ರೇಖಾ ಚಿತ್ರ ಕೊಟ್ಟ ಸುಳಿವು...!

chain snatchers arrested

30-11-2017

ಬೆಂಗಳೂರು: ತಂಗಿಯ ವಿವಾಹ ಸಾಲ ತೀರಿಸಲು, ಅಲ್ಲದೇ ಪ್ರೇಯಸಿಯ ಜೊತೆ ಮೋಜು ಮಾಡಲು ಸರ ಅಪಹರಣದಲ್ಲಿ ತೊಡಗಿದ್ದ ಮೆಕ್ಯಾನಿಕ್ ಸೇರಿ ಇಬ್ಬರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ, 15 ಲಕ್ಷ ಮೌಲ್ಯದ 14 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನಪಟ್ಟಣದ ತ್ರಿವನ್‍ಪುರ ಮೊಹಲ್ಲಾದ  ಮ್ಯಾಕ್ಯಾನಿಕ್ ಸದ್ದಾಂ ಮೆಹೆದಿ (23) ಹಾಗೂ ಹಳೆ ಆರೋಪಿ ಕೆ.ಆರ್.ಪುರಂನ ಅಯ್ಯಪ್ಪನಗರದ ಎಂ.ಡಿ ಯಾಸಿನ್ ಬಂಧಿತ ಆರೋಪಿಗಳಾಗಿದ್ದಾರೆ, ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಬಂಧಿತರಿಂದ 15 ಲಕ್ಷ ಮೌಲ್ಯದ 615 ಗ್ರಾಂ ತೂಕದ 14 ಚಿನ್ನದ ಸರಗಳು, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ, ಆರೋಪಿ ಸದ್ದಾಂಹುಸೇನ್ ಮೆಕ್ಯಾನಿಕ್ ಆಗಿದ್ದು, ಇತ್ತೀಚೆಗಷ್ಟೆ ಸಹೋದರಿಯ ವಿವಾಹಕ್ಕೆ ಸಾಲ ಮಾಡಿದ್ದ. ಅಲ್ಲದೆ ಈತನಿಗೆ ಪ್ರೇಯಸಿಯೊಬ್ಬಳಿದ್ದು, ಆಗಾಗ ಆಕೆಯ ಜೊತೆ ಸಿನಿಮಾ, ಶಾಪಿಂಗ್ ಇನ್ನಿತರ ಶೋಕಿಗಾಗಿ ಕೆಲಸದಲ್ಲಿ ಹೆಚ್ಚಿನ ಹಣ ಗಳಿಸಲು ಸಾಧ್ಯವಾಗಿರಲಿಲ್ಲ, ಹೆಚ್ಚಿನ ಹಣ ಗಳಿಸುವ ಚಿಂತನೆಯಲ್ಲಿದ್ದ ಆರೋಪಿ ನಾಯಂಡನಹಳ್ಳಿಗೆ ಬಂದಾಗ ಬಸ್‍ನಲ್ಲಿ ಪರ್ಸ್ ಕಳವು ಮಾಡುವ ವೇಳೆ ಮತ್ತೊಬ್ಬ ಆರೋಪಿ ಯಾಸೀನ್ ಪರಿಚಯವಾಗಿದ್ದಾನೆ. ಯಾಸಿನ್ ಈಗಾಗಲೇ ಮೋಜಿಗಾಗಿ ಚಿನ್ನದ ಸರ ಕಳವು, ಸುಲಿಗೆ ಮಾಡಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದು, ಇವರಿಬ್ಬರು ಸೇರಿ ದ್ವಿಚಕ್ರ ವಾಹನವನ್ನು ಕಳವು ಮಾಡಿ ಅದರಿಂದ ನಗರದ ವಿವಿಧೆಡೆ ಸುತ್ತಾಡಿ ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದರು.

ಘಟನೆ ವಿವರ: ಕೆ.ಆರ್.ಪುರಂನಲ್ಲಿ ಆರೋಪಿಗಳು ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿದ್ದು, ಮಹಿಳೆಯು ಪೊಲೀಸರಿಗೆ ದೂರು ನೀಡುವ ವೇಳೆ ಆರೋಪಿಯೊಬ್ಬನ ಶೇ. 90ರಷ್ಟು ಹೋಲಿಕೆಯಾಗುವ ಚಹರೆ ನೀಡಿದ್ದರು. ಅದನ್ನಾಧರಿಸಿ ಕೆಜಿಎಫ್‍ನ ಜಗದೀಶ್ ಎಂಬುವರು ರೇಖಾಚಿತ್ರವನ್ನು ಬಿಡಿಸಿದ್ದರು. ಅದನ್ನು ಎಲ್ಲ ಠಾಣೆಗಳಿಗೆ ರವಾನಿಸಲಾಗಿತ್ತು. ಕೋರಮಂಗಲದಲ್ಲಿ ನಡೆದಿದ್ದ ಸರಗಳ್ಳತನದ ಪ್ರಕರಣವೊಂದರ ಬೆನ್ನು ಹತ್ತಿದ ಪೊಲೀಸರು ರೇಖಾ ಚಿತ್ರವನ್ನಿಟ್ಟುಕೊಂಡು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಬಂಧನದಿಂದ ಕೋರಮಂಗಲ, ಜ್ಞಾನಭಾರತಿ, ತಿಲಕ್‍ನಗರ, ವಿಜಯನಗರ, ಬಾಣಸವಾಡಿ, ಬೇಗೂರು, ಕೆಆರ್ ಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ 14 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಯಾಸಿನ್ ಈ  ಹಿಂದೆ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಕಳ್ಳತನ, ಚೆನ್ನಗಿರಿ, ಕುಂಬಳಗೋಡು ಠಾಣೆಗಳಲ್ಲೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ.


ಸಂಬಂಧಿತ ಟ್ಯಾಗ್ಗಳು

chain snach crime ಕೆಜಿಎಫ್‍ ಮೆಕ್ಯಾನಿಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ