ಸಹಾಯ ಮಾಡೋ ನೆಪದಲ್ಲಿ ದರೋಡೆ

Robbery in helping

28-11-2017

ಬೆಂಗಳೂರು: ಅಪಘಾತದ ವೇಳೆ ಗಾಯಾಳುಗಳಿಗೆ ಸಹಾಯ ಮಾಡುವ ನೆಪಮಾಡಿ 8 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಳವು ಪರಾರಿಯಾಗಿದ್ದ ಐನಾತಿ ಕಳ್ಳನನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಬಿಕೆ ನಗರದ ಸೋಮಶೇಖರ್ ಅಲಿಯಾಸ್ ಮನೆ (33)ಎಂದು  ಬಂಧಿತ ಆರೋಪಿಯನ್ನು ಗುರುತಿಸಲಾಗಿದೆ. ಬಂಧಿತನಿಂದ 8 ಲಕ್ಷ ಮೌಲ್ಯದ 288 ಗ್ರಾಂ ತೂಕದ ಚಿನ್ನದ ಸರ, ಬ್ರಾಸ್‍ಲೆಟ್, ನೆಕ್ಲೆಸ್, ಓಲೆಗಳು, ಇನ್ನಿತರ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಕಳೆದ ನ.3ರಂದು ಮಧ್ಯಾಹ್ನ ಚಿಕ್ಕಜಾಲದ ವೇಣುಗೋಪಾಲ್ ಅವರು ಚನ್ನರಾಯಪಟ್ಟಣದ ಸಂಬಂಧಿಕರ ಮನೆಯ ಗೃಹಪ್ರವೇಶ ಮುಗಿಸಿಕೊಂಡು ಕುಣಿಗಲ್ ರಸ್ತೆಯ ಚಿಕ್ಕನಹಳ್ಳಿಯ ಬಳಿ ಇನ್ನೋವಾ ಕಾರಿನಲ್ಲಿ ಬರುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡು ವೇಣುಗೋಪಾಲ್ ಅವರ ತಾಯಿ ಸರಸ್ವತಿ ಮೃತಪಟ್ಟಿದ್ದು, ಉಳಿದವರು ಗಾಯಗೊಂಡಿದ್ದಾರೆ. ಅದೇ ಮಾರ್ಗವಾಗಿ ಸ್ನೇಹಿತರೊಂದಿಗೆ ಪ್ರವಾಸ ಮುಗಿಸಿಕೊಂಡು ಟೆಂಪೊ ಟ್ರಾವೆಲರ್‍ ಲ್ಲಿ ಬರುತ್ತಿದ್ದ ಆರೋಪಿ ಸೋಮಶೇಖರ, ಕಾರಿನಲ್ಲಿದ್ದ ಗಾಯಾಳುಗಳಿಗೆ ಸಹಾಯ ಮಾಡುವ ನೆಪದಲ್ಲಿ ಚಿನ್ನದ ಒಡವೆಗಳಿಲ್ಲ ಬ್ಯಾಗ್‍ನ್ನು ಕಳವು ಮಾಡಿ ಪರಾರಿಯಾಗಿದ್ದನು.

ಕಳವು ಮಾಡಿದ್ದ ಆಭರಣಗಳನ್ನು ಹುಣಸಮಾರನಹಳ್ಳಿಯಲ್ಲಿ ಗಿರವಿ ಇಡಲು ಹೊಂಚು ಹಾಕುತ್ತಿದ್ದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಚಿಕ್ಕಜಾಲ ಪೊಲೀಸ್ ಇನ್ಸ್ ಪೆಕ್ಟರ್ ಕೇಶವಮೂರ್ತಿ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೆ ಎಂದು ಗಿರೀಶ್ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Accident high way ಚಿನ್ನದ ಸರ ಈಶಾನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ