ರತ್ನಪ್ರಭಾ ಆಗ್ತಾರಾ ರಾಜ್ಯ ಮುಖ್ಯ ಕಾರ್ಯದರ್ಶಿ..?

Ratnaprabha will be next State Chief Secretary ..?

28-11-2017

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೆ.ರತ್ನಪ್ರಭಾ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಆ ಇದೇ 30 ರಂದು ಸೇವೆಯಿಂದ ನಿವೃತ್ತರಾಗಲಿದ್ದು, ಈ ಹುದ್ದೆಗೆ ಮೂರು ಮಂದಿ ಹಿರಿಯ ಅಧಿಕಾರಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

 ರಾಜ್ಯಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಕೇಂದ್ರ ಸೇವೆಯಲ್ಲಿದ್ದು, ಎಸ್.ಕೆ. ಪಟ್ಟಾನಾಯಕ್, ಅಭಿವೃದ್ಧಿ ಆಯುಕ್ತ ಟಿ.ಎಂ.ವಿಜಯಭಾಸ್ಕರ್ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಕೆ. ರತ್ನಪ್ರಭ ನೇಮಕವಾದರೇ ರಾಜ್ಯದ ಎರಡು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಮುಖ್ಯಸ್ಥರಾಗಲಿದ್ದಾರೆ. ಈಗಾಗಲೇ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ರಾಜು ನೇಮಕವಾಗಿ ತಿಂಗಳು ಕಳೆದಿದೆ.

ಆದರೆ ಸೇವಾ ಹಿರಿತನ ಸೇರಿದಂತೆ ಎಲ್ಲಾ ರೀತಿಯಲ್ಲೂ ರತ್ನಪ್ರಭಾ ಅವರ ಹೆಸರು ಮಂಚೂಣಿಯಲ್ಲಿದೆ. ದಲಿತ ಸಮುದಾಯಕ್ಕೆ ಸೇರಿರುವ ರತ್ನಪ್ರಭಾ ಅವರನ್ನು ಕಡೆಗಣಿಸಿ, ಬೇರೆಯವರಿಗೆ ಮಣೆ ಹಾಕಿದರೆ ಚುನಾವಣಾ ಹೊಸ್ತಿಲಿನಲ್ಲಿರುವ ಕರ್ನಾಟಕದಲ್ಲಿ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇರುವುದನ್ನು ಮನಗಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ರತ್ನಪ್ರಭಾ ಅವರಿಗೆ ಆದ್ಯತೆ ನೀಡುವ ನಿರೀಕ್ಷೆ ಹೆಚ್ಚಾಗಿದೆ.

ಕೆ.ರತ್ನಪ್ರಭಾರವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಿ ಎಂದು ಕಾಂಗ್ರೆಸ್‍ನ ಕೆಲ ಪ್ರಭಾವಿ ಸಚಿವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ. ಮುಖ್ಯ ಕಾರ್ಯದರ್ಶಿ ಹುದ್ದೆ ರೇಸ್‍ನಲ್ಲಿರುವ ಎಸ್.ಕೆ. ಪಟ್ಟ ನಾಯಕ್, ಟಿ.ಎಂ. ವಿಜಯಭಾಸ್ಕರ್ ಪರವಾಗಿಯೂ ಕೆಲ ಸಚಿವರು ಲಾಬಿ ನಡೆಸಿರುವುದು ಗುಟ್ಟೇನಲ್ಲ. ಸೇವಾ ಹಿರಿತನದಲ್ಲಿ ಕೆ. ರತ್ನಪ್ರಭಾ ಮೊದಲಿಗರಾಗಿದ್ದು, ನಂತರ ಎಸ್.ಕೆ. ಪಟ್ಟನಾಯಕ್ ಇದ್ದಾರೆ. ಮೂರನೆ ಸ್ಥಾನದಲ್ಲಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಇವರ ನಂತರ ಎಸ್. ಕೃಷ್ಣರಾವ್ ಸೇವಾ ಹಿರಿತನ ಹೊಂದಿದ್ದಾರೆ. ಹಾಲಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಆ ಕೇಂದ್ರ ಸೇವೆಯಲ್ಲಿದ್ದಾಗಲೇ ಕೆ. ರತ್ನಪ್ರಭಾರವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡುವ ಪ್ರಸ್ತಾಪ ಇತ್ತು. ಆದರೆ ಸೇವಾ ಹಿರಿತನ ಹೊಂದಿದ್ದ ಸುಭಾಷ್ ಚಂದ್ರ ಕುಂಟಿಆ ಅವರನ್ನು ರಾಜ್ಯ ಸೇವೆಗೆ ಕರೆಸಿ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಹಾಗಾಗಿ ಈ ಬಾರಿಯೂ ಸೇವಾ ಹಿರಿತನ ಪಾಲಿಸುವ ಸಾಧ್ಯತೆ ನಿಚ್ಚಳವಾಗಿದ್ದು, ಕೆ. ರತ್ನಪ್ರಭಾರವರು ಮುಖ್ಯ ಕಾರ್ಯದರ್ಶಿಯಾಗುವುದು ಬಹುತೇಕ ನಿಶ್ಚಿತ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ