ಹೊಸ ಟಿವಿ ಚಾನಲ್ ಹರಾಜು….!

Auctions likely soon to allot TV channel slots

30-11-2017

ಮೋದಿ ಸರ್ಕಾರ ಬಂದ ಮೇಲೆ ಕಲ್ಲಿದ್ದಲು ನಿಕ್ಷೇಪ ಹರಾಜಾಯ್ತು, 2 ಜಿ ಮತ್ತು 3 ಜಿ ತರಂಗಾಂತರ ಹರಾಜಾಯ್ತು, ಎಫ್ ಎಂ ರೇಡಿಯೋ ಫ್ರೀಕ್ವೆನ್ಸಿ ಹರಾಜಾಯ್ತು ಇದೀಗ ಟಿವಿ ಫ್ರೀಕ್ವೆನ್ಸಿಯನ್ನೂ ಹರಾಜು ಹಾಕುವ ಸಮಯ ಬಂದಿದೆ. ಹೌದು, ಹೊಸ ನ್ಯೂಸ್ ಚಾನಲ್ ಅಥವ ಮನರಂಜನಾ ಚಾನಲ್ ಗೆ ನೀಡಲಾಗುವ ತರಂಗಾಂತರವನ್ನೂ ಹರಾಜಿನ ಮೂಲಕ ಹಂಚಿಕೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಯೋಚನೆ ಮಾಡುತ್ತಿದೆ. ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯವರು, ಈ ಬಗ್ಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಅಂದರೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಸಲಹೆ ಕೋರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚೂ ಕಮ್ಮಿ ತಿಂಗಳಿಗೊಂದು ಹೊಸ ಟಿವಿ ಚಾನಲ್ ಆರಂಭವಾಗುತ್ತಿರುವುದನ್ನು ನೀವೆಲ್ಲರೂ ಗಮನಿಸಿದ್ದೀರಿ. ದೇಶದಲ್ಲಿ ಹೊಸ ನ್ಯೂಸ್ ಚಾನಲ್ ಮತ್ತು ಮನರಂಜನಾ ಚಾನಲ್ ಗಳ ಆರಂಭಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ತುಂಬಾ ಹೆಚ್ಚಾಗಿದೆಯಂತೆ. ಇಷ್ಟೊಂದು ಬೇಡಿಕೆ ಇರುವುದರಿಂದ, ಟಿವಿ ಚಾನಲ್ ಗಳಿಗೆ ಲೈಸನ್ಸ್ ನೀಡುವುದರಿಂದಲೂ ಸರ್ಕಾರಕ್ಕೆ ಸಾಕಷ್ಟು ಹಣ ಬರುವಂತೆ ಮಾಡಿಕೊಳ್ಳಬಹುದು ಎನ್ನುವುದು ಕೇಂದ್ರ ಸರ್ಕಾರದ ಚಿಂತನೆ. ಇದರ ಜೊತೆಗೆ, ಟಿವಿ ಫ್ರೀಕ್ವೆನ್ಸಿಯನ್ನು ಹರಾಜಿನ ಮೂಲಕ ವಿತರಣೆ ಮಾಡುವುದರಿಂದ, ಅಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಅಥವ ವಶೀಲಿ ನಡೆಸುವುದಕ್ಕೂ ಅವಕಾಶ ಇರುವುದಿಲ್ಲ ಅನ್ನುವುದು, ಸರ್ಕಾರದ ವಾದ.

ಆದರೆ, ಈ ಹರಾಜು ಪದ್ಧತಿ ಜಾರಿಗೆ ಬಂದರೆ, ಯಾರು ದೊಡ್ಡ ಚೀಲದಲ್ಲಿ ಹಣ ತುಂಬಿಕೊಂಡು ಬರುತ್ತಾರೋ ಅವರಿಗಷ್ಟೇ ಲೈಸನ್ಸ್ ಸಿಗುತ್ತದೆ. ಹಣದ ಲಭ್ಯತೆ ಕಡಿಮೆ ಇದ್ದರೂ ಕೂಡ, ಉತ್ತಮ ಐಡಿಯಾಗಳನ್ನು ಇಟ್ಟುಕೊಂಡು, ಮಾಧ್ಯಮ ಕ್ಷೇತ್ರದಲ್ಲಿ ಒಂದಿಷ್ಟು ಹೊಸತನ ತರುವ ಆಕಾಂಕ್ಷೆಯಿರುವ ಜನರಿಗೆ ಅವಕಾಶ ತಪ್ಪಿಹೋಗುವ ಸಾಧ್ಯತೆಗಳೇ ಹೆಚ್ಚಾಗುತ್ತವೆ. ಹೀಗಾಗಿ, ಹರಾಜು ಅನ್ನುವುದು ಸರ್ಕಾರಕ್ಕೆ ಲಾಭವನ್ನೇನೋ ತರಬಹುದು, ಆದರೆ ಗುಣಮಟ್ಟ ನೀಡುವ ಬಯಕೆ ಇರುವಂಥವರಿಗೆ ನಿರಾಸೆಯೂ ಆಗಬಹುದು.

ಇಲ್ಲಿಯವರೆಗೂ ಇದ್ದ ಪದ್ಧತಿಯಂತೆ, ಹೊಸ ಟಿವಿ ಚಾನಲ್ ಆರಂಭಿಸಲು ಬಯಸುವವರು, ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಇಲಾಖೆಯವರು ಅರ್ಜಿ ಪರಿಶೀಲಿಸಿ ಅನುಮತಿ ನೀಡುತ್ತಿದ್ದರು. ಟಿವಿ ಚಾನಲ್ ನವರು ಹಾಲಿ, 2 ಲಕ್ಷ ರೂಪಾಯಿ ವಾರ್ಷಿಕ ಶುಲ್ಕ ಮತ್ತು ಅಪ್ ಲಿಂಕಿಂಗ್-ಡೌನ್ ಲಿಂಕಿಂಗ್ ಶುಲ್ಕವಾಗಿ 10 ಸಾವಿರ ರೂಪಾಯಿಗಳನ್ನು ಕಟ್ಟಬೇಕಾಗಿತ್ತು. ಎಲ್ಲ ಚಾನಲ್ ನವರು, ಪ್ರತಿ ವರ್ಷವೂ ಲೈಸೆನ್ಸ್ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗಿತ್ತು. ಇದರ ಜೊತೆಗೆ, ಹೊಸ ಚಾನಲ್‌ ಗೆ  ಅರ್ಜಿ ಸಲ್ಲಿಸುವವರು ಕೇಂದ್ರ ಗೃಹ ಇಲಾಖೆಯವರಿಂದಲೂ ಸೆಕ್ಯುರಿಟಿ ಕ್ಲಿಯರೆನ್ಸ್ ಪಡೆಯಬೇಕಾಗಿತ್ತು.

ಹಲವಾರು ಅಂದಾಜುಗಳ ಪ್ರಕಾರ, ಭಾರತದಲ್ಲಿ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಸದ್ಯಕ್ಕೆ ದೇಶದಲ್ಲಿ 391 ನ್ಯೂಸ್ ಚಾನಲ್‌ ಗಳು ಮತ್ತು 492 ಇತರೆ ಚಾನಲ್‌ ಗಳು ಕಾರ್ಯನಿರ್ವಹಿಸುತ್ತಿವೆ. ದೇಶದ ನಾಗರಿಕರು, ನಮಗೆ ಇನ್ನಷ್ಟು ಟಿವಿ ಚಾನಲ್ ಗಳು ಬೇಕು ಎಂದೇನೂ ಕೇಳುತ್ತಿಲ್ಲ. ಆದರೆ, ಇರುವ ಚಾನಲ್ ಗಳೇ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಲಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲಿ, ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಎಚ್ಚರಿಸಲಿ  ಎಂದಷ್ಟೇ ಬಯಸುತ್ತಾರೆ ಅನ್ನುವುದು ವಾಸ್ತವ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Nice information
  • Prashantha ripponpete
  • Journalist