ರಾಜ್ಯದ ಎಲ್ಲಾ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬರೆ

Kannada News

11-04-2017

ಬೆಂಗಳೂರು,ಏ,11: ರಾಜ್ಯದ ಎಲ್ಲಾ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬರೆ ಎಳೆದಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ, ಒಟ್ಟಾರೆ ಶೇ 8 ರಷ್ಟು ದರ ಹೆಚ್ಚಳ ಮಾಡಿ ಆದೇಶ ನೀಡಿದೆ.
ಕೈಗಾರಿಕೆ ಮತ್ತು ವಾಣಿಜ್ಯ ವಲಯ ಖಾಸಗಿ ವಿದ್ಯುತ್ ಉತ್ಪಾದಕರಿಂದ ವಿದ್ಯುತ್ ಖರೀದಿಸಲು ಮುಂದಾಗುತ್ತಿದ್ದು, ಇದನ್ನು ತಪ್ಪಿಸಲು ಇದೇ ಮೊದಲ ಬಾರಿಗೆ ವಾಣಿಜ್ಯ ಉದ್ದೇಶದಿಂದ ಈ ವಲಯಕ್ಕೆ ಸ್ವಲ್ಪ ಮಟ್ಟಿಗೆ ರಿಯಾಯಿತಿ ನೀಡಲಾಗಿದೆ. ವಿವಿಧ ಸ್ಲಾಬ್‍ಗಳಲ್ಲಿ ಪ್ರತಿ ಯೂನಿಟ್‍ಗೆ ಕನಿಷ್ಠ 15 ಪೈಸೆಯಿಂದ ಗರಿಷ್ಠ 50 ಪೈಸೆವರೆಗೆ ದರ ಏರಿಕೆಯಾಗಿದ್ದು, ಒಟ್ಟಾರೆ ಸರಾಸರಿ ಪ್ರತಿ ಯೂನಿಟ್‍ಗೆ 48 ಪೈಸೆಯಂತೆ ಏರಿಕೆ ಮಾಡಲಾಗಿದೆ. ನೂತನ ದರಗಳು ಪ್ರಸಕ್ತ ಹಣಕಾಸು ವರ್ಷದಿಂದಲೇ ಜಾರಿಗೆ ಬರಲಿದೆ.
ಆಯೋಗದ ಅಧ್ಯಕ್ಷ ಶಂಕರಲಿಂಗೇಗೌಡ ಈ ಕುರಿತು ತೀರ್ಪು ಪ್ರಕಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತಿಯೂನಿಟ್‍ಗೆ 1.48 ರೂ ದರ ಏರಿಕೆಗೆ ಬೇಡಿಕೆ ಇಟ್ಟಿದ್ದವು. ಆದರೆ ಸರಾಸರಿ 48 ಪೈಸೆಗಿಂತ ಹೆಚ್ಚು ಏರಿಕೆ ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಕಳೆದ ವರ್ಷ ಮಳೆ ಅಭಾವದಿಂದ ಅಗ್ಗದ ಜಲ ವಿದ್ಯುತ್ ಬಳಕೆ ಕಡಿಮೆಯಾಗಿ, ಹೆಚ್ಚಿನ ಬೆಲೆಯ ವಿದ್ಯುತ್ ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ 2296 ಕೋಟಿ ಆದಾಯ ಕೊರತೆ ಎದುರಾಗಿತ್ತು. ಇದನ್ನು ಸರಿದೂಗಿಸಿಕೊಳ್ಳಲು ಪ್ರತಿ ಯೂನಿಟ್‍ಗೆ 42 ಪೈಸೆ ಮತ್ತು ಬರುವ ವರ್ಷ ಉಷ್ಣ ವಿದ್ಯುತ್ ಘಟಕಗಳ ಇಂಧನ ವೆಚ್ಚದಲ್ಲಿ ಹೆಚ್ಚಳವಾಗುತ್ತಿರುವ 6 ಪೈಸೆ ಏರಿಕೆಗೆ ಆಯೋಗ ಒಪ್ಪಿಗೆ ನೀಡಿದೆ.
ನಗರ ಪ್ರದೇಶಗಳ ಗೃಹ ಬಳಕೆಯ ಗ್ರಾಹಕರು ಪ್ರತಿ 30 ಯೂನಿಟ್‍ಗೆ 3 ರಿಂದ 3.25, 31 ರಿಂದ 100 ಯೂನಿಟ್‍ಗೆ 4.40 ರಿಂದ 4.70 ರೂ, 100 ರಿಂದ 200 ಯೂನಿಟ್‍ಗೆ 5.90 ರೂನಿಂದ 6.25, 200 ಕ್ಕೂ ಮೇಲ್ಪಟ್ಟ ಯೂನಿಟ್ ಬಳಕೆದಾರರಿಗೆ 6.90 ರಿಂದ 7.30 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಬೆಸ್ಕಾಂ ವ್ಯಾಪ್ತಿಯ ನಗರ ಪ್ರದೇಶಗಳ ಗ್ರಾಹಕರಿಗೆ ಮೊದಲ 200 ಯೂನಿಟ್‍ವರೆಗೆ ಯಾವುದೇ ಏರಿಕೆ ಮಾಡಿಲ್ಲ. 201 ರಿಂದ 300 ಯೂನಿಟ್‍ಗಳಿಗೆ 6.90 ರೂ ನಿಂದ 7.30 ರೂ, 301 ರಿಂದ 400 ಯೂನಿಟ್ ವಿದ್ಯುತ್ ಬಳಸುವವರಿಗೆ 6.90 ರೂನಿಂದ 7.40 ರೂಗೆ ಏರಿಕೆ ಮಾಡಲಾಗಿದೆ.
ಗ್ರಾಮೀಣ ಪ್ರದೇಶಕ್ಕೆ ಮೊದಲ 30 ಯೂನಿಟ್ 2.90 ರೂನಿಂದ 3.15 ರೂ, 31 ರಿಂದ 100 ಯೂನಿಟ್‍ಗೆ 4.10 ರೂನಿಂದ 4.40 ರೂ, 101 ರಿಂದ 200 ಯೂನಿಟ್‍ಗೆ 5.60 ರೂನಿಂದ 5.95 ರೂಗೆ ಏರಿಕೆ ಮಾಡಲಾಗಿದೆ.
ಬೆಸ್ಕಾಂನ ಅರೆನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಎರಡು ಅಧಿಕ ಹಂತಗಳನ್ನು ಜಾರಿಗೆ ತರಲಾಗಿದೆ. 201 ರಿಂದ 300 ಯೂನಿಟ್‍ವರೆಗೆ 6.40 ರೂನಿಂದ 6.80 ರೂಗೆ, 300 ಯೂನಿಟ್‍ಗಳಿಗೆ ಮೇಲ್ಪಟ್ಟು 6.40 ರೂನಿಂದ 6.85ಕ್ಕೆ ಏರಿಕೆ ಮಾಡಲಾಗಿದೆ. ಗೃಹ ಬಳಕೆ ಗ್ರಾಹಕರಿಗೆ ಪ್ರತಿ ಕಿಲೋವ್ಯಾಟ್‍ಗೆ ನಿಗದಿತ ಶುಲ್ಕವನ್ನು 5 ರಿಂದ 10 ರೂವರೆಗೆ ಹೆಚ್ಚಿಸಲಾಗಿದೆ.
ಇದೇ ಮೊದಲ ಬಾರಿಗೆ ಕೈಗಾರಿಕಾ ಬಳಕೆದಾರರಿಗೆ ಸ್ವಲ್ಪ ಮಟ್ಟಿಗೆ ರಿಯಾಯಿತಿ ಲಭಿಸಿದೆ. ಎಲ್.ಟಿ. ಕೈಗಾರಿಕೆ ಬಳಕೆದಾರರಿಗೆ 10 ರಿಂದ 20 ಪೈಸೆ ಏರಿಕೆಯಾಗಿದೆ. ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಇತರ ಮಹಾನಗರ ಪ್ರದೇಶಗಳ ಬಳಕೆದಾರರಿಗೆ ಮೊದಲ 500 ಯೂನಿಟ್ ಬಳಕೆಗೆ ಈಗಿರುವ 5.10 ರೂ ನಿಂದ 5.25 ರೂ, 500 ಯೂನಿಟ್‍ಗಿಂತ ಹೆಚ್ಚು ಬಳಕೆದಾರರಿಗೆ ಈಗಿರುವ 6.30 ರೂನಿಂದ 6.50ಕ್ಕೆ ಹೆಚ್ಚಿಸಿದ್ದು, ಇದಕ್ಕೂ ಹೆಚ್ಚಿಗೆ ಎಷ್ಟೇ ಪ್ರಮಾಣದಲ್ಲಿ ವಿದ್ಯುತ್ ಬಳಸಿದರೆ ಅದಕ್ಕೆ ಇದೇ ದರ ಅನ್ವಯವಾಗಲಿದೆ.
ಇತರೆ ಎಸ್ಕಾಂಗಳ ವ್ಯಾಪ್ತಿಯ ಮಹಾನಗರಗಳಲ್ಲಿ ಮೊದಲ 500 ಯೂನಿಟ್‍ವರೆಗಿನ ಬಳಕೆದಾರರಿಗೆ ಈಗಿನ 4.95 ರೂ ನಿಂದ 5.10 ರೂ, 500 ರಿಂದ 100 ಯೂನಿಟ್  ವಿದ್ಯುತ್ ಬಳಸುವವರಿಗೆ ಈಗಿರುವ 5.85 ರೂನಿಂದ 6.05 ರೂವರೆಗೆ 1000 ಯೂನಿಟ್‍ಗಿಂತ ಹೆಚ್ಚು ಬಳಸುವವರಿಗೆ ಪ್ರತಿ 6.15 ರೂನಿಂದ 6.35 ರೂಗೆ ಏರಿಕೆ ಮಾಡಲಾಗಿದೆ.
ಎಲ್ಲಾ ನಗರ ಪ್ರದೇಶಗಳ ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‍ಗೆ ಸರಾಸರಿ 35 ಪೈಸೆ ಏರಿಸಲಾಗಿದೆ. ಈ ವರ್ಗದಲ್ಲಿ ಮೊದಲ 50 ಯೂನಿಟ್‍ವರೆಗೆ ಈಗಿರುವ 7.15 ರೂನಿಂದ 7.50 ರೂ, ನಂತರದ ಬಳಕೆಗೆ 8.15 ರಿಂದ 8.50 ರೂಗೆ ಏರಿಸಲಾಗಿದೆ. ಗ್ರಾಮಾಂತರ ಪ್ರದೇಶದ ವಾಣಿಜ್ಯ ಬಳಕೆದಾರರಿಗೆ ಮೊದಲ 50 ಯೂನಿಟ್‍ಗೆ ಹೊಸ ದರ 7 ರೂ ಮತ್ತು ನಂತರದ ಬಳಕೆಗೆ 8.00 ರೂನಂತೆ ನಿಗದಿಮಾಡಲಾಗಿದೆ.
ಎಲ್.ಟಿ. ಸ್ಧಾವರಗಳಲ್ಲಿ ಕುಡಿಯುವ ನೀರು ಮತ್ತು ಬೀದಿ ದೀಪಗಳಿಗೆ ಬಳಸುವ ವಿದ್ಯುತ್‍ಗೆ 3.90 ರೂನಿಂಗ 4.25ಕ್ಕೆ ಏರಿಸಲಾಗಿದೆ. ಎಚ್.ಟಿ. ಕುಡಿಯುವ ನೀರು ಸರಬರಾಜು ಸ್ಥಾವರಗಳಿಗೆ 4.50 ರೂನಿಂದ 4.85ಕ್ಕೆ ಏರಿಸಲಾಗಿದೆ. ವಿದ್ಯಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ವಿದ್ಯುತ್ ದರವನ್ನು ಕೂಡ ಏರಿಸಲಾಗಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ