ವಿದ್ಯುತ್ ಕಡಿತ: ಆತಂಕಕ್ಕೆ ಕೊಂಚ ರಿಲೀಫ್

Insufficient coal in karnataka

29-11-2017 621

ಬೆಂಗಳೂರು: ಕಲ್ಲಿದ್ದಲು ಸರಬರಾಜಿನಲ್ಲಿ ತೀವ್ರ ಕೊರತೆ ಕಂಡು ಬಂದಿರುವುದರಿಂದ, ಅದಾನಿ ಮಾಲೀಕತ್ವದ ಉಷ್ಣ ವಿದ್ಯುತ್ ಸ್ಥಾವರದಿಂದ 200 ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಉನ್ನತ ಮೂಲಗಳು ಈ ವಿಷಯ ತಿಳಿಸಿದ್ದು, ಡಿಸೆಂಬರ್ ಒಂದರಿಂದ ಅದಾನಿ ಮಾಲೀಕತ್ವದ ಉಡುಪಿ ಉಷ್ಣ ವಿದ್ಯುತ್ ಸ್ಥಾವರದಿಂದ 200 ಮೆಗಾವ್ಯಾಟ್ ವಿದ್ಯುತ್ ಹೆಚ್ಚುವರಿಯಾಗಿ ರಾಜ್ಯಕ್ಕೆ ಲಭ್ಯವಾಗಲಿದೆ.

ಈಗಾಗಲೇ ಉಡುಪಿ ಉಷ್ಣವಿದ್ಯುತ್ ಸ್ಥಾವರದಿಂದ 200 ಮೆಗಾವ್ಯಾಟ್ ಗಳಷ್ಟು ವಿದ್ಯುತ್ ಅನ್ನು ರಾಜ್ಯ ಖರೀದಿ ಮಾಡುತ್ತಿದ್ದು, ಇದೀಗ ಕಲ್ಲಿದ್ದಲಿನ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 200 ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ.

ಅದಾನಿ ಮಾಲೀಕತ್ವದ ಉಷ್ಣ ವಿದ್ಯುತ್ ಸ್ಥಾವರಕ್ಕೆ ಸ್ವದೇಶದಿಂದಲ್ಲದೇ ವಿದೇಶಗಳಿಂದಲೂ ಕಲ್ಲಿದ್ದಲು ಸರಬರಾಜಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಅನಿವಾರ್ಯವಾಗಿ ಸರ್ಕಾರ ಅದಾನಿ ಮೊರೆ ಹೋಗಿದೆ. ಅದಾನಿ ಮಾಲೀಕತ್ವದ ಉಡುಪಿ ಉಷ್ಣ ವಿದ್ಯುತ್ ಸ್ಥಾವರ 1200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಈಗ ಪ್ರತಿ ಯೂನಿಟ್ ವಿದ್ಯುತ್ ಅನ್ನು 3.40 ರೂಗಳಿಗೆ ಒದಗಿಸಲು ಒಪ್ಪಿಕೊಂಡಿದೆ.

ಇಂಧನ ಇಲಾಖೆಯ ಪ್ರಸ್ತಾವವನ್ನು ಕೆ.ಇ.ಆರ್.ಸಿ ಒಪ್ಪಿಕೊಂಡಿದ್ದು ಅದರ ಬೆನ್ನಲ್ಲೇ ಸಚಿವ ಸಂಪುಟವೂ ಒಪ್ಪಿಕೊಂಡಿರುವುದರಿಂದ ಡಿಸೆಂಬರ್ 1 ರಿಂದ ರಾಜ್ಯಕ್ಕೆ 200 ಮೆಗಾವ್ಯಾಟ್ ವಿದ್ಯುತ್ ದೊರೆಯಲಿದೆ. ಈ ಮಧ್ಯೆ ರಾಜ್ಯ ಎದುರಿಸುತ್ತಿರುವ ಕಲ್ಲಿದ್ದಲಿನ ಕೊರತೆಯನ್ನು ನೀಗಿಸಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತೊಂದು ತಂತ್ರ ಹೂಡಿದ್ದು, ಆ ಮೂಲಕ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಐದು ದಿನಕ್ಕಾಗುವಷ್ಟು ಕಲ್ಲಿದ್ದಲು ಈಗಾಗಲೇ ಬಂದಿದೆ.

ಕೇಂದ್ರ ಸರ್ಕಾರದ ವತಿಯಿಂದ ಕಲ್ಲಿದ್ದಲು ಬ್ಲಾಕ್ ಪಡೆಯುವುದು,ಆ ಮೂಲಕ ರಾಜ್ಯಕ್ಕೆ ಆಮದು ಮಾಡಿಕೊಳ್ಳುವುದು ಇದುವರೆಗೆ ನಡೆಯುತ್ತಿತ್ತು.ಆದರೆ ಇದೀಗ ಅದರಲ್ಲಿ ಕೊರತೆ ಆಗಿರುವುದರಿಂದ ಖಾಸಗಿ ಸರಬರಾಜುದಾರರ ಜೊತೆ ಡಿಕೆಶಿ ಮಾತುಕತೆ ನಡೆಸಿದ್ದು,ಇತರ ರಾಜ್ಯಗಳ ಕೋಟಾದಲ್ಲಿ ಉಳಿಯುವ ಕಲ್ಲಿದ್ದಲು ರಾಜ್ಯಕ್ಕೆ ಬರುವಂತೆ ಮಾಡಿಕೊಂಡಿದ್ದಾರೆ.

ಬೇರೆ ಬೇರೆ ರಾಜ್ಯಗಳಿಗೆ ಕಲ್ಲಿದ್ದಲು ಸರಬರಾಜು ಮಾಡುವ ಖಾಸಗಿಯವರು ಇದೀಗ ಹಲವು ರಾಜ್ಯಗಳ ಕೋಟಾದಲ್ಲಿ ಉಳಿಯುವ ಕಲ್ಲಿದ್ದಲನ್ನು ಸಂಗ್ರಹಿಸಿ ಕರ್ನಾಟಕಕ್ಕೆ ಸರಬರಾಜು ಮಾಡುತ್ತಿದ್ದು ಇದರಿಂದಾಗಿ ರಾಜ್ಯ ಎದುರಿಸುತ್ತಿದ್ದ ಆತಂಕ ತತ್ಕಾಲಕ್ಕೆ ದೂರವಾಗಿದೆ.

ಕೆಲ ದಿನಗಳ ಮುನ್ನ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅರ್ಧ ದಿನಕ್ಕಾಗುವಷ್ಟು ಕಲ್ಲಿದ್ದಲು ಮಾತ್ರ ಸರಬರಾಜಾಗುತ್ತಿದ್ದುದರಿಂದ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಕಡಿತ ಆಗುವ ಸಾಧ್ಯತೆಗಳಿದ್ದವು. ಹೀಗಾಗಿಯೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪವರ್ ಎಮರ್ಜೆನ್ಸಿ ಘೋಷಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಈಗ ಅವರ ಡಬಲ್ ಟೆಕ್ನಿಕ್ಕಿನ ಮೂಲಕ ರಾಜ್ಯ ವಿದ್ಯುತ್ ಕಡಿತದ ಅಪಾಯದಿಂದ ಪಾರಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ