೆ ಆಕಾಶ್ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿಪಿ ಚೇತನ್‍ಸಿಂಗ್ ರಾತೋರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy Robbery ಕಾರ್ಯಾಚರಣೆ ಇನ್ಸ್ ಪೆಕ್ಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ