ಕಾದ ಎಣ್ಣೆ ಪತ್ನಿ ಕಾಲಿಗೆ ಸುರಿದ ದುಷ್ಟ

Dowry harassment man detained

24-11-2017

ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಕಾಲಿಗೆ ಕುದಿಯುವ ಎಣ್ಣೆ ಸುರಿದು ಚಿಕಿತ್ಸೆ ಕೊಡಿಸದೇ ಮನೆಯಲ್ಲಿ ಕೂಡಿಹಾಕಿ ಕಾರು ಚಾಲಕನೊಬ್ಬ ವಿಕೃತಿ ಮೆರೆದಿರುವ ಹೀನ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಬಾಗಲಗುಂಟೆಯ ಮಲ್ಲಸಂದ್ರದಲ್ಲಿ ನಡೆದಿರುವ ಈ ಕೃತ್ಯದಲ್ಲಿ ಪತ್ನಿಯ ಬಲಗಾಲಿಗೆ ಕುದಿಯುವ ಎಣ್ಣೆ ಸುರಿದು ಗಾಯಗೊಂಡಿದ್ದರೂ ಆಸ್ಪತ್ರೆಗೆ ಕರೆದೊಯ್ಯದೆ ಕೂಡಿ ಹಾಕಿ ಮೃಗೀಯ ವರ್ತನೆ ತೋರಿದ್ದ ಕಾರು ಚಾಲಕ ಶ್ಯಾಂಸುಂದರ್(38)ನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ನಾಗಮಂಗಲ ಮೂಲದ ಶಕುಂತಲಾ (31) ಅವರನ್ನು 10 ವರ್ಷದ ಹಿಂದೆ ಮದುವೆಯಾಗಿದ್ದ ಶ್ಯಾಂಸುಂದರ್, ಮಲ್ಲಸಂದ್ರದಲ್ಲಿ ನೆಲೆಸಿದ್ದ. ದಂಪತಿಗೆ ಒಂದು ಹೆಣ್ಣು ಮಗುವಿದ್ದು, ಅದನ್ನು ಶಕುಂತಲಾ ಅವರು ತವರಿಗೆ ಬಿಟ್ಟಿದ್ದಾರೆ.

ಕೆಲ ತಿಂಗಳಿನಿಂದ ಶಕುಂತಲಾಗೆ ತವರಿನಿಂದ ಹಣ ತರುವಂತೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದ್ದು, ಹಣ ತರದ ಶಕುಂತಲಾ ವಿರುದ್ಧ ಆಕ್ರೋಶಗೊಂಡಿದ್ದ ಶ್ಯಾಂಸುಂದರ್, ತಾಯಿ ಲಲಿತಮ್ಮ ಜೊತೆ ಸೇರಿ ಕಳೆದ ನ. 7ರಂದು ಪತ್ನಿಯ ಕಾಲಿಗೆ ಕುದಿಯುವ ಎಣ್ಣೆ ಸುರಿದು ಹೊಡೆದು ಕಿರುಕುಳ ನೀಡಿದ್ದನು.

ಸುಟ್ಟ ಗಾಯದಿಂದ ನರಳಾಡುತ್ತಿದ್ದರೂ ಚಿಕಿತ್ಸೆ ಕೊಡಿಸದೆ ಕೂಡಿ ಹಾಕಿದ್ದು, ಗುರುವಾರ ಶಕುಂತಲಾ ಪೋಷಕರು ಮನೆಗೆ ಬಂದು ನೋಡಿದಾಗ ಶಕುಂತಲಾ ಗಾಯಗೊಂಡು ನರಳಾಡುತ್ತಿರುವುದು ಗೊತ್ತಾಗಿದೆ. ಕೂಡಲೇ ಠಾಣೆಗೆ ತೆರಳಿದ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿರುವ ಬಾಗಲಗುಂಟೆ ಪೊಲೀಸರು ಶ್ಯಾಂಸುಂದರ್‍ ನನ್ನು ಬಂಧಿಸಿದ್ದಾರೆ. ಲಲಿತಮ್ಮ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದ ನಂತರ ಅವರನ್ನು ಬಂಧಿಸಿ ತನಿಖೆ ನಡೆಸುವುದಾಗಿ ಡಿಸಿಪಿ ಚೇತನ್‍ಸಿಂಗ್ ರಾಥೋರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Dowry harassment Animal behavior ವಿಕೃತಿ ವರದಕ್ಷಿಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ