‘ಮೋದಿ-ರಕ್ಷಣಾ ಸಚಿವೆಯಿಂದ ರಾಜ್ಯಕ್ಕೆ ಅನ್ಯಾಯ’

"Modi-Defense Minister

29-11-2017

ಬೆಂಗಳೂರು: ಫ್ರಾನ್ಸ್‍ ನಿಂದ ರಫೆಲ್ ಯುದ್ಧ ವಿಮಾನ ಖರೀದಿಸಲು ಆ ದೇಶದ ಡೆಸಾಲ್ಟ್ ಕಂಪನಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಮಾಡಿಕೊಂಡಿರುವ ಒಪ್ಪಂದದಿಂದ ಕರ್ನಾಟಕಕ್ಕೆ ನಷ್ಟವಾಗಿದ್ದು, ಅನಿಲ್ ಅಂಬಾನಿ ಕಂಪೆನಿಗೆ ಭಾರೀ ಲಾಭವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 126 ಯುದ್ಧ ವಿಮಾನಗಳ ಖರೀದಿಗೆ ಈ ಹಿಂದೆ ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದದಂತೆ ವಿಮಾನಗಳನ್ನು ಬೆಂಗಳೂರಿನಲ್ಲಿರುವ ನಮ್ಮ ಹೆಮ್ಮೆಯ ಎಚ್‍ಎಎಲ್ ಸಾರ್ವಜನಿಕ ಕ್ಷೇತ್ರದ ಉದ್ದಿಮೆ ತಯಾರು ಮಾಡಬೇಕಿತ್ತು. ಇದನ್ನು ರದ್ದುಗೊಳಿಸಿರುವ ಎನ್‍ಡಿಎ ಸರ್ಕಾರ ಅನಿಲ್ ಅಂಬಾನಿ ಕಂಪನಿಗೆ ಈ ಜವಾಬ್ದಾರಿಯನ್ನು ಹಸ್ತಾಂತರಿಸಿದೆ. ಅದರಲ್ಲಿ ಭಾರೀ ಅಕ್ರಮ ನಡೆದಿದೆ ಎಂದರು. ಹಿಂದಿನ ಯುಪಿಎ ಸರ್ಕಾರ ರಫೆಲ್ ಯುದ್ಧ ವಿಮಾನ ಖರೀದಿಗೆ ಕೈಗೊಂಡಿದ್ದ ಕ್ರಮಗಳಿಂದ ಬೆಂಗಳೂರಿನ ಎಚ್‍ಎಎಲ್‍ಗೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿತ್ತು. ಆದರೆ ಎನ್.ಡಿ.ಎ ಸರ್ಕಾರದಿಂದ ಹಿಂದೂಸ್ಥಾನ್ ಏರೋನಾಟಿಕಲ್‍ಗೆ ಹರಿದುಬರಬೇಕಿದ್ದ ಬಂಡವಾಳ ತಪ್ಪಿದ್ದು, ಉದ್ಯೋಗ ಸೃಷ್ಟಿ ಸದಾವಕಾಶವೂ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದ ಬಿಜೆಪಿ ಮುಖಂಡರು ತಕ್ಷಣ ಕೇಂದ್ರಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ರಫೆಲ್ ತಯಾರಿಕಾ ಜವಾಬ್ದಾರಿಯನ್ನು ಎಚ್‍ಎಎಲ್‍ಗೆ ದೊರಕಿಸಿಕೊಡಬೇಕು. ರಾಜ್ಯದ ಪ್ರತಿಷ್ಠಿತ ಸಂಸ್ಥೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಯುದ್ಧ ವಿಮಾನ ಖರೀದಿಯಲ್ಲಿ ಕಾನೂನು ವ್ಯಾಜ್ಯ ಹೊರತುಪಡಿಸಿ ಒಪ್ಪಂದದ ಅಂಶಗಳನ್ನ ಬಹಿರಂಗಗೊಳಿಸುವ ಅವಶ್ಯಕತೆ ಇಲ್ಲ ಎಂದು ಷರತ್ತು ವಿಧಿಸಿಕೊಂಡಿದ್ದಾರೆ. ಹೀಗಾಗಿ ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನ ದಟ್ಟವಾಗಿದೆ. ಪ್ರಧಾನಿ ಮೋದಿ ಮತ್ತು ರಕ್ಷಣಾ ಖಾತೆ ಸಚಿವೆ ನಿರ್ಮಲ ಸೀತಾರಾಮನ್ ರಾಜ್ಯಕ್ಕೆ ಅನ್ಯಾಯ ಮಾಡಿರುವುದು ಸ್ಪಷ್ಟವಾಗಿದೆ ಎಂದರು.

ಎಚ್‍ಎಎಲ್ ಕಂಪನಿಗಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಘೋಷಣೆಗೂ ಪರಮ ಅನ್ಯಾಯವಾಗಿದೆ. ಅದರಲ್ಲೂ ನಿರ್ದಿಷ್ಟವಾಗಿ ಹಿಂದಿನ ಒಪ್ಪಂದ ರದ್ದು ಮಾಡಿ ಯುವಕರಿಗೆ ದೊರೆಯಬೇಕಾಗಿದ್ದ ಉದ್ಯೋಗ ತಪ್ಪಿಸಲಾಗಿದೆ ಎಂದು ಹೇಳಿದರು. ಎಚ್.ಎ.ಎಲ್‍ಗೆ ಅನುಕೂಲ ಮಾಡಿಕೊಡಲು ಈಗಿನ ಸರ್ಕಾರ ಡೆಸಾಲ್ಟ್ ಜತೆ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡಬೇಕು. ಯುಪಿಎ ಸರ್ಕಾರದ ಹಳೆಯ ಒಪ್ಪಂದ ಮುಂದುವರೆಸಬೇಕು. ಅಂಬಾನಿ ಮತ್ತು ಅದಾನಿ ಈಗ ಹೊಸದಾಗಿ ವಿಮಾನಯಾನ ಕಂಪನಿಗಳನ್ನು ಆರಂಭಿಸಿದ್ದಾರೆ. ಅವರಿಗೆ ಲಾಭ ಮಾಡಿಕೊಡುವುದನ್ನು ನಿಲ್ಲಿಸಬೇಕು. ನಮ್ಮ ರಾಜ್ಯದ ನಾಯಕರಾದ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

 ಬಿಜೆಪಿ ಮುಖಂಡರು ತ್ಯಾಜ್ಯ ಮತ್ತು ಕಸ ಹಾಕುವ ಕಡೆ ಅಂಬೇಡ್ಕರ್ ಫೋಟೋ ಇಟ್ಟಿದ್ದಾರೆ. ಹೀಗಾಗಿ ಬಿಜೆಪಿಯವರ ಬದ್ಧತೆ ಏನೆಂದು ತಿಳಿಯುತ್ತದೆ. ಸಂವಿಧಾನ ಶಿಲ್ಪಿಯ ಪೋಟೋವನ್ನು ಯಾರು ತ್ಯಾಜ್ಯ ಸುರಿಯುವ ಜಾಗದಲ್ಲಿ ಇಟ್ಟಿದ್ದರೋ ಅವರನ್ನು ಮೊದಲು ಬಿಜೆಪಿಯಿಂದ ಅಮಾನತುಗೊಳಿಸಬೇಕು. ಇದಕ್ಕೆ ಪರೋಕ್ಷವಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರೂ ಕೂಡ ಕಾರಣರಾಗಿದ್ದು, ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

 ಬಿಜೆಪಿ ನಾಯಕರು ಡೊಂಗಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಬಿಜೆಪಿ ನಾಯಕರಿಗೆ ಅಂಬೇಡ್ಕರ್ ಬಗ್ಗೆ ಎಷ್ಟು ಗೌರವ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ಕಚೇರಿಯಲ್ಲಿ ಅಂಬೇಡ್ಕರ್ ಫೋಟೋ ಹಾಕಿರಲಿಲ್ಲ. ಬಿಜೆಪಿಯವರು ಹೊಸ ಸಂವಿಧಾನ ಬರೆಯಲು ಮುಂದಾಗಿದ್ದರು. ಹೀಗಾಗಿ ರಾಜಕೀಯಕ್ಕಾಗಿ ಅಂಬೇಡ್ಕರ್ ಹೆಸರು ಬಳಸಿಕೊಳ್ಳುವುದು ಬೇಡ ಎಂದರು. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ದ್ವೇಷ ಹುಟ್ಟಿಸುವ ಯಂತ್ರವಿದ್ದಂತೆ. ಅವರಿಗೆ ಸಂಸ್ಕೃತಿ ಇಲ್ಲ. ಬಿಜೆಪಿಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಆ ಪಕ್ಷದ ನಾಯಕರು ಮಾತಿನ ಮೇಲೆ ಹಿಡಿತ ಹೊಂದಿಲ್ಲ ಎಂದರು.

ಚಿತ್ರನಟಿ ರಮ್ಯಾ ರಾಜ್ಯ ರಾಜಕೀಯ ಪ್ರವೇಶ ಮಾಡುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಈ ಕುರಿತು ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಇನ್ನು ಅಂಬರೀಶ್ ನಮ್ಮ ಹಿರಿಯ ನಾಯಕರು. ಪಕ್ಷದ ಯಾವುದೇ ತೀರ್ಮಾನಗಳಲ್ಲೂ ಅವರ ಪಾತ್ರ ಮಹತ್ವದ್ದಾಗಿರುತ್ತದೆ. ಅವರನ್ನು ಪಕ್ಷ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ