SMSಗೆ ಹ್ಯಾಪಿ ಬರ್ತ್‌ ಡೇ…

Happy Birthday To SMS

04-12-2017

ನಿಮ್ಮ ಫೋನ್‌ ನಲ್ಲಿ ಎಸ್ಎಂಎಸ್ ಅಥವ ಶಾರ್ಟ್‌ ಮೆಸೇಜ್ ಸರ್ವೀಸ್ ಅರ್ಥಾತ್ ಸಂಕ್ಷಿಪ್ತ ಸಂದೇಶ ಸೇವೆ ಅಂತ ಒಂದು ವ್ಯವಸ್ಥೆ ಇದೆ ಅನ್ನೋದು ನಿಮಗೆ ನೆನಪಿನಲ್ಲಿದೆಯೇ ಅಥವ ಈ ವಾಟ್ಸ್‌ಆ್ಯಪ್ ಯುಗದಲ್ಲಿ ಪೂರ್ಣವಾಗಿ ಮರೆತೇಹೋಗಿದೆಯೇ..? ಒಂದು ಕಾಲದಲ್ಲಿ ಎಷ್ಟೊಂದು ಬಳಕೆ ಮಾಡ್ತಿದ್ವಿ ಅಲ್ವೇ? ಕೆಲವರಂತೂ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಮಾತನಾಡುತ್ತಲೇ ಫಟಾ ಫಟ್ ಅಂತ ಕೈಬೆರಳುಗಳಲ್ಲಿ ಎಸ್‌ಎಂಎಸ್ ಕಳಿಸ್ತಿದ್ದ ಸ್ಟೈಲ್ ನೋಡಿಯೇ ಬೆರಗಾಗುತ್ತಿದ್ವಿ. ಅಂಥ ಎಸ್ಎಂಎಸ್ ಗೆ ಬೆಳ್ಳಿ ಹಬ್ಬದ ಸಂಭ್ರಮ. ಹೌದು, 1992ನೇ ಇಸವಿಯ ಡಿಸೆಂಬರ್ 3ರಂದು, ನೀಲ್ ಪಾಪ್‌ವರ್ತ್‌ ಅನ್ನುವ ಸಾಫ್ಟ್ ವೇರ್ ಪ್ರೋಗ್ರಾಮರ್, ಕಂಪ್ಯೂಟರ್ ಬಳಸಿ ತನ್ನ ಸಹೋದ್ಯೋಗಿ ರಿಚರ್ಡ್ ಜಾರ್ವಿಸ್ ಅನ್ನುವವರಿಗೆ ಪ್ರಪಂಚದ ಮೊದಲ ಎಸ್ಎಂಎಸ್ ಕಳಿಸಿದ್ದರು. ಅವರು ಕಳಿಸಿದ್ದು ‘MERRY CHRISTMAS’ ಎಂಬ ಸಂದೇಶ.

ಆ ಕಾಲಕ್ಕೆ, ಒಂದು ಎಸ್ಎಂಎಸ್ ಸಂದೇಶ 160 ಅಕ್ಷರಗಳ ಮಿತಿಯಲ್ಲೇ ಇರಬೇಕಿತ್ತು. ಅದಕ್ಕಾಗಿ ಚಿತ್ರವಿಚಿತ್ರವಾದ SMS Lingo ಅಥವ ಎಸ್ಎಂಎಸ್ ಭಾಷೆಯೇ ರೂಪುಗೊಂಡಿತ್ತು. ಹೌ ಆರ್ ಯು ಅನ್ನುವುದನ್ನು Hru ಎಂದು ಬರೆಯುತ್ತಿದ್ದರು, ಮತ್ತೆ ಸಿಗೋಣ ಅನ್ನುವುದು Cul8r ಎಂದಾಗಿಬಿಡುತ್ತಿತ್ತು, ಓಕೆ ಅನ್ನುವುದೂ ಕೂಡ k ಗೆ ಮಾತ್ರ ಸೀಮಿತವಾಗಿತ್ತು. ಇದು ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ, ಪರೀಕ್ಷೆಗಳಲ್ಲೂ ಎಸ್ಎಂಎಸ್ ಭಾಷೆ ಬಳಕೆ ಆರಂಭವಾಗಿಬಿಟ್ಟಿತ್ತು. ಇನ್ನು ಕೆಲವರಂತೂ ಕುಂತಲ್ಲಿ ನಿಂತಲ್ಲಿ ಚಟಪಟ ಚಟಪಟ ಎಸ್ಎಂಎಸ್ ಮಾಡಿ ಮಾಡಿ, ಅವರ ಕೈಬೆರಳುಗಳಿಗೆ RSI ಅಂದರೆ Repetitive strain injury ಆಗುತ್ತಿತ್ತು. ಇದು, ಅತಿ ಬಳಕೆಯಿಂದ ಆಗುತ್ತಿದ್ದ ಸಮಸ್ಯೆ.

ಆ ಕಾಲಘಟ್ಟದಲ್ಲಿ, ಫೋನ್ ಮಾಡುವುದು ಅಥವ ವಾಯ್ಸ್ ಕಾಲ್ ಅನ್ನುವುದು, ಬಹಿರಂಗ ಕ್ರಿಯೆ ಆಗಿದ್ದರೆ, ಎಸ್ಎಂಎಸ್ ಅನ್ನೋದು ಅಂತರಂಗದ ಕ್ರಿಯೆ ಆಗಿತ್ತು. ತುಂಬಾ ವರ್ಷಗಳ ಕಾಲ, ಟೆಕ್ಸ್ಟ್‌ ಎಸ್ಎಂಎಸ್ ಅನ್ನುವುದು ಒಂದುರೀತಿಯಲ್ಲಿ ಆಪ್ತ ಭಾವನೆ ಮೂಡಿಸುತ್ತಿದ್ದ ‘ಬರಹ’ವಾಗಿತ್ತು. ರಾತ್ರಿ ವೇಳೆ ಅಪ್ಪ ಅಮ್ಮ ಮಲಗಿದ್ದಾಗಲೂ ಕೂಡ ಯುವ ಪ್ರೇಮಿಗಳು ಎಸ್ಎಂಎಸ್ ಮೂಲಕ ಸದ್ದಿಲ್ಲದೆ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ, 25 ವರ್ಷಗಳ ಹಿಂದೆ ಹುಟ್ಟಿದ ಎಸ್ಎಂಎಸ್‌ಗೆ ಡಿಸೆಂಬರ್ 3 ರಂದು ಹ್ಯಾಪಿ ಬರ್ತ್ ಡೇ. ಅಂದು ಹುಟ್ಟಿದ ಎಸ್ಎಂಎಸ್, ಇಂದಿನ ಅತ್ಯಂತ ಜನಪ್ರಿಯ ವಾಟ್ಸ್‌ ಆ್ಯಪ್, ಹೈಕ್ ಇತ್ಯಾದಿ ಮೆಸೇಜಿಂಗ್ ಆ್ಯಪ್ ಗಳ ಹುಟ್ಟಿಗೆ ಕಾರಣವಾಗಿದ್ದೂ ಕೂಡ ಸತ್ಯ.


ಸಂಬಂಧಿತ ಟ್ಯಾಗ್ಗಳು

Message CHRISTMAS ಮೆಸೇಜಿಂಗ್ ಇಯರ್ ಫೋನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ