ಬಡ್ಡಿ ವಿಧಿಸದ ಇಸ್ಲಾಮಿಕ್ ಬ್ಯಾಂಕಿಂಗ್ ಬಗ್ಗೆ ನಿಮಗೆಷ್ಟು ಗೊತ್ತು..?

Kannada News

26-01-2017

ಧಾರ್ಮಿಕ ಕಾರಣಗಳಿಂದಾಗಿ ಬ್ಯಾಂಕಿಂಗ್ ವಲಯದಿಂದ ಹೊರಗುಳಿದಿರುವ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರ ಬಡ್ಡಿ ರಹಿತ ಬ್ಯಾಂಕಿಂಗ್ ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.. ಕೇಂದ್ರ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಬಡ್ಡಿರಹಿತ ಬ್ಯಾಂಕಿಂಗ್ ಆರಂಭಿಸಲಾಗುವುದು ಎಂದು ಆರ್‍ಬಿಐ ತನ್ನ 2015-16ನೇ ವಾರ್ಷಿಕ ವರದಿಯಲ್ಲಿ ಹೇಳಿದೆ.. ಮುಖ್ಯವಾಹಿನಿಯಿಂದ ದೂರ ಉಳಿದಿರುವ ಸಮುದಾಯವನ್ನು ಗುರಿಯಾಗಿಸಿಕೊಂಡು ಬಡ್ಡಿರಹಿತ ಬ್ಯಾಂಕಿಂಗ್ ಅಥವಾ ಷರಿಯಾ ಬ್ಯಾಂಕಿಂಗ್ ನಿಯಮಗಳ ಮಾದರಿಯಲ್ಲಿಯೇ ಬಡ್ಡಿರಹಿತ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.. ಸಾಲಕ್ಕೆ ಬಡ್ಡಿ ವಸೂಲಿ ಮಾಡುವುದಕ್ಕೆ ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ.. ಇಲ್ಲಿ ಬಡ್ಡಿಯನ್ನು ಸ್ವೀಕರಿಸುವುದು ಹಾಗೂ ನೀಡುವುದು ಎರಡೂ ತಪ್ಪು.. ಈ ನಿಬಂಧನೆಗಳಿಗೆ ಕಟ್ಟುಬಿದ್ದಿರುವ ಎಷ್ಟೋ ಮುಸ್ಲಿಮರು ಬಡ್ಡಿಗೆ ಸಾಲ ಪಡೆಯದೇ, ಬ್ಯಾಂಕಿಂಗ್ ವ್ಯವಹಾರದಿಂದ ಹೊರಗುಳಿದಿದ್ದಾರೆ.. ಈ ಹಿನ್ನೆಲೆಯಲ್ಲಿ ಜೆಡ್ಡಾ ಮೂಲದ ಇಸ್ಲಾಮಿಕ್ ಡೆವಲಪ್‍ಮೆಂಟ್ ಬ್ಯಾಂಕ್ ಅಹಮದಾಬಾದ್‍ನಲ್ಲಿ ಭಾರತದ ತನ್ನ ಮೊದಲ ಶಾಕೆ ಆರಂಭಿಸುವುದಾಗಿ ಇತ್ತೀಚೆಗೆ ಘೋಷಣೆ ಮಾಡಿತ್ತು.. ಈ ಬೆನ್ನಲ್ಲೇ ಆರ್‍ಬಿಐ ಈ ರೀತಿಯ ಬ್ಯಾಂಕ್‍ಗಳನ್ನು ತೆರೆಯಲು ಇನ್ನಷ್ಟು ಆಸಕ್ತಿ ತೋರಿಸುತ್ತಿದೆ.. ಐಡಿಬಿ ಅಂದರೆ ಇಸ್ಲಾಮಿಕ್ ಡೆವಲಪ್‍ಮೆಂಟ್ ಬ್ಯಾಂಕ್‍ನ 56 ಸದಸ್ಯ ರಾಷ್ಟ್ರಗಳ ಜತೆ ರಫ್ತು ವಹಿವಾಟು ನಡೆಸಲು ಸೌದಿ ಮೂಲದ ಬ್ಯಾಂಕ್ ಜತೆ ಭಾರತದ ರಫ್ತು ಆಮದು ಬ್ಯಾಂಕ್ 680 ಕೋಟಿ ರೂಪಾಯಿ ಮೊತ್ತದ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು.. ಈ ಯೋಜನೆ ವಿಶ್ವ ಹಿಂದೂ ಪರಿಷತ್ ಕೆಂಗಣ್ಣಿಗೆ ಗುರಿಯಾಗಿತ್ತು.. ಈ ಹಿಂದೆಯೂ ಕೆಲ ರಾಜಕೀಯ ಪಕ್ಷಗಳು ಈ ಬಡ್ಡಿ ರಹಿತ ಸಾಲ ಸೌಲಭ್ಯ ಪರಿಕಲ್ಪನೆಗೆ ವಿರೋಧ ವ್ಯಕ್ತಪಡಿಸಿದ್ದವು.. ಆದರೆ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆ ಬೇಡಿಕೆ ಉಳಿಸಿಕೊಂಡಿದ್ದರಿಂದಾಗಿ 2008ರಲ್ಲಿ ರಘುರಾಮ್ ರಾಜನ್ ನೇತೃತ್ವದ ಹಣಕಸು ವಲಯ ಸುಧಾರಣಾ ಸಮಿತಿ ದೇಶದಲ್ಲಿ ಬಡ್ಡಿ ರಹಿತ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವಂತೆ ಶಿಫಾರಸು ಮಾಡಿತ್ತು.. ಇನ್ನೊಂದೆಡೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್, ಮಲೇಷಿಯಾಗೇ ಹೋಗಿದ್ದಾಗ ಅಲ್ಲಿನ ಇಸ್ಲಾಮಿಕ್ ವ್ಯವಸ್ಥೆ ಬಗ್ಗೆ ತಿಳಿದು ಅದಕ್ಕೆ ಮಾರುಹೋಗಿದ್ದರು.. ಇಂತಹ ಬಡ್ಡಿರಹಿತ ಸಾಲ ನೀಡುವ ಬ್ಯಾಂಕ್ ವ್ಯವಸ್ಥೆಯನ್ನು ಭಾರತದಲ್ಲೂ ಸ್ಥಾಪಿಸುವುದಕ್ಕೆ ಮನಮೋಹನ್‍ಸಿಂಗ್ ಆಸಕ್ತಿ ವಹಿಸಿದ್ದರು.. ಹಿಂದೂ ರಾಷ್ಟ್ರವಾಗಿಸುವ ಪ್ರಯತ್ನದೊಂದಿಗೆ ದೇಶದಲ್ಲಿ ಅಧಿಕಾರಕ್ಕೇರಿರುವ ಬಿಜೆಪಿ ಕೂಡಾ ಈಗ ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಆಸಕ್ತಿ ತೋರಿದಂತೆ ಕಾಣುತ್ತಿದೆ.. ಇಂತಹ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಮ್ಮ ದೇಶದಲ್ಲಿ ತರುವ ಪ್ರಯತ್ನಕ್ಕೆ ಈಗ ಮತ್ತೆ ಚಾಲನೆ ಸಿಕ್ಕಿದೆ.. ಇದಕ್ಕೆ ಯಾರ್ಯಾರು ವಿರೋಧಿಸುತ್ತಾರೋ ಗೊತ್ತಿಲ್ಲ.. ಅಂದಹಾಗೆ, ಬಡ್ಡಿಯನ್ನು ಹಾಕದೇ ಬ್ಯಾಂಕ್ ನಡೆಸುವುದು ಹೇಗೆ ಅನ್ನೋದು ನಿಮ್ಮ ಯೋಚನೆಯಾಗಿರಬಹುದು.. ಆದ್ರೆ ನೀವು ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ತಿಳಿದರೆ ಈ ಅನುಮಾನಕ್ಕೆ ಉತ್ತರ ಸಿಗುತ್ತದೆ.. ಯಾವುದೇ ಬಡ್ಡಿ ಇಲ್ಲದೇ ಷರಿಯಾ ನಿಬಂಧನೆಗಳ ಪ್ರಕಾರವಾಗಿ ಇಲ್ಲಿ ಸಾಲ ನೀಡಲಾಗುತ್ತದೆ. ಇಸ್ಲಾಂ ಧರ್ಮದ ಕಾನೂನಿನ ಪ್ರಕಾರ ಬಡ್ಡಿ ಅಥವಾ ರಿಬಾ ವಿಧಿಸುವುದು ಹಾಗೂ ನೀಡುವುದು ನಿಷೇಧ. ಸಾಲವಾಗಿ ಎಷ್ಟು ಹಣವನ್ನು ತೆಗೆದುಕೊಂಡಿರುತ್ತೇವೆಯೋ ಅಷ್ಟನ್ನು ಮಾತ್ರ ವಾಪಸ್ ನೀಡಬೇಕಾಗಿರುತ್ತದೆ. ಅಂದರೆ ಒಂದು ಲಕ್ಷ ರೂಪಾಯಿ ಸಾಲವಾಗಿ ಪಡೆದಿದ್ದರೆ, ನಾವು ಒಂದು ಲಕ್ಷ ರೂಪಾಯಿಯನ್ನಷ್ಟೇ ವಾಪಸ್ ನೀಡಬೇಕಾಗಿರುತ್ತದೆ. ಷರಿಯತ್ ನಿಯಮಗಳನ್ನು ಅನುಸರಿಸುತ್ತಾ ಬಡ್ಡಿ ಅಥವಾ ರಿಬಾ ತೆಗೆದುಕೊಳ್ಳದೇ ಎಲ್ಲಾ ಇಸ್ಲಾಮಿಕ್ ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 75 ದೇಶಗಳಲ್ಲಿ ಈ ಸೂತ್ರ ಕಾರ್ಯರೂಪದಲ್ಲಿದೆ. ಈ ಬ್ಯಾಂಕ್‍ಗಳು ವರ್ತಕ, ವಾಣಿಜ್ಯ, ಸಾಮಾಜಿಕ ಅಭಿವೃದ್ಧಿಯಂತಹ ಉತ್ಪಾದಕ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುತ್ತವೆ. ಸ್ವಂತ ಉದ್ಯೋಗ ಹಾಗೂ ಸಂಸ್ಥೆಗಳ ಸ್ಥಾಪನೆಗೆ ಮುಂದೆ ಬರುವ ಮುಸ್ಲಿಮರಿಗೆ ಈ ಬ್ಯಾಂಕ್‍ಗಳು ಯಾವುದೇ ಲಾಭಾಪೇಕ್ಷೆ ಇಲ್ಲದೇ ಸಾಲ ನೀಡುತ್ತವೆ. ಠೇವಣಿಯಾಗಿ ಬಂದ ಹಣವನ್ನು ಠೇವಣಿ ಇಟ್ಟವರ ಅನುಮತಿ ಪಡೆದು ಅರ್ಥಿಕವಾಗಿ ಲಾಭ ಬರೋ ರಂಗಗಳಲ್ಲಿ ಹೂಡುತ್ತವೆ.. ಷರಿಯತ್ ನಲ್ಲಿ ನಿಷಿದ್ಧವಾಗಿರುವ ವ್ಯಾಪಾರಗಳಲ್ಲಿ ಈ ಬ್ಯಾಂಕ್‍ಗಳು ಹೂಡಿಕೆ ಮಾಡುವುದಿಲ್ಲ. ಹಣವನ್ನು ಬೆಲೆ ಕಟ್ಟುವ ಸಾಧನವೆಂದು ನಂಬಿರುವ ಇಸ್ಲಾಂ ಹಣವನ್ನು ಆಸ್ತಿ ಎಂದು ಅಂಗೀಕರಿಸುವುದಿಲ್ಲ.. ಇಸ್ಲಾಮಿಕ್ ಬ್ಯಾಂಕ್‍ಗಳಲ್ಲಿನ ಕರೆಂಟ್ ಅಕೌಂಟ್ ಖಾತೆಗಳು ಸಾಂಪ್ರದಾಯಿಕ ಬ್ಯಾಂಕ್‍ಗಳ ರೀತಿಯೇ ಇದ್ದು, ಡಿಪಾಸಿಟ್‍ದಾರನ ಅನುಮತಿಯೊಂದಿಗೆ ಅವರ ಹಣವನ್ನು ಇತರೆ ರಂಗಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.. ಲಾಭ ಬಂದರೆ ಅದನ್ನು ಅವರಿಗೆ ಹಂಚಲಾಗುತ್ತದೆ. ನಷ್ಟ ಆದರೆ ಹೂಡಿಕೆದಾರ ಅದನ್ನು ಭರಿಸಬೇಕಾಗುತ್ತದೆ. ಲಾಂಭಾಂಶದೊಂದಿಗೆ ನಷ್ಟವನ್ನು ಹಂಚಿಕೊಳ್ಳುವುದೇ ಇದರ ಮೂಲ ಮಂತ್ರ. ಹಣದ ಮೂಲಕ ಲಾಭ ಮಾಡಿಕೊಳ್ಳುವ ಉದ್ದೇಶವಾಗದೇ ಲಾಭ, ನಷ್ಟಗಳನ್ನು ಹಂಚಿಕೊಳ್ಳಬೇಕು ಎನ್ನುವುದೇ ಇದರ ಮುಖ್ಯ ಉದ್ದೇಶ. ಹೀಗಾಗಿ ಯಾವುದೇ ಬಡ್ಡಿಯಿಲ್ಲದೇ ಸಾಲ ನೀಡಲಾಗುತ್ತದೆ. ಷರಿಯತ್ ಸೂತ್ರದ ಪ್ರಕಾರ ಇಲ್ಲಿ ಜೂಜು, ಬೆಟ್ಟಿಂಗ್‍ನಂತಹ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದಿಲ್ಲ. ಈ ರೀತಿಯ ಅತ್ಯಂತ ರಿಸ್ಕ್ ಇರುವ ರಂಗಗಳಲ್ಲಿ ಹಣದ ಹೂಡಿಕೆ ಮಾಡದೇ ಇರುವುದರಿಂದ ಇಸ್ಲಾಮಿಕ್ ಬ್ಯಾಂಕಿಂಗ್ ಯಾವುದೇ ತೊಂದರೆ ಇಲ್ಲದೇ ನಡೆಯುತ್ತಿದೆ. ನೈತಿಕವಾಗಿ ನಡೆಯುವ, ಇಸ್ಲಾಮಿಕ್ ಕಾನೂನಿಗೆ ಅನುಗುಣವಾಗಿರುವ ವ್ಯಾಪಾರ ರಂಗಗಳಲ್ಲಿ ಮಾತ್ರ ಇಸ್ಲಾಮಿಕ್ ಬ್ಯಾಂಕ್‍ಗಳು ಹೂಡಿಕೆ ಮಾಡುತ್ತವೆ. ಇಸ್ಲಾಂ ಧರ್ಮ ಸೂತ್ರದ ಪ್ರಕಾರ ನಿರ್ವಹಿಸುವ ಆರ್ಥಿಕ ವ್ಯವಸ್ಥೆಯ ಭಾಗವಾಗಿ ಇಸ್ಲಾಮಿಕ್ ಬ್ಯಾಂಕಿಂಕ್ ಕಾರ್ಯರೂಪಕ್ಕೆ ಬಂತು.. 1200 ವರ್ಷಗಳ ಹಿಂದೆ ಬಾಗ್ದಾದ್, ಡೆಮಸ್ಕಸ್, ಫೆಜ್ ಹಾಗೂ ಕೋರ್ಡೋಬಾಗಳಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಶುರುವಾಗಿದ್ದಕ್ಕೆ ಆಧಾರಗಳಿವೆ.. ಮಿರ್ಜಾ ಬಷೀರ್ ಉದ್ದೀನ್ ಮಹಮೂದ್ ಅಹಮದ್ ರನ್ನು ಆಧುನಿಕ ಇಸ್ಲಾಮಿಕ್ ವ್ಯವಸ್ಥೆಯ ಪಿತಾಮಹ ಎಂದು ಕರೆಯುತ್ತಾರೆ. ಈತ ಬರೆದ ನಿಜಾಮೇ ನೌ, ಇಸ್ಲಾಂ ಕಾ ನಿಜಾಮ್ ಇಕ್ತಿಸದು ಗ್ರಂಥಗಳಲ್ಲಿ ಇಸ್ಲಾಮಿಕ್ ಆರ್ಥಿಕ ವ್ಯವಸ್ಥೆಯ ಮೂಲ ಸೂತ್ರಗಳನ್ನು ವಿವರಿಸಿದ್ದಾನೆ. ಅನಂತರ ನಯಾಮ್ ಸಿದ್ದಿಕಿ, ಮೌಲಾನಾ ಮದೂದಿ, ಮಹಮ್ಮದಿ ಹಮೀದುಲ್ಲಾ, ಮಹಮದ್ ಹುಜೈರ್, ಅಬ್ದುಲ್ ಅಲ್ ಅರಬೀ, ಅಲ್ ಸಜ್ಜರ್ ಎಂಬುವವರು ತಮ್ಮ ಗ್ರಂಥಗಳಲ್ಲಿ ಮುದರಭಾ ಅಂದರೆ ಲಾಭ, ನಷ್ಟಗಳನ್ನು ಹಂಚಿಕೊಳ್ಳೋ ವಿಧಾನದ ಬಗ್ಗೆ ವಿವರಿಸಿದ್ದಾರೆ. 1961ರಲ್ಲಿ ಮಹಮದ್ ಬಕೀರುಲ್ ಸದರ್ ಬರೆದ ಇಕ್ತಿಸದುನ ಅಂದರೆ ನನ್ನ ಅರ್ಥಶಾಸ್ತ್ರ ಎಂಬ ಗ್ರಂಥ ಆಧುನಿಕ ಇಸ್ಲಾಮಿಕ್ ಬ್ಯಾಂಕಿಂಗ್ ವಿಧಾನದ ಬಗ್ಗೆ ಬರೆದ ಪ್ರಮುಖ ಗ್ರಂಥ ಎಂದು ಹೇಳಬಹುದು.. ಇಸ್ಲಾಮಿಕ್ ಬ್ಯಾಂಕಿಂಗ್ ಸಂಸ್ಥೆಗಳು 1960ರಲ್ಲಿ ಪಿಲಿಗ್ರಿಮ್ಸ್ ಫಂಡ್ಸ್ ರೂಪದಲ್ಲಿ ಮಲೇಷಿಯಾದಲ್ಲಿ ಪ್ರಾರಂಭವಾದವು. 1963ರಲ್ಲಿ ಈಜಿಪ್ಟ್‍ನ ಮಿಟ್ಘಮರ್ ಎಂಬ ಪಟ್ಟಣದಲ್ಲಿ ಅಹ್ಮದ್ ಎಲಾಂಫುರ್ ಎಂಬಾತ ಲಾಭ-ನಷ್ಟಗಳ ಮೇಲೆ ಆಧಾರವಾಗಿ ಕೆಲಸ ಮಾಡೋ ಮಿಟ್ಘಮರ್ ಸೇವಿಂಗ್ಸ್ ಬ್ಯಾಂಕ್‍ನ್ನು ಸ್ಥಾಪನೆ ಮಾಡಿದ. ಇಸ್ಲಾಮಿಕ್ ಬ್ಯಾಂಕಿಂಗ್ ವಿಧಾನದ ಮೇಲೆ ಸಂಶೋಧನೆ ಮಾಡಿ ಡಾಕ್ಟರೇಟ್ ಗಳಿಸಿ, ಮೊರಾಬಾಹಾ ಬಗ್ಗೆ ವಿಸ್ತøತವಾಗಿ ಬರೆದ ನಮೀ ಹಸನ್ ಹೌಮೌದ್ ಎಂಬ ಜೋರ್ಡಾನ್ ದೇಶದ ವ್ಯಕ್ತಿ 1978ರಲ್ಲಿ ಜೋರ್ಡಾನ್ ಇಸ್ಲಾಮಿಕ್ ಬ್ಯಾಂಕ್‍ನ್ನು ಸ್ಥಾಪನೆ ಮಾಡಿದ. 1981ರ ಸಮಯಕ್ಕೆ ಈಜಿಪ್ಟ್‍ನಲ್ಲಿ ಇಂತಹ ಬ್ಯಾಂಕ್‍ಗಳ ಸಂಖ್ಯೆ 9ಕ್ಕೆ ಏರಿತು. ಇದರ ಮಧ್ಯೆಯೇ ದುಬೈ ಇಸ್ಲಾಮಿಕ್ ಬ್ಯಾಂಕ್ ಸ್ಥಾಪನೆಯಾಗುತ್ತದೆ. ಇನ್ನು 1975ರಲ್ಲಿ ಜೆಡ್ಡಾವನ್ನು ಪ್ರಧಾನ ಕೇಂದ್ರನವನ್ನಾಗಿ ಮಾಡಿದ ಇಸ್ಲಾಮಿಕ್ ಡೆವಲಪ್‍ಮೆಂಟ್ ಬ್ಯಾಂಕ್ ವಿವಿಧ ದೇಶಗಳಲ್ಲಿನ ಇಸ್ಲಾಮಿಕ್ ಬ್ಯಾಂಕ್‍ಗಳ ಜತೆ ಸೇರಿ 1976ರಿಂದ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿತು.. 13ನೇ ಶತಮಾನದಲ್ಲಿ ಪ್ರಾರಂಭವಾದ ಇಸ್ಲಾಮಿಕ್ ಬ್ಯಾಂಕ್‍ಗಳು 1960ರ ದಶಕದಲ್ಲಿ ವಿಸ್ತರಣೆಯಾಗುತ್ತಾ ಹೋದವು.. ಪ್ರಪಂಚದಾದ್ಯಂತ ಆರ್ಥಿಕ ಬಿಕ್ಕಟ್ಟು ಏರ್ಪಟ್ಟ ಸಂದರ್ಭದಲ್ಲೂ ಇವು ಯಶಸ್ವಿಯಾಗಿ ಮುನ್ನಡೆದವು.. ಪ್ರಪಂಚದಲ್ಲಿ ಹೂಡಿಕೆಯ ಆರ್ಥಿಕ ವಿಧಾನಗಳಿಗೆ ಹೆಸರಾಗಿರುವ ಅಮೆರಿಕಾ ಬ್ಯಾಂಕ್ ಕೂಡಾ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ವಿಲವಿಲ ಎಂದು ಒದ್ದಾಡುತ್ತಿದ್ದ ಸಮಯದಲ್ಲೂ ಇಸ್ಲಾಮಿಕ್ ಬ್ಯಾಂಕ್‍ಗಳು ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗುತ್ತಿದ್ದವು.. ಯಾವುದೇ ಲಾಭದ ಉದ್ದೇಶವಿಲ್ಲದೇ 75 ದೇಶಗಳಲ್ಲಿ ಬಡ್ಡಿ ಇಲ್ಲದೇ ಸಾಲ ಕೊಡುತ್ತಿರುವ ಇಸ್ಲಾಮಿಕ್ ಬ್ಯಾಂಕ್‍ಗಳು ಅಭಿವೃದ್ಧಿಯಲ್ಲಿ ಇಂದಿಗೂ ಮುಂದಿವೆ. ಮಾನವ ಸಂಪನ್ಮೂಲವನ್ನು ಹೇರಳವಾಗಿ ಬಳಸಿಕೊಂಡು ಎಷ್ಟೋ ಜನರ ಜೀವನದಲ್ಲಿ ಬೆಳಕು ನೀಡುತ್ತಿವೆ.. ಈ ಬಡ್ಡಿ ರಹಿತ ಇಸ್ಲಾಮಿಕ್ ಬ್ಯಾಂಕಿಂಗ್ ವಿಧಾನದ ಮೂಲಕ ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿರುವ 400 ರಿಂದ 500 ಇಸ್ಲಾಮಿಕ್ ಬ್ಯಾಂಕ್‍ಗಳು, 250 ಮ್ಯೂಚುಯಲ್ ಫಂಡ್ ಸಂಸ್ಥೆಗಳು ಪ್ರಸ್ತುತ ಒಂದು ಲಕ್ಷ ಕೋಟಿ ಡಾಲರ್‍ಗಳಿಗೂ ಹೆಚ್ಚು ವ್ಯವಹಾರ ನಡೆಸುತ್ತಿವೆ. 2005ರ ವೇಳೆಗೆ ಪ್ರಪಂಚದಾದ್ಯಂತ 822 ಬಿಲಿಯನ್ ಡಾಲರ್‍ಗಳ ವ್ಯವಹಾರ ನಡೆಸಿವೆ ಎಂದು ದ ಎಕನಾಮಿಸ್ಟ್ ಸಂಸ್ಥೆ ಹೇಳಿದೆ. ಈ ಎಲ್ಲಾ ವ್ಯವಹಾರವೂ ಷರಿಯಾ ನಿಬಂಧನೆಗಳಿಗೆ ಅನುಗುಣವಾಗಿಯೇ ನಡೆದಿದೆ. ಕೆಲ ಇಸ್ಲಾಮಿಕ್ ಬ್ಯಾಂಕುಗಳು ಶೇಕಡಾ 100ರಷ್ಟು ನಗದು ಕೊಡು ತೆಗೆದುಕೊಳ್ಳುವುದರ ಅನುಪಾತ ಹೊಂದಿವೆ.. 2013ರಲ್ಲಿ ಪ್ರಪಂಚದಾದ್ಯಂತ ಇಸ್ಲಾಮಿಕ್ ಬ್ಯಾಂಕಿಂಗ್ ಸಂಸ್ಥೆಗಳ ಆಸ್ತಿಗಳು 1.6ಲಕ್ಷ ಕೋಟಿ ಡಾಲರ್‍ಗಳಾಗಿವೆ ಎಂಬುದು ಒಂದು ಅಂದಾಜು. 2015ರ ಹೊತ್ತಿಗೆ ಗಲ್ಫ್ ಪ್ರಾಂತ್ಯದಲ್ಲೇ ಇಸ್ಲಾಮಿಕ್ ಬ್ಯಾಂಕ್‍ಗಳ ಆಸ್ತಿ 990 ಬಿಲಿಯನ್ ಡಾಲರ್‍ಗಳಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಪಶ್ಚಿಮ ಏಷ್ಯಾದ ಒಂದು ಪ್ರಾಂತ್ಯದಲ್ಲೇ 2020ರ ವೇಳೆಗೆ ಇದು 9 ಲಕ್ಷ ಕೋಟಿ ಡಾಲರ್‍ಗಳಿಗೆ ಮುಟ್ಟಬಹುದು ಎಂದು ಗ್ಲೋಬಲ್ ಕನ್ಸಲ್ಟೆಂಟ್ ಮೆಕೆಂಜೀ ಅಂದಾಜಿಸಿದೆ. ಇಸ್ಲಾಮಿಕ್ ಬ್ಯಾಂಕ್‍ಗಳು ವಾರ್ಷಿಕ ಶೇಕಡಾ 10ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸುತ್ತಾ ವಾಣಿಜ್ಯ ಬ್ಯಾಂಕ್‍ಗಳಿಗೆ ಸರಿಸಮನಾಗಿ ತಮ್ಮ ಕಾರ್ಯಪಾಲನೆ ಮಾಡುತ್ತಿವೆ.. ವಾಣಿಜ್ಯ ಬ್ಯಾಂಕ್‍ಗಳು ಸಾಲ ಕೊಡುವುದಕ್ಕೆ ಅನೇಕ ರೂಲ್ಸ್‍ಗಳನ್ನು ಮಾಡಿ ಬಡ್ಡಿ ಚಕ್ರಬಡ್ಡಿ ಹಾಕುತ್ತಾ ಸಾಲದಾರರನ್ನು ಸಂಕಷ್ಟಕ್ಕೆ ದೂಡುತ್ತಿದ್ದರೆ, ಇಸ್ಲಾಮಿಕ್ ಬ್ಯಾಂಕ್‍ಗಳು ಮಾತ್ರ ಕೇಳಿದವರಿಗೆಲ್ಲಾ ಸಾಲ ನೀಡುತ್ತಾ ಲಾಭಾಪೇಕ್ಷೆ ಇಲ್ಲದ ವ್ಯಾಪಾರದಿಂದಲೇ ಆರ್ಥಿಕವಾಗಿ ಪ್ರಬಲವಾಗುತ್ತಿವೆ. ಈ ಕಾರಣದಿಂದಾಗಿ ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ವಿಸ್ತರಿಸುತ್ತಿದೆ.. ಪ್ರಪಂಚದ ಪ್ರಖ್ಯಾತ ಬ್ಯಾಂಕ್‍ಗಳು ಕೂಡಾ ಇಸ್ಲಾಮಿಕ್ ಬ್ಯಾಂಕಿಂಗ್ ಡಿವಿಜನ್‍ಗಳನ್ನು ಶುರು ಮಾಡಿವೆ. ಅಮೆರಿಕಾ, ಬ್ರಿಟನ್, ಜರ್ಮನಿ, ಫ್ರಾನ್ಸ್ ನಂತಹ ಅನೇಕ ದೇಶಗಳಲ್ಲಿ ಇಂತಹ ಸೇವೆಗಳು ಪ್ರಾರಂಭವಾಗಿವೆ.. ಇತ್ತೀಚಿನ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಇಸ್ಲಾಮಿಕ್ ಬ್ಯಾಂಕಿಂಗ್ ಯಾವುದೇ ತೊಂದರೆ ಇಲ್ಲದೆ ನಡೆದುಕೊಂಡು ಹೋಗಿದ್ದನ್ನು ಗಮನಿಸಿದ ಮತ್ತಷ್ಟು ದೇಶಗಳು ಈ ಬ್ಯಾಂಕಿಂಗ್ ವ್ಯವಸ್ಥೆಯನ್ನು ತರಲು ಆಸಕ್ತಿ ವಹಿಸುತ್ತಿವೆ.. ಅದರಲ್ಲಿ ಭಾರತ ಕೂಡಾ ಒಂದು.. ಅಂದಹಾಗೆ ಇದೀಗ ಷರೀಯಾ ಅಥವಾ ಇಸ್ಲಾಮಿಕ್ ಬ್ಯಾಂಕಿಂಗ್ ಮೂಲಕ ಅಲ್ಪಸಂಖ್ಯಾತರನ್ನು ಕೂಡಾ ಓಲೈಸೋ ಕಾರ್ಯಕ್ಕೆ ಬಿಜೆಪಿ ಮುಂದಾದಂತೆ ಕಾಣುತ್ತಿದೆ.. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೇ ಆದರೂ, ಬಿಜೆಪಿಯ ಈ ಪ್ರಯತ್ನಕ್ಕೆ ಅವರದೇ ಪಕ್ಷದ ನಾಯಕರು ಹಾಗೂ ಸಂಘಪರಿವಾರದಿಂದ ಬೆಂಬಲ ಸಿಗುತ್ತಾ ಅನ್ನೋದೇ ಪ್ರಶ್ನೆ..

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ