ಅಣ್ಣ-ತಮ್ಮ ಮತ್ತು ಎಟಿಎಂ ದರೋಡೆ

2 brothers and ATM robbery

27-11-2017

ಬೆಂಗಳೂರು: ಗ್ಯಾಂಗ್ ಕಟ್ಟಿಕೊಂಡು ಮಾಡಿದ ಸಾಲ ತೀರಿಸಲು ಎಟಿಎಂ ಘಟಕಕ್ಕೆ ನುಗ್ಗಿ 7ಲಕ್ಷ 85 ಸಾವಿರ ಹಣವಿದ್ದ, ಎಟಿಎಂ ಯಂತ್ರವನ್ನು ಕದ್ದೊಯ್ದ ಅಣ್ಣ-ತಮ್ಮ ಸೇರಿ ನಾಲ್ವರ ಗ್ಯಾಂಗ್‍ ಅನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಗೌಡಗೆರೆಯ ಶಿವಕುಮಾರ್ ಅಲಿಯಾಸ್ ಶಿವ(23) ಆತನ ತಮ್ಮ ಶ್ರೀಧರ(21), ಕೀರ್ತಿಕುಮಾರ್ ಅಲಿಯಾಸ್ ಕೀರ್ತಿ(20), ರಾಕೇಶ್.ಜಿ(21) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಊರಿನಲ್ಲಿ ನಿರ್ಮಿಸಿದ್ದ ಮನೆಯ ಸಾಲ ಹಾಗೂ ಉಬರ್‍ ಕ್ಯಾಬ್ ನ ಕಾರಿನ ಸಾಲ ತೀರಿಸಲು ಗ್ಯಾಂಗ್ ಕಟ್ಟಿಕೊಂಡು ಕೃತ್ಯ ವೆಸಗಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.

ಆರೋಪಿಗಳಿಂದ ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಂ ನಲ್ಲಿ ಕಳ್ಳತನ ಮಾಡಿದ್ದ ಹಣದಲ್ಲಿ 6ಲಕ್ಷ 25 ಸಾವಿರ ಹಣ, ಎ.ಟಿ.ಎಂ ಮಷಿನ್ ಹಾಗೂ ಕೃತ್ಯವೆಸಗಲು ಬಳಸಿದ್ದ ಗ್ಯಾಸ್ ಕಟರ್, ಸ್ಕ್ರೂಡೈವರ್ ಇಟಿಯೋಸ್ ಕಾರು, ಸ್ಲೆಂಡರ್ ಪ್ಲಸ್ ಬೈಕ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಲಯ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಆರೋಪಿಗಳಲ್ಲಿ ಸಹೋದರರಾದ ಶಿವ ಹಾಗೂ ಶ್ರೀಧರ ಊರಿನಲ್ಲಿ ಮನೆಕಟ್ಟಿದ್ದು, ಅದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದರು. ಅಲ್ಲದೇ ಒಂದು ತಿಂಗಳ ಹಿಂದೆ ಶ್ರೀಧರ ಊಬರ್ ಕಂಪನಿಯಿಂದ ಕ್ಯಾಬ್ ಓಡಿಸಲು ಸಾಲ ಮಾಡಿ ಇಟಿಯೋಸ್ ಕಾರು ಖರೀದಿಸಿದ್ದನು. ಇದರಿಂದ ಸಾಲ ಮತ್ತಷ್ಟು ಸಾಲ ಬೆಳೆದು ಸಾಲ ಹಿಂತಿರುಗಿಸುವಂತೆ ಒತ್ತಡ ಹೆಚ್ಚಾಗಿದ್ದರಿಂದ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ತನ್ನದೇ ಗ್ರಾಮದ ಇನ್ನಿಬ್ಬರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಆರೋಪಿಗಳನ್ನು ಸೇರಿಸಿಕೊಂಡು ಗ್ಯಾಂಗ್ ಕಟ್ಟಿಕೊಂಡಿದ್ದರು. ಸುಲಭವಾಗಿ ಹಣ ಗಳಿಸಲು ಎಟಿಎಂಗೆ ನುಗ್ಗಿ ಕಳವು ಮಾಡುವ ಯೋಜನೆ ಹಾಕಿಕೊಂಡು ಕೆಲದಿನಗಳಿಂದ ತಯಾರಿ ನಡೆಸಿದ್ದರು, ಅದರಂತೆ ಗ್ಯಾಸ್ ಕಟ್ಟರ್ ಇನ್ನಿತರ ವಸ್ತುಗಳನ್ನು ಖರೀದಿಸಿ ಸಂಚು ರೂಪಿಸಿದ್ದರು.

ಕಳೆದ ನ.1ರಂದು ರಾತ್ರಿ 12-30ರ ವೇಳೆ ಜೆ.ಪಿ ನಗರ 8ನೇ ಹಂತದ ಗೊಟ್ಟಿಗೆರೆಯ ವಿನಾಯಕ ಚಿತ್ರಮಂದಿರದ ಬಳಿಯಿರುವ  ಸ್ಟೇಟ್ ಬ್ಯಾಂಕ್ ಆಫ್ ಎ.ಟಿ.ಎಂ ಕೇಂದ್ರಕ್ಕೆ ನುಗ್ಗಿ ಸಿ.ಸಿ.ಟಿ.ವಿ ಕ್ಯಾಮೇರಾವನ್ನು ದ್ವಂಸಗೊಳಿಸಿ 7ಲಕ್ಷ 85 ಸಾವಿರ 99 ರೂಗಳಿದ್ದ ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದರು.

ಈ ಸಂಬಂಧ ಭದ್ರತೆಯ ಜವಾಬ್ದಾರಿ ಹೊಂದಿದ್ದ ಸೈಂಟಿಫಿಕ್ ಸೆಕ್ಯೂರಿಟಿ ಏಜೆನ್ಸಿಯ ಸೂಪರ್ ವೈಸರ್ ನಾಗರಾಜು ನೀಡಿದ ದೂರು ದಾಖಲಿಸಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮೊಬೈಲ್ ಕರೆಗಳ ವಿವರ ಸಂಗ್ರಹಿಸಿ ಸಿಸಿ ಟಿವಿ ಕ್ಯಾಮಾರಲ್ಲಿ ಕಳವಿನ ದೃಶ್ಯಗಳನ್ನು ಪರಿಶೀಲಿಸಿ ಕಾರ್ಯಾಚರಣೆ ಕೈಗೊಂಡು ಗ್ಯಾಂಗ್‍ನ್ನು ಪತ್ತೆಹಚ್ಚಲಾಗಿದೆ. ಆರೋಪಿಗಳ ಬಂಧನದಿಂದ 2 ಎಟಿಎಂ ಕಳವು ಪ್ರಕರಣಗಳು ಪತ್ತೆಯಾಗಿವೆ ಕಳವು ಮಾಡಿದ ಹಣದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಹಣವನ್ನು ಖರ್ಚು ಮಾಡಿಕೊಂಡಿರುವು ತನಿಖೆಯಲ್ಲಿ ಕಂಡುಬಂದಿದೆ.


ಸಂಬಂಧಿತ ಟ್ಯಾಗ್ಗಳು

ATM machine Robbery Gang ಸಂಚು ಎಟಿಎಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ