ಬರಲಿದೆ ಬಾಡಿಗೆ ಸೈಕಲ್ ಯೋಜನೆ

Rent cycle planning

02-12-2017

ಬೆಂಗಳೂರು,ಡಿ2-ನಗರದಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಾ ಸಂಚಾರ ದಟ್ಟಣೆ ಮಿತಿ ಮೀರುತ್ತಿರುವುದಕ್ಕೆ ಕಡಿವಾಣ ಹಾಕಲು ಬಾಡಿಗೆ ಸೈಕಲ್ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದ್ದು,ಸೈಕಲ್‍ಗಳನ್ನು ಬಾಡಿಗೆ ಕೊಡಲು ನಗರದ 345 ಕಡೆಗಳಲ್ಲಿ ಜಾಗ ಗುರುತಿಸಲಾಗಿದೆ.
ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಜಂಟಿಯಾಗಿ ಜಾರಿಗೆ ತರುವ ಬಾಡಿಗೆ ಸೈಕಲ್ ಯೋಜನೆಯನ್ನು ವ್ಯವಸ್ಥಿವಾಗಿ ಅನುಷ್ಟಾನ  ಗೊಳಿಸಲು ಸಂಚಾರ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.ಈಗಾಗಲೇ ಬಾಡಿಗೆ ಸೈಕಲ್ ಯೋಜನೆ 6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸಲಾಗಿದೆ.
ಡಲ್ಟ್ ರೂಪಿಸಿರುವ ಯೋಜನೆಯಂತೆ ಪ್ರತಿ 250 ರಿಂದ 350 ಮೀಟರ್ ದೂರದಲ್ಲಿ ಒಂದು ಸೈಕಲ್ ನಿಲುಗಡೆಗೆ ತಾಣ ಸ್ಥಾಪಿಸಲಾಗುತ್ತಿದೆ. ಒಟ್ಟು 25 ಕಿ.ಮೀ. ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು, 345 ಸೈಕಲ್ ನಿಲುಗಡೆ ತಾಣಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಸ್ಥಳ ಗುರುತಿಸಿರುವ ಡಲ್ಟ್ ಅದರ ಪಟ್ಟಿಯನ್ನು ಬಿಬಿಎಂಪಿಗೆ ನೀಡಿದೆ.
ಜನರಿಗೆ ಯಾವುದೇ ಕಾರಣಕ್ಕೂ ಸೈಕಲ್‍ಗಳ ಕೊರತೆ, ಸಮಸ್ಯೆ ಆಗದಿರಲಿ ಎಂದು 6 ಸಾವಿರ ಸೈಕಲ್‍ಗಳನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಲಾಗಿದೆ. ಎಲ್ಲಾ 345 ಸೈಕಲ್ ನಿಲುಗಡೆ ತಾಣದಲ್ಲಿ ಪ್ರತಿ ನಿಲುಗಡೆಯಲ್ಲೂ ಕನಿಷ್ಠ 15 ಸೈಕಲ್ ಇರಿಸಲು ಯೋಚಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಮೂಲಕ ನಿಲುಗಡೆ ತಾಣದಲ್ಲಿ ಅಳವಡಿಸಲಾಗುವ ಯಂತ್ರದಲ್ಲಿ ಹಣ ಪಾವತಿಸಿ ತೆಗೆದುಕೊಂಡು ಹೋಗಬೇಕು. ಅದಕ್ಕೂ ಮುನ್ನ ಸೈಕಲ್ ತೆಗೆದುಕೊಂಡು ಹೋಗುವವರು ದಾಖಲೆ ಸಲ್ಲಿಸಿ, ಕಾರ್ಡ್ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಸೈಕಲ್‍ಗಳನ್ನು ಗಂಟೆ ಲೆಕ್ಕದಲ್ಲಿ ಬಾಡಿಗೆಗೆ ನೀಡಲಾಗುತ್ತದೆ. ಪ್ರತಿ ಗಂಟೆಗೆ 5 ರೂ. ದರ ನಿಗದಿ ಮಾಡುವ ಬಗ್ಗೆ ಚಿಂತಿಸಲಾಗಿದೆ.
ಜಿಪಿಎಸ್ ನಿಗಾ
ಸೈಕಲ್ ಎಲ್ಲಿದೆ, ಎಲ್ಲಿಗೆ ತೆರಳುತ್ತಿದೆ, ಸೈಕಲ್ ಕಳ್ಳತನವಾಗದಂತೆ ತಡೆಯಲು ಹಾಗೂ ಅದರ ನಿಗಾವಹಿಸಲು ಪ್ರತಿಯೊಂದು ಸೈಕಲ್‍ಗೂ ಜಿಪಿಎಸ್ ಅಳವಡಿಸಲಾಗುತ್ತದೆ. ಇನ್ನು, ಸೈಕಲ್ ಖರೀದಿ ಮತ್ತು ಯೋಜನೆ ಜಾರಿಗೆ 60 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಕೇಂದ್ರ ವ್ಯಾಪಾರಿ ವಲಯದಲ್ಲಿ ಸೈಕಲ್ ಬಾಡಿಗೆಗೆ ದೊರೆಯುವ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ಸೈಕಲ್ ಸವಾರಿಗೆ ಬೇಕಾಗುವ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿಕೊಡಲಿದೆ. ಇನ್ನು, ಸೈಕಲ್ ಸಂಚಾರಕ್ಕೆ 125 ಕಿ.ಮೀ. ಉದ್ದದ ಸೈಕಲ್ ಪಥ ನಿರ್ಮಿಸಲು ಡಲ್ಟ್‍ನಿಂದ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಬಾಡಿಗೆ ಸೈಕಲ್ ಸಂಚಾರಕ್ಕಾಗಿ ರಸ್ತೆಗಳಲ್ಲಿ ಪ್ರತ್ಯೇಕ ಪಥಗಳನ್ನು ರಚಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ