‘ಬಿಎಸ್ ವೈ ಸ್ಪರ್ಧೆ ಖಚಿತ’27-11-2017

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಎನ್ನುವುದು ಕೇವಲ ಕಾಂಗ್ರೆಸ್‍ನ ಅಪಪ್ರಚಾರ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಇದರಿಂದ ಹತಾಶಗೊಂಡಿರುವ ಕಾಂಗ್ರೆಸ್‍ನ ಕೆಲವರು ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು ಅವರ ಸ್ಪರ್ಧೆ ಖಚಿತ. ಹೀಗಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ನ ಷಡ್ಯಂತರ ನಡೆಯುವುದಿಲ್ಲ ಎಂದರು.

ಅಸಹಜ ಮತ್ತು ಹತ್ಯೆ ಪ್ರಕರಣಗಳಲ್ಲಿ ಕೆ.ಜೆ.ಜಾರ್ಜ್ ಮತ್ತು ವಿನಯ ಕುಲಕರ್ಣಿ ಪ್ರಕರಣದಲ್ಲಿ ಸಾಕ್ಷಿಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ಆರೋಪ ಕೇಳಿಬಂದ ಸಚಿವರು ಸಂಪುಟದಲ್ಲಿ ಮುಂದುವರಿದರೆ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹೀಗಾಗಿ ಆದ್ದರಿಂದ ಸಚಿವರಾದ ಜಾರ್ಜ್ ಮತ್ತು ವಿನಯ ಕುಲಕರ್ಣಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿನ ಅನೇಕ ಪ್ರಕರಣಗಳಲ್ಲಿ ತನಿಖೆಯ ದಾರಿ ತಪ್ಪಿಸುವ ಕೆಲಸ ನಡೆಯುತ್ತಲೇ ಇದೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನಿಂದ ಈಚೆಗೆ ಎಲ್ಲಾ ಪ್ರಕರಣಗಳಲ್ಲೂ ಸರ್ಕಾರ ದಾರಿ ತಪ್ಪಿಸುವ ಹೇಳಿಕೆ ನೀಡಿದೆ. ಸರ್ಕಾರದ ಧೋರಣೆ ಇಂತಹ ಪ್ರಕರಣಗಳಲ್ಲಿ ಸರಿ ಇಲ್ಲ ಎನ್ನುವ ಕಾರಣಕ್ಕಾಗಿಯೇ ಸುಪ್ರೀಂ ಕೋರ್ಟ್, ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ಹೇಳಿದರು.

ಆದರೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ಚಿಕ್ಕದಾಗಿ ಹಾಗೂ ಅಂಬೇಡ್ಕರ್ ಅವರ ಚಿತ್ರವನ್ನು ದೊಡ್ಡದಾಗಿ ಪ್ರಕಟಿಸಿದೆ. ಆದರೆ ಮೋದಿ ಅವರನ್ನು ಸದಾ ಟೀಕೆ ಮಾಡುವ ಮುಖ್ಯಮಂತ್ರಿ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. 

ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ರಾಜ ಮನೆತನದ ಪ್ರಮುಖರನ್ನು ಆಹ್ವಾನಿಸದೇ ಇರುವುದು ಸರಿ ಅಲ್ಲ. ಕಡೇ ಪಕ್ಷ ಈ ಸರ್ಕಾರಕ್ಕೆ ಉಪಕಾರ ಸ್ಮರಣೆಯ ಸೌಜನ್ಯವೂ ಇಲ್ಲ. ಕನ್ನಡ ಭಾಷೆಯು ಜಾತಿ ಮತ್ತು ಧರ್ಮವನ್ನು ಮೀರಿದ್ದು. ಯಾರು ಕನ್ನಡ ಭುವನೇಶ್ವರಿಗೆ ನಮನ ಮಾಡುವುದಿಲ್ಲವೋ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು.  ಸಮ್ಮೇಳನಾಧ್ಯಕ್ಷರು, ಕೇಂದ್ರ ಸಚಿವ ಅನಂತಕುಮಾರ್ ಅವರ ಬಗ್ಗೆ ಅತ್ಯಂತ ಕೀಳಾಗಿ ಟೀಕಿಸಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ