ಇನ್ನುಮುಂದೆ ಟ್ರಾಫಿಕ್ ಲೆಸ್ ಡೇ ಆಚರಣೆ

Traffic Les Day

02-12-2017

ಬೆಂಗಳೂರು,ಡಿ,1: ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿ ತಿಂಗಳ ಎರಡನೇ ಭಾನುವಾರದಂದು ಬೆಂಗಳೂರಿನ ಜನ ಸ್ವಂತ ವಾಹನಗಳನ್ನು ಬಳಸುವ ಬದಲು ಸಮೂಹ ಸಾರಿಗೆಯನ್ನು ಬಳಸುವಂತೆ ಸರ್ಕಾರ ಜನರಿಗೆ ಸೂಚಿಸಿದೆ.
ಇದೇ ಕಾರಣಕ್ಕಾಗಿ ಟ್ರಾಫಿಕ್ ಲೆಸ್ ಡೇ ಅನ್ನು ಪ್ರತಿ ತಿಂಗಳ ಎರಡನೇ ಭಾನುವಾರ ಆಚರಿಸಲು ನಿರ್ಧರಿಸಲಾಗಿದ್ದು ಅಂದು ಸರ್ಕಾರಿ ವಾಹನಗಳಾಗಲೀ,ಖಾಸಗಿ ವಾಹನಗಳಾಗಲೀ ಬೀದಿಗಿಳಿಯಕೂಡದು ಎಂದು ಅದು ಮನವಿ ಮಾಡಿಕೊಂಡಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಅವರು,ಪ್ರತಿ ತಿಂಗಳ ಎರಡನೇ ಭಾನುವಾರ ಖಾಸಗಿ ವಾಹನಗಳನ್ನು ಹೊರಗೆ ತರದೆ ಸಾರಿಗೆ ಸಂಸ್ಥೆಯ ಬಸ್ಸುಗಳು,ಬಾಡಿಗೆವಾಹನ,ರಿಕ್ಷಾಗಳನ್ನು ಬಳಸುವಂತೆ ಅವರು ಜನರಿಗೆ ಕರೆ ನೀಡಿದರು.
ದೆಹಲಿಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿ ಪರಿಸರ ಮಾಲಿನ್ಯ ಅಧಿಕವಾಗಿರುವುದರ ಪರಿಣಾಮವನ್ನು ಇಡೀ ದೇಶ ನೋಡುತ್ತಿದೆ.ಅಂತಹ ಸ್ಥಿತಿ ಇಲ್ಲಿ ಬರದಂತೆ ತಡೆಗಟ್ಟಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಹೊಸ ವರ್ಷದ ಎರಡನೇ ಭಾನುವಾರದಿಂದಲೇ ಈ ವಿರಳ ಸಂಚಾರ ದಿನವನ್ನು ಆರಂಭಿಸಲು ಯೋಚಿಸಲಾಗಿತ್ತಾದರೂ ಅಂದು ಸಂಕ್ರಾಂತಿ ಹಬ್ಬ ಇರುವ ಹಿನ್ನೆಲೆಯಲ್ಲಿ ಫೆಬ್ರವರಿ ಎರಡನೇ ಭಾನುವಾರದಿಂದ  ಈ ಕಾರ್ಯಕ್ರಮ ಜಾರಿಗೆ ಬರಲಿದೆ ಎಂದು ಹೇಳಿದರು.
ದೆಹಲಿಯಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸರಿ ಸಂಖ್ಯೆಯ ವಾಹನಗಳು ಒಂದು ದಿನ,ಬೆಸ ಸಂಖ್ಯೆಯ ವಾಹನಗಳು ಒಂದು ದಿನ ಬೀದಿಗಿಳಿಯುವಂತೆ ಹೇಳಲಾಗಿತ್ತಾದರೂ ಅದು ನಿರೀಕ್ಷಿತ ಪರಿಣಾಮ ಬೀರಿಲ್ಲ ಎಂದು ವಿವರಿಸಿದರು.
ಆರಂಭಿಕ ಹಂತದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಆರಂಭವಾಗಲಿರುವ ವಿರಳ ಸಂಚಾರ ದಿನ ಹಂತ ಹಂತವಾಗಿ ರಾಜ್ಯದ ಎಲ್ಲ ಮಹಾನಗರಗಳಲ್ಲಿ,ಪಟ್ಟಣ ಪ್ರದೇಶಗಳಲ್ಲಿ ಜಾರಿಯಾಗಲಿದೆ ಎಂದು ಅವರು ವಿವರ ನೀಡಿದರು.
ಇವತ್ತು ಲಕ್ಷಾಂತರ ವಾಹನಗಳು ಹೊಗೆಯುಗುಳುತ್ತಿರುವ ಪರಿಣಾಮವಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.ರಾಜ್ಯದಲ್ಲಿ ಈಗಾಗಲೇ 1.86 ಕೋಟಿ ವಾಹನಗಳಿದ್ದು ಇದನ್ನು ಗಮನದಲ್ಲಿಟ್ಟುಕೊಂಡರೆ ಮುಂದಿನ ದಿನಗಳ ಪರಿಸ್ಥಿತಿ ಏನಾಗಲಿದೆ?ಅನ್ನುವುದರ ಚಿತ್ರ ಸಿಗುತ್ತದೆ ಎಂದು ಅವರು ಹೇಳಿದರು.
ಪರಿಸರ ಮಾಲಿನ್ಯದಿಂದಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತವಾಗತೊಡಗಿದೆ.ಭೂಮಿಯ ತಾಪಮಾನ ಹೆಚ್ಚಳದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಮಾರ್ಚ್ 19 ರಂದು ಅರ್ಥ್ ಅವರ್ ಎಂದು ರಾತ್ರಿ ವೇಳೆ ಒಂದು ಗಂಟೆ ಕಾಲ ವಿದ್ಯುತ್ ದೀಪವನ್ನು ಆರಿಸುವ ಕೆಲಸ ನಡೆಯುತ್ತಿದೆ.
ಆದರೆ ನಾವು ಕೂಡಾ ನಮ್ಮ ಮಟ್ಟದಲ್ಲಿ ಸಾಧ್ಯವಾಗುವ ಪ್ರಯತ್ನಗಳನ್ನು ನಡೆಸಬೇಕಿದ್ದು ಇದೇ ಕಾರಣಕ್ಕಾಗಿ ಪ್ರತಿ ತಿಂಗಳ ಎರಡನೇ ಭಾನುವಾರ ವಿರಳ ಸಂಚಾರ ದಿನವನ್ನು ಆಚರಿಸಲು ತೀರ್ಮಾನಿಸಲಾಗಿದೆ.
ಹೀಗಾಗಿ ಜನರೂ ಆ ದಿನ ಸ್ವಂತ ವಾಹನವನ್ನು ಬಳಸದೆ ಸಮೂಹ ಸಾರಿಗೆಯನ್ನು ಬಳಸಬೇಕು ಎಂದ ಅವರು,ಈ ಕಾರ್ಯಕ್ರಮವನ್ನು ಜಾರಿಗೊಳಿಸಲು ಸಾರಿಗೆ,ಪೊಲೀಸ್ ಮತ್ತಿತರ ಇಲಾಖೆಯ ಪ್ರಮುಖರ ಜತೆ ಮಾತುಕತೆ ನಡೆಸಲಾಗುವುದು ಎಂದು ವಿವರಿಸಿದರು.
 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ