ಬಿಜೆಪಿ ಚುನಾವಣಾ ತಯಾರಿ

Kannada News

08-04-2017 512

ಎಲ್ಲಾ ಅಂದುಕೊಂಡಂತೆ ನಡೆದರೆ 2018ರ ಏಪ್ರಿಲ್‍ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿವೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಮೂಲಕ ದೇಶದಲ್ಲಿ ಕಾಂಗ್ರೆಸ್‍ಗೆ ಉಂಟಾಗಿರುವ ಹಿನ್ನಡೆ ನಿವಾರಿಸಲು ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಎಡೆಬಿಡದೆ ರಣತಂತ್ರದಲ್ಲಿ ತೊಡಗಿದ್ದಾರೆ.

ಇಲ್ಲಿಯವರೆಗೆ ಇದೇ ತಮ್ಮ ಕೊನೆಯ ಚುನಾವಣೆ, ಇನ್ನು ಮುಂದೆ ತಾವು ಚುನಾವಣಾ ರಾಜಕಾರಣದಲ್ಲಿರುವುದಿಲ್ಲ ಎಂದು ಘೋಷಿಸಿದ್ದ ಸಿಎಂ ಇದೀಗ ತಮ್ಮ ನಿಲುವು ಬದಲಾಯಿಸಿದ್ದಾರೆ. ಮತ್ತೆ ವಿಧಾನಸಭೆಗೆ ಸ್ಪರ್ಧೆ ಮಾಡುತ್ತೇನೆ, ಅಷ್ಟೇ ಅಲ್ಲಾ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನೂ ಅಸ್ತಿತ್ವಕ್ಕೆ ತರುತ್ತೇನೆ, ಎಂದು ಪಣ ತೊಟ್ಟಿದ್ದಾರೆ. ಇದಕ್ಕಾಗಿ ರಣತಂತ್ರ ಹೆಣೆಯುತ್ತಿರುವ ಅವರು ಹಾಲಿ ಶಾಸಕರಿಗೆ ಮತ್ತೆ ಚುನಾವಣೆಯಲ್ಲಿ ಗೆಲ್ಲಲು ಏನೆಲ್ಲಾ ನೆರವು ಬೇಕೋ ಅದನ್ನೆಲ್ಲಾ ನೀಡುತ್ತಿದ್ದು, ಕ್ಷೇತ್ರದಲ್ಲಿ ನಿರಂತರ ಪ್ರವಾಸದೊಂದಿಗೆ ಜನರ ಜೊತೆ ಸಂಪರ್ಕದಲ್ಲಿರಿ, ಎಂದು ತಾಕೀತು ಮಾಡಿದ್ದಾರೆ.

ಕಾಂಗ್ರೆಸ್ ಶಾಸಕರಿಲ್ಲದ ಕಡೆ ಪ್ರತಿಪಕ್ಷವನ್ನು ಮಣಿಸಲು ಬೇಕಾದ ತಂತ್ರಗಾರಿಕೆಯಲ್ಲಿ ನಿರತರಾಗಿದ್ದು , ಗೆಲ್ಲಲು ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಪ್ರತಿಪಕ್ಷ ಬಿಜೆಪಿ ಲಿಂಗಾಯಿತ ಮತದೊಂದಿಗೆ ಚುನಾವಣೆ ಎದುರಿಸಲು ಸಜ್ಜಾಗಿದ್ದು ಇದಕ್ಕೆ ಪ್ರತಿಯಾಗಿ ಅಲ್ಪಸಂಖ್ಯಾತ, ಹಿಂದುಳಿದ ದಲಿತ ಸಮೀಕರಣದೊಂದಿಗೆ ಚುನಾವಣೆ ಎದುರಿಸಿ ಮತ್ತೆ ಅಧಿಕಾರ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದ್ದಾರೆ.

ಸಿದ್ದರಾಮಯ್ಯ ಅವರ ಈ ಕನಸಿಗೆ ದೊಡ್ಡ ಹೊಡೆತ ನೀಡಲು ಬಿಜೆಪಿ ನಾಯಕರು ಸಜ್ಜುಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಸಂಕಲ್ಪ ಮಾಡಿರುವ ಬಿಜೆಪಿ ನಾಯಕರಿಗೆ ತಮ್ಮ ಸಂಕಲ್ಪ ಈಡೇರಿಸಲು ಇರುವ ಏಕೈಕ ಅಡ್ಡಿ ಕರ್ನಾಟಕ. ಅದರಲ್ಲೂ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಎಂದೇ ಜನಪ್ರಿಯತೆ ಪಡೆದಿರುವ ಸಿದ್ದರಾಮಯ್ಯ.

ಹೀಗಾಗಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅನ್ನು ಮಣಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಟಾರ್ಗೆಟ್ ಕರ್ನಾಟಕ ಎಂಬ ಮಾಸ್ಟರ್ ಪ್ಲಾನ್ ಸಿದ್ದಪಡಿಸಿದೆ. ಐದು ವರ್ಷಗಳ ಹಿಂದೆ ಅಧಿಕಾರ ಗದ್ದುಗೆ ಹಿಡಿದಿದ್ದ ಬಿಜೆಪಿ ಹಲವು ಆರೋಪಗಳ ಸುಳಿಗೆ ಸಿಕ್ಕಿ ಜನರಿಂದ ತಿರಸ್ಕರಿಸಲ್ಪಟ್ಟಿತ್ತು. ಕರ್ನಾಟಕ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಬಿಂಬಿಸುತ್ತಿದ್ದ ಆ ಪಕ್ಷದ ನಾಯಕರಿಗೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಜೋಡಿ ನೀಡಿದ ಹೊಡೆತ  ತತ್ತರಗೊಳ್ಳುವಂತೆ ಮಾಡಿತ್ತು.

ಇದೀಗ ಈ ಹೊಡೆತಕ್ಕೆ ಪ್ರತಿ ಹೊಡೆತ ನೀಡುವ ಮೂಲಕ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸುವುದು, ಆ ಮೂಲಕ ಇಡೀ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಘೋಷಣೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡುವ ನಿರ್ಧಾರವನ್ನು ಅಮಿತ್ ಶಾ ಮತ್ತವರ ತಂಡ ರೂಪಿಸತೊಡಗಿದೆ.

ಕರ್ನಾಟಕವನ್ನು ಈ ತಂಡ ವಿಷೇಶವಾಗಿ ಪರಿಗಣಿಸಲು ರಾಜಕೀಯ ಆಡಳಿತಾತ್ಮಕ ಸೇರಿದಂತೆ ಹಲವಾರು ಕಾರಣಗಳಿವೆ. ರಾಜಕೀಯವಾಗಿ ನೋಡುವುದಾದರೆ ಯಾವಾಗೆಲ್ಲಾ ಕಾಂಗ್ರೆಸ್ ಪಕ್ಷ ಸೋಲಿನಿಂದ ತತ್ತರಿಸಿ ಪ್ರಪಾತಕ್ಕೆ ಕುಸಿದಿದೆಯೋ ಆಗೆಲ್ಲಾ ಕಾಂಗ್ರೆಸ್‍ಗೆ ಆಸರೆಯಾಗಿರುವುದು ಕರ್ನಾಟಕ. ಹೀಗಾಗಿ ಕಾಂಗ್ರೆಸ್ ನಾಯಕರ ಪಾಲಿಗೆ ಕರ್ನಾಟಕ ಅದೃಷ್ಟದ ರಾಜ್ಯವಾಗಿದೆ.

ತುರ್ತು ಪರಿಸ್ಥಿತಿ ಘೋಷಣೆ ನಂತರ ಸೋಲಿನಿಂದ ತತ್ತರಿಸಿದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿದ್ದು ಕರ್ನಾಟಕ. ಈ ಮೂಲಕ ದೇಶದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ವಿಜೃಂಭಿಸುವಂತಾಯಿತು.

ದಿವಂಗತ ಪಿ.ವಿ. ನರಸಿಂಹರಾವ್, ಸೀತಾರಾಮ್ ಕೇಸರಿ ಸಾರಥ್ಯದಲ್ಲಿ ಕಾಂಗ್ರೆಸ್ ಮತ್ತೆ ಕುಸಿದು ಹೋಗಿದ್ದಾಗ ಸೋನಿಯಾಗಾಂಧಿ ಅವರನ್ನು ಬಳ್ಳಾರಿಯಿಂದ ಗೆಲ್ಲಿಸುವ ಮೂಲಕ ಮತ್ತೆ ಕಾಂಗ್ರೆಸ್ ವೈಭವ ಮರಳಿದ್ದು ಕರ್ನಾಟಕದಿಂದ. ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರ್ಕಾರ ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿತ್ತು. ಆಗ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದು, ಈ ರಾಜ್ಯದ ನೆರವಿನಿಂದ ನೆರೆಯ ಆಂಧ್ರ ಪ್ರದೇಶ, ಕೇರಳ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ, ಮಹಾರಾಷ್ಟ್ರ ಮತ್ತು ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಮೂಲಕ ಮತ್ತೆ ದೇಶದಲ್ಲಿ ಕಾಂಗ್ರೆಸ್ ಪ್ರಾಬಲ್ಯಕ್ಕೆ ಬಂದಿತು.

ಹೀಗೆ ಯಾವಾಗೆಲ್ಲಾ ಕಾಂಗ್ರೆಸ್ ಸೋಲಿನಿಂದ ತತ್ತರಿಸಿದೆಯೋ ಆಗೆಲ್ಲಾ ಕರ್ನಾಟಕ ಕಾಂಗ್ರೆಸ್‍ಗೆ ಮರು ಜೀವ ನೀಡಿದೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಇಲ್ಲದಂತೆ ಮಾಡಿದರೆ ಕಾಂಗ್ರೆಸ್ ಮುಕ್ತ ಭಾರತದ ತಮ್ಮ ಕನಸು ನನಸಾಗಲಿದೆ ಎಂದು ಭಾವಿಸಿದ ಈ ತಂಡ ಹಲವಾರು ತಂತ್ರ ರೂಪಿಸತೊಡಗಿದೆ.

ಹಾಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲು ಬಿಡಬಾರದು ಎಂದು ತಂತ್ರ ರೂಪಿಸಿದ ಈ ತಂಡ ಕಳೆದ ಕೆಲವು ತಿಂಗಳ ಹಿಂದೆ ನಡೆದ ಭಿನ್ನಮತ ಚಟುವಟಿಕೆಯನ್ನು ನೇಪಥ್ಯದಲ್ಲಿಟ್ಟುಕೊಂಡೇ ನಿರ್ವಹಣೆ ಮಾಡಿತಾದರೂ ಅದು ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

ಬಳಿಕ ಅರ್ಕಾವತಿ ಡೀನೋಟಿಫಿಕೇಷನ್ ಪ್ರಕರಣ, ಹೂಬ್ಲಾಟ್ (ಊubಟoಣ)  ವಾಚ್ ಉಡುಗೊರೆ ಸ್ವೀಕಾರ ಪ್ರಕರಣ ಇಟ್ಟುಕೊಂಡು ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಮೂಲಕ ಇವರೂ ಕೂಡಾ ಭ್ರಷ್ಟ ಸಿಎಂ ಎಂದು ಹಣೆಪಟ್ಟಿ ಕಟ್ಟಲು ಯತ್ನಿಸಿ ವಿಫಲರಾದರು. ಬಳಿಕ ಇವರಿಗೆ ಸಿಕ್ಕಿದ್ದು ಸ್ಟೀಲ್ ಬ್ರಿಡ್ಜ್ ಪ್ರಕರಣ. ಇದೂ ಕೂಡಾ ನಿರೀಕ್ಷಿತ ಫಲಿತಾಂಶ ಕೊಡಲಿಲ್ಲ. ಇನ್ನು ನೋಟ್‍ಬ್ಯಾನ್ ನಂತರ ನಡೆದ ಐಟಿ ದಾಳಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬಿಂಬಿಸುವ ಪ್ರಯತ್ನದ ಜೊತೆಗೆ ಐಟಿ ದಾಳಿಯಲ್ಲಿ ಸಿಕ್ಕ ಡೈರಿಯೊಂದನ್ನು ಹಿಡಿದುಕೊಂಡು ರಾಜ್ಯ ಸರ್ಕಾರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಲಾಯಿತು. ಆದರೆ ನಂತರದಲ್ಲಿ ಇವುಗಳೂ ಹುರುಳಿಲ್ಲದಂತಾದವು.

ಇಂತಹ ಎಲ್ಲಾ ಪ್ರಯತ್ನಗಳ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಅವಧಿಗೆ ಮುನ್ನ ಚುನಾವಣೆಗೆ ಯತ್ನಿಸಿ ವಿಫಲರಾದ ಬಿಜೆಪಿ ನಾಯಕರು ಇದೀಗ ಎಸ್.ಎಂ.ಕೃಷ್ಣ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಸರ್ಕಾರದಲ್ಲಿರುವ ಅವರ ಬೆಂಬಲಿಗರಿಂದ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆಯಾದರೂ ಅವೆಲ್ಲಾ ಕೂಡಾ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ಹೀಗಾಗಿ ಇದೀಗ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಬೇರೆಯದೇ ಕಾರ್ಯತಂತ್ರಕ್ಕೆ ಮುಂದಾಗಿದೆ.

ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಗೆಲುವಿನಿಂದ ಬೀಗುತ್ತಿರುವ ಈ ಜೋಡಿ ಇದೀಗ ಕರ್ನಾಟಕದಲ್ಲಿ ಕಮಲ ಅರಳಿಸಲು ಮುಂದಾಗಿದೆ. ಇದಕ್ಕಾಗಿ ಮೋದಿ- ಅಮಿತ್ ಶಾ ಜೋಡಿ ಹೊಸ ಕಾರ್ಯ ತಂತ್ರವೊಂದನ್ನು ರೂಪಿಸುತ್ತಿದೆ. ಅದರಲ್ಲಿ ಪ್ರಮುಖವಾಗಿ ವರ್ಚಸ್ವಿ ನಾಯಕರನ್ನು ತಮ್ಮ ಪಕ್ಷದತ್ತ ಸೆಳೆಯಲು ದೊಡ್ಡ ಮಟ್ಟದ ಕಾರ್ಯಕ್ರಮವೊಂದನ್ನೂ ರೂಪಿಸಿದೆ.

ರಾಜ್ಯ ಬಿಜೆಪಿಯಲ್ಲಿ ಹಲವಾರು ಮಂದಿ ಪ್ರಭಾವಿ ನಾಯಕರು ಇದ್ದಾರೆ ಆದರೆ ವರ್ಚಸ್ಸು ಮತ್ತು ಜನಪ್ರಿಯತೆ ದೃಷ್ಠಿಯಿಂದ ಯಡಿಯೂರಪ್ಪ ಹೊರತು ಪಡಿಸಿದರೆ ಬೇರೆ ಯಾರೂ ಇಲ್ಲ. ಉಳಿದವರು ತಮ್ಮ ಜಿಲ್ಲೆ ಮತ್ತು ತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತ. ಯಡಿಯೂರಪ್ಪ ಲಿಂಗಾಯಿತ ಸಮಾಜಕ್ಕೆ ಸೇರಿದ ಪ್ರಭಾವಿ ಮತ್ತು ವರ್ಚಸ್ವಿ ನಾಯಕ ಇದರಲ್ಲಿ ಎರಡನೇ ಮಾತಿಲ್ಲ. ರಾಜ್ಯದಲ್ಲಿ ಬಿಜೆಪಿ ಅಂದರೆ ಯಡಿಯೂರಪ್ಪ ಹಾಗೆ ಯಡಿಯೂರಪ್ಪ ಅಂದರೆ ಬಿಜೆಪಿ ಎನ್ನುವ ವಾತಾವರಣವಿದೆ.

ಯಡಿಯೂರಪ್ಪ ಇಷ್ಟೊಂದು ಪ್ರಭಾವಿಯಾದರೂ, ವರ್ಚಸ್ವಿ ನಾಯಕರಾದರೂ ಅವರ ವಿರುದ್ಧ ಇರುವ ಪ್ರಕರಣಗಳು, ಜೈಲಿಗೆ ಹೋಗಿ ಬಂದವರೆಂಬ ಕುಖ್ಯಾತಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರ ಸಿಕ್ಕಿದರೆ, ಇದರ ಅರಿವಿರುವ ಅಮಿತ್ ಶಾ ಒಂದೆಡೆ ಲಿಂಗಾಯಿತ ಸಮುದಾಯಗಳ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಯಡಿಯೂರಪ್ಪ ಅವರಿಗೆ ನಾಯಕತ್ವ ನೀಡಿ ಮತದಾರರ ಮುಂದೆ ಶುದ್ಧ ಚಾರಿತ್ರ್ಯವುಳ್ಳವರು, ಅನುಭವಿಗಳ ಮತ್ತು ವರ್ಚಸ್ವಿ ನಾಯಕರು ಬೇಕೆಂದು ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ, ಜಯಪ್ರಕಾಶ್ ಹೆಗಡೆ, ಕುಮಾರ್ ಬಂಗಾರಪ್ಪ ಅವರಂತಹ ನಾಯಕರನ್ನು ಸೇರ್ಪಡೆ ಮಾಡಿಕೊಂಡಿದ್ದು ಇವರ ಮೂಲಕ ಪಕ್ಷದ ಪ್ರಚಾರಕ್ಕೆ ಮುಂದಾಗಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗಗಳ ಮತಗಳನ್ನು ಬಲವಾಗಿ ನೆಚ್ಚಿಕೊಂಡಿರುವ ಸತ್ಯ ಅರಿತಿರುವ ನಾಯಕರು ಇದೀಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಿರಿಯ ನಾಯಕ ಸಿ.ಕೆ ಜಾಫರ್ ಶರೀಫ್, ರೋಷನ್ ಬೇಗ್, ನಫಿಜಾ ಫಜಲ್ ಅವರಂತಹ ನಾಯಕರಿಗೆ ಗಾಳಹಾಕುತ್ತಿದ್ದಾರೆ. ನಾಯಕರ ಸೇರ್ಪಡೆ ಮೂಲಕ ಪಕ್ಷದ ವರ್ಚಸ್ಸು ವೃದ್ಧಿಸುವ ಜೊತೆಗೆ ಪಕ್ಷ ಸಂಘಟನೆಯ ಜಾಲವನ್ನೂ ವಿಸ್ತರಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ. ವಿಶೇಷವಾಗಿ ಬಿಜೆಪಿ ನಾಯಕರು ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸಿ ಇಡೀ ದೇಶದ ಭೂಪಟದ ಮುಂದೆಲ್ಲಾ ಕಮಲ ಅರಳಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಕರ್ನಾಟಕ ಹೊರತುಪಡಿಸಿ ಇಲ್ಲಿಯವರೆಗೆ ಕಾಂಗ್ರೆಸ್ ಆಳ್ವಿಕೆಯಲ್ಲಿದ್ದ  ರಾಜ್ಯಗಳಲ್ಲಿ ಇದು ಬಹುತೇಕ ಯಶಸ್ವಿಯೂ ಆಗಿದೆ. ಆದರೆ ಯಾವ್ಯಾವ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿ ಬೇರು ಬಿಟ್ಟಿದೆಯೋ ಅಲ್ಲಿ ಪ್ರಧಾನಿ ಮತ್ತು ಅಮಿತ್ ಶಾ ಜೋಡಿಯು ಆಟ ನಡೆಸಲು ಸಾದ್ಯವಾಗಿಲ್ಲ.

ಪಶ್ಚಿಮ ಬಂಗಾಳದಲ್ಲಿ ಈ ಜೋಡಿ ನಡೆಸಿದ ಆಟ ಮಮತಾ ಬ್ಯಾನರ್ಜಿಯವರ ಸವಾಲು ಎದುರಿಸಲು ಸಾಧ್ಯವಾಗಲಿಲ್ಲ. ಅದೇ ರೀತಿ ತಮಿಳುನಾಡು, ಕೇರಳ, ಒಡಿಶಾ, ಬಿಹಾರ್, ಆಂಧ್ರ, ತೆಲಂಗಾಣದಲ್ಲೂ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇದೇ ಸ್ಥಿತಿ ಉತ್ತರಪ್ರದೇಶದಲ್ಲೂ ಇತ್ತು ಆದರೆ ಸಮಾಜವಾದಿ ಪಕ್ಷದಲ್ಲಿನ ಯಾದವಿ ಕಲಹ ಹಾಗೂ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದಾಗಿ ಈ ಜೋಡಿ ಯಶಸ್ಸು ಸಾಧಿಸಿದೆ. ಅದೇ ರೀತಿ ಕರ್ನಾಟಕಕ್ಕೆ ಬಂದರೆ ಜೆಡಿಎಸ್ ಪ್ರಬಲವಾಗಿರುವ ಯಾವುದೇ ಜಿಲ್ಲೆಯಲ್ಲೂ ಬಿಜೆಪಿಯ ಕಮಲ ಅರಳಲು ಸಾದ್ಯವಾಗಿಲ್ಲ. ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಹೊಂದಿರುವ ಪ್ರಾಬಲ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡಿರುವ ಈ ಜೋಡಿ ಇಲ್ಲಿ ಕಾಂಗ್ರೆಸ್‍ಗೆ ಪರ್ಯಾಯವಾಗಿ ಸಂಘಟನೆಯನ್ನು ವಿಸ್ತರಿಸುತ್ತಲೇ ಜೆಡಿಎಸ್‍ನ ಭದ್ರಕೋಟೆಗೆ ಲಗ್ಗೆ ಹಾಕಲು ಪ್ರಯತ್ನ ನಡೆಸಿದೆ.

ಇಂತಹ ಪ್ರಯತ್ನ ನಡೆಸದೇ ಹೋದರೆ ತಾವು ಎಷ್ಟೇ ಕಸರತ್ತು ನಡೆಸಿದರೂ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಅರಿತ ಈ ತಂಡ ನಡೆಸಿದ ಕಾರ್ಯಚರಣೆಯ ಪರಿಣಾಮವೇ ಎಸ್.ಎಂ. ಕೃಷ್ಣ ಸೇರ್ಪಡೆ. ಇದರ ಬೆನ್ನಲ್ಲೇ ಎಸ್.ಎಂ. ಕೃಷ್ಣ ಆಪ್ತ ವಲಯದಲ್ಲಿರುವ ಮಂಡ್ಯ, ಕೋಲಾರ, ರಾಮನಗರ, ಮೈಸೂರು, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಒಕ್ಕಲಿಗ ನಾಯಕರಿಗೆ ಈ ಜೋಡಿ ಗಾಳ ಹಾಕಿದೆ. ಇದರ ಪರಿಣಾಮ ಹಲವಾರು ಮಂದಿ ಹಾಲಿ ಮತ್ತು ಮಾಜಿ ಶಾಸಕರು ಸದ್ಯದಲ್ಲಿಯೇ ಬಿಜೆಪಿ ಸೇರ್ಪಡೆ ಸಾಧ್ಯತೆಯಿದೆ ಎಂದು ಹೇಳಲಾಗತ್ತಿದೆ. ಈ ಪ್ರದೇಶದಲ್ಲಿ ತಮ್ಮ ಪಕ್ಷಕ್ಕೆ ಅಷ್ಟು ಪ್ರಭಾವಿಗಳಿದ್ದರೂ ಇಲ್ಲದ ಪರಿಣಾಮ ಇಂತಹವರಿಗೆ ಮಣೆ ಹಾಕುವುದು ಅನಿವಾರ್ಯ.

ಆದರೆ ಉತ್ತರ ಕರ್ನಾಟಕದಲ್ಲಿ ಬಿಜೆಪಿ ನಾಯಕರಿಗೆ ಅಂತಹ ಸಮಸ್ಯೆಯಿಲ್ಲ. ಇಲ್ಲಿ ನಾಯಕರ ಪಡೆಯೇ ಇದೆ. ಇನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿದ ನಾಯಕರಿಗೂ ಇವರು ಹುಡುಕಾಟ ನಡೆಸಿದ್ದಾರೆ. ಪರಿಶಿಷ್ಟರಲ್ಲಿ ಎಡಗೈ ವರ್ಗಕ್ಕೆ ಸೇರಿದ ಶಾಣಪ್ಪ, ಜಿಗಜಿಣಗಿ, ಗೋವಿಂದ ಕಾರಜೋಳ, ನಾರಯಣಸ್ವಾಮಿ ಅವರಂತಹ ನಾಯಕರ ದಂಡೇ ಇದೆ.  ಆದರೆ ಬಲಗೈ ವರ್ಗಕ್ಕೆ ಸೇರಿದ ನಾಯಕರ ಕೊರತೆ ದೊಡ್ಡ ಪ್ರಮಾಣದಲ್ಲಿದ್ದು, ಇದನ್ನು ಭರಿಸುವ ದೃಷ್ಠಿಯಿಂದ ಮಾಜಿ ಸಚಿವ ಬಿ. ಸೋಮಶೇಖರ್, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅವರನ್ನು ಸೇರ್ಪಡೆ ಮಾಡಿಕೊಂಡರೂ ಅಷ್ಟೇನೂ ಪರಿಣಾಮ ಬೀರಲಿಲ್ಲ. ಹೀಗಾಗಿ ಈ ವರ್ಗಕ್ಕೆ ಸೇರಿದ ಪ್ರಭಾವಿ ನಾಯಕರಿಗೆ ಗಾಳ ಹಾಕಿದ್ದಾರೆ.

ಹೀಗೆ ಜಾತಿ, ವರ್ಗ, ಸಮುದಾಯ ಹಾಗೂ ಪ್ರದೇಶವಾರು ಸಂಘಟನೆ ವಿಸ್ತರಣೆ, ನಾಯಕರ ಕೊರತೆಯನ್ನು ನೀಗಿಸಿಕೊಳ್ಳುತ್ತಾ ಮುನ್ನಡೆಯುತ್ತಿರುವ ಜೋಡಿ ಮತ್ತೊಂದೆಡೆ ಸದ್ದಿಲ್ಲದೆ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು, ಪ್ರತಿಯೊಂದು ಕ್ಷೇತ್ರದ ಮತದಾರರ ನಾಡಿಮಿಡಿತ ಏನು, ಯಾವ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲುವು ಸಾಧ್ಯ ಎಂಬ ಅಂಕಗಣಿತದಲ್ಲಿ ತೊಡಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಇಬ್ಬರು ಆರ್‍ಎಸ್‍ಎಸ್ ಪ್ರಮುಖ ನಾಯಕರಿಗೆ ಇದರ ಉಸ್ತುವಾರಿ ನೀಡಲಾಗಿದ್ದು, ಈ ಇಬ್ಬರ ಅಧೀನದಲ್ಲಿ ಪರಿವಾರದ ಅಂಗ ಸಂಘಟನೆಗಳಾದ ಎಬಿವಿಪಿ, ವಿಶ್ವ ಹಿಂದೂ ಪರಿಷತ್, ಸೇವಾಭಾರತಿ, ಸಂಸ್ಕಾರ ಭಾರತಿ, ಭಜರಂಗ ದಳ, ರಾಷ್ಟ್ರ ಸೇವಿಕಾ ಸಂಘದ ಕಾರ್ಯಕರ್ತರ ದೊಡ್ಡ ಪಡೆಯೇ ಪ್ರತಿನಿತ್ಯದ ಆಗು-ಹೋಗುಗಳ ಬಗ್ಗೆ ಚಾಚೂ ತಪ್ಪದೇ ವರದಿ ನೀಡುತ್ತಿವೆ.

ಮತ್ತೊಂದೆಡೆ ನುರಿತ ಚುನಾವಣಾ ತಜ್ಞರನ್ನೊಳಗೊಂಡ 180 ಜನರ ತಂಡವೊಂದು ಎಡೆಬಿಡದೆ ರಾಜ್ಯದೆಲ್ಲೆಡೆ ಸಂಚರಿಸುತ್ತಿದೆ. ಈ ತಂಡದ ಬಗ್ಗೆ ಅಮಿತ್ ಶಾ ಮತ್ತವರ ಆಪ್ತವಲಯಕ್ಕಲ್ಲದೆ ಬೇರೆ ಯಾರಿಗೂ ಮಾಹಿತಿಯಿಲ್ಲ. ಈ ತಂಡ ರಾಜ್ಯ ಬಿಜೆಪಿಯ ಪ್ರತಿಯೊಬ್ಬ ನಾಯಕರ ಚಟುವಟಿಕೆಗಳ ಬಗ್ಗೆ ವಾರಕ್ಕೊಂದು ವರದಿ ರವಾನಿಸಿದರೆ, ಎಲ್ಲಾ 224 ಕ್ಷೇತ್ರಗಳ ಬಗ್ಗೆ ಪ್ರತಿ 15 ದಿನಕ್ಕೊಮ್ಮೆ ಸಮೀಕ್ಷಾ ವರದಿ ಸಲ್ಲಿಸುತ್ತಿದೆ.

ಈ ಸಮೀಕ್ಷಾ ವರದಿ ಮೋದಿ ಮತ್ತು ಅಮಿತ್ ಶಾ ನಿದ್ದೆಗೆಡುವಂತೆ ಮಾಡಿದೆ. ಕಳೆದ ನಾಲ್ಕು ತಿಂಗಳಿಂದ ಈ ಸಮೀಕ್ಷಾ ವರದಿಯ ಬಗ್ಗೆ ಇಬ್ಬರೂ ತೀವ್ರ ಗಮನ ಹರಿಸಿದ್ದಾರೆ. 15 ದಿನದಲ್ಲಿ ಒಂದು ವರದಿಯಿದ್ದರೆ ಮತ್ತೆ 15 ದಿನದಲ್ಲಿ ಮತ್ತೊಂದು ವರದಿ ಬರುತ್ತದೆ. ನಿರಂತರವಾಗಿ ಒಂದೇ ರೀತಿಯ ಸಂಖ್ಯೆ ಬರುತ್ತಿಲ್ಲ. ಸಂಖ್ಯೆಗಳಲ್ಲಿ ಏರಿಳಿತವಾಗುತ್ತಿದೆ. ಸಮೀಕ್ಷೆ ವರದಿಯಲ್ಲಿ ನಿರಂತರವಾಗಿ ನಿರ್ದಿಷ್ಟ ಸಂಖ್ಯೆ ಬಂದರೆ ಸಾಕೆಂದು ಈ ಜೋಡಿ ಕಾಯುತ್ತಿದ್ದು, ಆ ನಂತರ ಬೇರೆ ತಂತ್ರ ರೂಪಿಸಬಹುದೆಂದು ಕಾಯುತ್ತಿದೆ. ಆದರೆ ಸಂಖ್ಯೆಯ ಏರಿಳಿತ ಚಿಂತೆಗೀಡು ಮಾಡಿದೆ.

ಪಂಚರಾಜ್ಯಗಳ ಚುನಾವಣೆ ಮುಗಿದ ನಂತರ ಈ ಸಂಖ್ಯೆಯಲ್ಲಿ ಏರುಗತಿ ಕಂಡುಬಂದಿದೆ. ಆದರೂ ಸರ್ಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತಕ್ಕೆ ಇನ್ನೂ ಹಲವು ಸ್ಥಾನಗಳ ಕೊರತೆಯಿದೆ ಎಂಬುವುದನ್ನು ಈ ವರದಿ ಹೇಳುತ್ತಿದೆ. ಸಮಾಧಾನವೆಂದರೆ ಕಾಂಗ್ರೆಸ್‍ನ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಜೆಡಿಎಸ್‍ನ ಸಂಖ್ಯೆ ಕೂಡಾ ಹೆಚ್ಚಳವಾಗುತ್ತಿದೆ ಎಂಬ ಅಂಶ ಈ ವರದಿಯಲ್ಲಿ ವ್ಯಕ್ತವಾಗುತ್ತಿದೆ. ಹೀಗಾಗಿ ಈ ತಂಡ ಈಗ ಮತ್ತೊಂದು ತಂತ್ರ ಆರಂಭಿಸಿದೆ.

ಈ ತಂತ್ರದ ಬಗ್ಗೆ ಕಳೆದ ವಾರ ನಡೆದ ರಾಜ್ಯದ ಸಂಪುಟ ಸಭೆಯಲ್ಲಿ ಈ ಇಬ್ಬರೂ ಬಾಯಿ ಬಿಟ್ಟಿದ್ದಾರೆ. ಮಕ್ಕಳಿಗೆ ಇತಿಹಾಸ ಪಾಠ ಮಾಡುವ ರೀತಿಯಲ್ಲಿ ಪ್ರಧಾನಿ ರಾಜ್ಯದ ಬಿಜೆಪಿ ಸಂಸದರಿಗೆ ಚುನಾವಣೆಯ ಪಾಠ ಮಾಡಿದ್ದಾರೆ. ಯಡಿಯೂರಪ್ಪ ಮಿಷನ್ 150 ಎಂದುಕೊಂಡು ತಮ್ಮ ಗಮನ ಅಷ್ಟಕ್ಕೆ ಮಾತ್ರ ಕೇಂದ್ರಿಕರಿಸಿದ್ದಾರೆ. ಆದರೆ ತಮ್ಮದು ಮಿಷನ್ 150 ಅಲ್ಲ ಮಿಷನ್ 224 ಎಂದು ಹೇಳಿದ್ದಾರೆ. ಇದನ್ನು ಸಾಕಾರಗೊಳಿಸುವ ದೃಷ್ಠಿಯಿಂದ ಎಲ್ಲಾ ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ, ಜನ ಸಂಪರ್ಕ ಸಭೆಗಳನ್ನೂ ನಡೆಸಬೇಕೆಂದು ತಾಕೀತು ಮಾಡಿದರು. ಚುನಾವಣೆ ಸಮಯದಲ್ಲಿ ರಣತಂತ್ರದ ಮೂಲಕ ಹೋದರೆ ಅಷ್ಟು ದೊಡ್ಡ ಪರಿಣಾಮ ಬೀರುವುದಿಲ್ಲ ಅದರ ಬದಲಿಗೆ ಈಗಿನಿಂದಲೇ ತಯಾರಿ ಆರಂಭಿಸಬೇಕು, ಆಗ ಮಾತ್ರ ನಿರೀಕ್ಷಿತ ಫಲಿತಾಂಶ ಸಾಧ್ಯ ಎಂದು ಒತ್ತಿ ಹೇಳಿದರು.

ಇದಕ್ಕೆ ಪೂರಕವೆಂಬಂತೆ ಅಡುಗೆ ಮನೆ ಕಥೆ ಹೇಳಿದ ಪ್ರಧಾನಿ ಗೋಧಿ ಹಿಟ್ಟನ್ನು ನೆನಸಿ ಆ ತಕ್ಷಣವೇ ಚಪಾತಿ ಮಾಡಿದರೆ ಚಪಾತಿ ಮೃದುವಾಗುವುದಿಲ್ಲ, ತಿನ್ನಲು ಹಿತಕರವಾಗುವುದಿಲ್ಲ, ಅಲ್ಲದೇ ಎಷ್ಟು ಹಿಟ್ಟು ಕಲಿಸುತ್ತೇವೆಯೋ ಅಷ್ಟೇ ಪ್ರಮಾಣದ ಚಪಾತಿ ಮಾಡಬಹುದು. ಆದರೆ ಗೋಧಿ ಹಿಟ್ಟನ್ನು ಕಲಿಸಿ ಅದನ್ನು ಕೆಲಕಾಲ ಇಟ್ಟರೆ ಫಲಿತಾಂಶ ಬೇರೆಯೇ ಆಗಲಿದೆ, ಹಿಟ್ಟು ಹದವಾಗಲಿದೆ. ಚಪಾತಿ ಮೃದುವಾಗಿ ತಿನ್ನಲು ಹಿತಕರವಾಗಲಿದೆ, ಅಷ್ಟೇ ಅಲ್ಲಾ ಕಲಸಿದ ಹಿಟ್ಟಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಪಾತಿ ತಯಾರು ಮಾಡಬಹುದು. ಇದು ವಾಸ್ತವ, ಇದನ್ನು ಅರಿತು ಈಗಿನಿಂದಲೇ ಚುನಾವಣೆಗೆ ಸಿದ್ದತೆ ನಡೆಸಿ ಅದಕ್ಕೆ ತಕ್ಕಂತೆ ಜನರ ಮನಸ್ಥಿತಿ ತಯಾರು ಮಾಡುವಂತೆ ಸೂಚಿಸಿದ್ದಾರೆ.

 ಇನ್ನು ಕರ್ನಾಟಕದ ಭೂಪಟವೊಂದನ್ನು ತಮ್ಮಲ್ಲಿಟ್ಟುಕೊಂಡಿರುವ ಅಮಿತ್ ಶಾ ಬೇರೆ ಸೂತ್ರ ನೀಡಿದ್ದಾರೆ. ವಿಧಾನಸಭೆಗೆ ಸ್ಪರ್ಧಿಸಲು ಯಾವುದೇ ಸಂಸದರಿಗೂ ಅವಕಾಶ ನೀಡುವುದಿಲ್ಲ ಹೀಗಾಗಿ ವಿಧಾನಸಭೆಗೆ ಸ್ಪರ್ಧಿಸಬೇಕೆಂದು ತಯಾರಿ ಮಾಡುತ್ತಿದ್ದರೆ ಅದನ್ನು ಇಲ್ಲಿಯೇ ಕೊನೆಗೊಳಿಸಿ ಎಂಬ ಖಡಕ್ ಸಂದೇಶ ನೀಡಿದರು.

ಎಲ್ಲಾ ಸಂಸದರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಗೆಲುವಿನ ಜವಾಬ್ದಾರಿ ಹೊರಬೇಕು, ಗೆಲುವಿಗೆ ಕಾರಣವಾಗುವ ಅಂಶಗಳನ್ನು ಈಗಲೇ ಪಟ್ಟಿ ಮಾಡಿ ಅವುಗಳ ಅನುಷ್ಠಾನದಲ್ಲಿ ತೊಡಗಬೇಕು. ಈ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿ ಯಾರೆಂದು ಹುಡುಕಿ ಅವರಿಗೆ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಬೇಕು. ಆದರೆ ಟಿಕೆಟ್ ಹಂಚಿಕೆ ವಿಷಯದಲ್ಲಿ ತಮ್ಮ ನಿರ್ಧಾರವೇ ಅಂತಿಮ ಅದನ್ನು ತಾವು ಆಯ್ಕೆಮಾಡುವ ಅಭ್ಯರ್ಥಿಗೂ ತಿಳಿಸಬೇಕು. ಅಭ್ಯರ್ಥಿ ಆಯ್ಕೆ ಸಮಯದಲ್ಲಿ ಗೆಲುವೇ ಮಾನದಂಡ. ಪ್ರದೇಶ, ಜಾತಿ, ವರ್ಗಗಳೆಂಬ ಪ್ರಾತಿನಿದ್ಯ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಬರುವ ನಾಲ್ಕು ತಿಂಗಳಲ್ಲಿ ತಾವು 180 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನೂ ಆಯ್ಕೆ ಮಾಡುತ್ತೇವೆ. ಸಂಭಾವ್ಯರಿಗೆ ತಮ್ಮದೇ ಶೈಲಿಯಲ್ಲಿ ಸಂದೇಶ ರೂಪಿಸುತ್ತೇವೆ. ಸಂಸದರಾದ ತಾವು ಗೆಲುವಿನ ಉಸ್ತುವಾರಿ ವಹಿಸಬೇಕು. ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಪ್ರತಿಯೊಬ್ಬ ಮತದಾರರ ಮನೆ-ಮನೆಗೂ ತಲುಪಿಸಬೇಕು. ನಿರಂತರ ಪ್ರವಾಸದಲ್ಲಿ ತೊಡಗುವ ಮೂಲಕ ಕಾರ್ಯಕರ್ತರು ಎಲ್ಲಿಯೂ ಬೇಸರ ಪಡದಂತೆ ನೋಡಿಕೊಳ್ಳ ಬೇಕೆಂದು ಸೂಚಿಸಿದ್ದಾರೆ.

ಮುಂದಿನ ತಿಂಗಳಿಂದ ತಮ್ಮ ಭೇಟಿ ಕರ್ನಾಟಕಕ್ಕೆ ನಿರಂತರವಾಗಲಿದೆ. ಚುನಾವಣೆಗೆ ಆರು ತಿಂಗಳಿವೆ ಎನ್ನುವಾಗಲೇ ತಾವು ಮತ್ತು ಪ್ರಧಾನಿ ಪ್ರವಾಸ ಆರಂಭಿಸುತ್ತೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ತಾವಿಬ್ಬರೂ ಭೇಟಿ ನೀಡಲಿದ್ದು, ಪಕ್ಷದ ಅಧ್ಯಕ್ಷರಾಗಿ ತಾವು ಕನಿಷ್ಠ 180 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೇವೆ. ಈ ಎಲ್ಲಾ ಕ್ಷೇತ್ರಗಳ ಭೌಗೋಳಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯ ಸಮಗ್ರ ವರದಿ ಈಗಾಗಲೆ ತಮ್ಮ ಬಳಿಯಲ್ಲಿದೆ. ಈ ಕ್ಷೇತ್ರಗಳಿಗೆ ತಾವು ಭೇಟಿ ನೀಡುವ ಮುನ್ನ ಪಕ್ಷದಲ್ಲಿರುವ ಸಣ್ಣ-ಪುಟ್ಟ ಗೊಂದಲ, ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಇತ್ಯರ್ಥಗೊಂಡಿರಬೇಕು ಎಂದು ಸಲಹೆ ಮಾಡಿದ್ದಾರೆ.

ಕರಾವಳಿ ಮತ್ತು ಮಲೆನಾಡು ಕರ್ನಾಟಕದಲ್ಲಿ ಗೋಹತ್ಯೆ ಹಾಗೂ ಅಲ್ಪಸಂಖ್ಯಾತರ ಮುಷ್ಠೀಕರಣದ ಕಾಂಗ್ರೆಸ್ ನೀತಿಯ ವಿರುದ್ಧ ಜನಾಭಿಪ್ರಾಯ, ಉಳಿದಕಡೆ ರೈತರ ಆತ್ಮಹತ್ಯೆ ಹಾಗೂ ಬರಗಾಲ ನಿರ್ವಹಣೆಯಲ್ಲಿನ ಸರ್ಕಾರದ ವೈಫಲ್ಯವನ್ನಿಟ್ಟುಕೊಂಡು ಚುನಾವಣೆ ಸಿದ್ಧತೆ ನಡೆಸಲು ಸೂಚಿಸಿದ್ದಾರೆ.

ಈ ಮೂಲಕ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಕರ್ನಾಟಕವನ್ನು ಟಾರ್ಗೆಟ್ ಮಾಡಿಕೊಂಡು ರೂಪಿಸುತ್ತಿರುವ ಕಾರ್ಯತಂತ್ರ ಎಷ್ಷರ ಮಟ್ಟಿಗೆ ಯಶಸ್ವಿಯಾಗಲಿದೆ, ಇದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಯಾವ ಮಟ್ಟಿಗೆ ಹಿಮ್ಮೆಟ್ಟಿಸಲಿವೆ ಎಂಬುವುದನ್ನು ನೋಡಲು ಚುನಾವಣೆವರೆಗೂ ಕಾಯಬೇಕು ಎಂಬುದು ನಿಜವಾದರೂ , ಅಮಿತ್ ಶಾ ಮತ್ತು ಮೋದಿ ಜೋಡಿಯ ತಂತ್ರಗಾರಿಕೆ ನಿಜಕ್ಕೂ ಕುತೂಹಲ ಮೂಡಿಸಿದೆ.

 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ