ಒಖಿ ಚಂಡಮಾರುತ 9 ಮಂದಿ ಬಲಿ

At least 9 people were killed in the Ockhi cyclone

01-12-2017

ಬೆಂಗಳೂರು: ಒಖಿ ಚಂಡಮಾರುತದ ಅಬ್ಬರದಿಂದ ನೆರೆಯ ತಮಿಳುನಾಡು ಕೇರಳದಲ್ಲಿ ಇದುವರೆಗೆ 9 ಮಂದಿ ಸಾವನ್ನಪ್ಪಿದ್ದು, 50 ಬೋಟುಗಳು ಹಾಗೂ ಕನಿಷ್ಠ 180 ಮೀನುಗಾರರು ನಾಪತ್ತೆಯಾಗಿದ್ದಾರೆ. ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲೂ ನಾಲ್ವರು ಮೃತಪಟ್ಟಿದ್ದಾರೆ. ತಮಿಳುನಾಡು, ಕೇರಳ ಕರಾವಳಿಯಲ್ಲಿ ಇಂದೂ ಕೂಡ ಧಾರಾಕಾರ ಮಳೆಯಾಗುತ್ತಿದ್ದು, ನಾಪತ್ತೆಯಾಗಿರುವ ಮೀನುಗಾರರ ಶೋಧ ಕಾರ್ಯಕ್ಕಾಗಿ ಡ್ರೊರ್ನಿಯರ್ ಮತ್ತು ಲಘು ಹೆಲಿಕಾಪ್ಟರ್ ಗಳನ್ನು ಬಳಸಲಾಗಿದೆ. ರಕ್ಷಣಾ ಕಾರ್ಯಕ್ಕೆ ನೌಕಾಪಡೆ, ಕರಾವಳಿ ತೀರ ಪಡೆ ಮತ್ತು ವಾಯು ಪಡೆಯ ಸಹಾಯ ಕೋರಲಾಗಿದೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಒಖಿ ಚಂಡಮಾರುತದಿಂದ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ತುಂತುರು ಮಳೆ ಸುರಿಯುತ್ತಿದ್ದು ಜನರು ಹೊರಬರಲಾಗದ ಸ್ಥಿತಿ ನಿರ್ಮಾಣಗೊಂಡು ನಿತ್ಯದ ಕೆಲಸ ಕಾರ್ಯಗಳಿಗೆ ತೆರಳಲು ಪರದಾಡುವಂತಾಗಿದೆ.

ಲಕ್ಷ ದ್ವೀಪದತ್ತ ಸಾಗುತ್ತಿರುವ ಒಖಿ ಚಂಡಮಾರುತದ ಪರಿಣಾಮ ತಮಿಳುನಾಡಿನ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುತ್ತಿದ್ದು, ಲಕ್ಷದ್ವೀಪದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಒಖಿ ಚಂಡಮಾರುತದ ಪರಿಣಾಮ ಕರ್ನಾಟಕದ ಹಲವೆಡೆ ಗೋಚರವಾಗಿದ್ದು, ಬೆಂಗಳೂರು, ಮೈಸೂರು ಮತ್ತು ಕರಾವಳಿ ಭಾಗಗಳಲ್ಲಿ ತುಂತುರು ಮಳೆಯಾಗುತ್ತಿದೆ. ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣವಿದೆ.

ತಮಿಳುನಾಡಿನ ರಾಜಧಾನಿ ಚೆನ್ನೈ, ತೂತುಕುಡಿ, ಕನ್ಯಾಕುಮಾರಿ ಮತ್ತು ವಿರುಧ್‍ನಗರ, ಶಿವಗಂಗಾ, ನೀಲಗಿರಿ, ದಿಂಡಿಗಲ್, ಸೇಲಂ ಮುಂತಾದೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ತಮಿಳುನಾಡು ಹಾಗೂ ಕೇರಳದಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ.

ಹಲವು ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡಿನಲ್ಲಿ ನಾಲ್ವರು ಮೃತಪಟ್ಟರೆ, ಕೇರಳದಲ್ಲಿ ಆಟೋ ರಿಕ್ಷಾದ ಮೇಲೆ ಮರ ಬಿದ್ದ ಪರಿಣಾಮ, ಚಾಲಕ ಅಸುನೀಗಿದ್ದಾರೆ. ಕನ್ಯಾಕುಮಾರಿ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚು ಮರಗಳು ಧರೆಗುಳಿದಿದ್ದು, ಹಲವಾರು ಮನೆ, ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‍ಡಿಆರ್‍ಎಫ್)ಯ 2 ತಂಡಗಳಲ್ಲಿ 60 ಮಂದಿ ಈಗಾಗಲೇ ಕನ್ಯಾಕುಮಾರಿಯನ್ನು ತಲುಪಿದ್ದು, 47 ಮಂದಿಯ ಇನ್ನೊಂದು ತಂಡವನ್ನು ಕೇರಳದ ಕೊಚ್ಚಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಶಬರಿಮಲೈ ತಾತ್ಕಾಲಿಕ ಬಂದ್: ವಿಶ್ವವಿಖ್ಯಾತ ಶಬರಿಮಲೆ ಅಯ್ಯಪ್ಪ ದೇಗುಲವನ್ನು ಎರಡು ದಿನದ ಮಟ್ಟಿಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಒಖಿ ಚಂಡಮಾರುತ ಅಬ್ಬರದಿಂದ ಕೇರಳದಲ್ಲೂ ಬಿರುಗಾಳಿ ಸಹಿತ ಭಾರೀ ಮಳೆ ಆಗುತ್ತಿದ್ದು, ಪಂಪಾ ನದಿ ಉಕ್ಕಿ ಹರಿಯುತ್ತಿದೆ. ಕಾರು ಪಾರ್ಕಿಂಗ್ ಸ್ಥಳ ಸಂಪೂರ್ಣವಾಗಿ ಮುಳುಗಿಹೋಗಿದೆ. ಅಯ್ಯಪ್ಪ ಮಾಲಾಧಾರಿಗಳು ತತ್ತರಿಸಿಹೋಗಿದ್ದಾರೆ. ಕನ್ಯಾಕುಮಾರಿಯಿಂದ ಶಬರಿಮಲೆಗೆ ತೆರಳುವ ಹಾದಿಯಲ್ಲಿ ನೂರಾರು ಮರಗಳು ಧರೆಗುರುಳಿವೆ. ಅಯ್ಯಪ್ಪ ಭಕ್ತರ ಸುರಕ್ಷತೆ ದೃಷ್ಟಿಯಿಂದ ನಾಳೆವರೆಗೂ ಅಯ್ಯಪ್ಪ ದೇಗುಲವನ್ನು ಬಂದ್ ಮಾಡಲಾಗಿದೆ.

ಕರಾವಳಿಗೆ ಅಪ್ಪಳಿಸುವ ಸಾಧ್ಯತೆ: ತಮಿಳುನಾಡು ಹಾಗೂ ಕೇರಳದ ಬಹು ಭಾಗದಲ್ಲಿ ತನ್ನ ರುದ್ರ ನರ್ತನವನ್ನು ತೋರಿದ ಒಖಿ ಚಂಡಮಾರುತ ಕರ್ನಾಟಕದ ಕರಾವಳಿಯನ್ನೂ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಹಿಂದೂ ಮಹಾಸಾಗರದಲ್ಲಿ ಈ ಖುತುವಿನ ಮೊದಲ ಬಾರಿಗೆ ಬೀಸುತ್ತಿರುವ ಈ ಚಂಡಮಾರುತ ಅರಬ್ಬಿ ಸಮುದ್ರ ಮೂಲಕ ಹಾದು ಹೋಗಲಿದೆ. ಗಂಟೆಗೆ 38 ಕಿಲೋ ಮೀಟರ್ ವೇಗದಲ್ಲಿ ಆರಂಭಗೊಂಡಿರುವ ಈ ಚಂಡಮಾರುತ ಕೇರಳದ ಕರಾವಳಿ ತಿರುವನಂತಪುರ, ಕನ್ಯಾಕುಮಾರಿ, ಇಡುಕ್ಕಿ ಮೊದಲಾದ ಪ್ರದೇಶಗಳಲ್ಲಿ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳು ಹಾನಿಯಾಗಿವೆ.

ಇದೀಗ ಒಖಿ ಕೇರಳವನ್ನು ಪ್ರವೇಶಿಸಿದ್ದು, ಯಾವುದೇ ಸಂದರ್ಭದಲ್ಲೂ ಕರ್ನಾಟಕದ ಕರಾವಳಿಯಲ್ಲಿ ತನ್ನ ರೌದ್ರ ನರ್ತನವನ್ನು ತೋರುವ ಸಾಧ್ಯತೆಗಳು ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಉಪಗ್ರಹ ಆಧಾರಿತ ಚಿತ್ರದಲ್ಲಿ ಈ ಚಂಡಮಾರುತದ ಪ್ರಭಾವ ಇಡೀ ಕರ್ನಾಟಕದಾದ್ಯಂತ ಬೀರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮೇತ್ರಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ