‘ತಡವಾಗಿ ನೀಡಿದ ನಿಲುವಳಿ ತಿರಸ್ಕಾರ’23-11-2017

ಬೆಳಗಾವಿ: ನೈಸ್ ಹಗರಣದ ಚರ್ಚೆಗೆ ಅವಕಾಶ ನೀಡುವಂತೆ ಜೆಡಿಎಸ್ ಸಲ್ಲಿಸಿದ್ದ ನಿಲುವಳಿ ಸೂಚನೆಯನ್ನು ತಾಂತ್ರಿಕ ಕಾರಣಕ್ಕಾಗಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿಧಾನಪರಿಷತ್‍ನಲ್ಲಿಂದು ತಿರಸ್ಕರಿಸಿದರು. ಆರಂಭದಲ್ಲೇ ಜೆಡಿಎಸ್‍ನ ಉಪನಾಯಕರಾದ ಶ್ರೀಕಂಠೇಗೌಡ, ಟಿ.ಎ.ಶರವಣ ಮತ್ತಿತರರು ವಿಷಯ ಪ್ರಸ್ತಾಪಿಸಿ ನೈಸ್ ಹಗರಣದ ಅಧ್ಯಯನಕ್ಕಾಗಿ ರಚಿಸಿದ್ದ ಸದನ ಸಮಿತಿಯ ವರದಿ ಕುರಿತು ಚರ್ಚಿಸಬೇಕಿದೆ. ಇದಕ್ಕಾಗಿ ನಾವು ನಿಲುವಳಿ ಸೂಚನೆ ನೀಡಿದ್ದೇವೆ ಎಂದು ಸಭಾಪತಿ ಅವರ ಗಮನ ಸೆಳೆದರು.

10 ಗಂಟೆಯ ಒಳಗೆ ಬಂದಂತಹ ಸೂಚನೆಗಳನ್ನು ಪರಿಗಣಿಸಲಾಗುತ್ತದೆ. ಜೆಡಿಎಸ್ 10.30ಕ್ಕೆ ನಿಲುವಳಿ ಸೂಚನೆ ನೀಡಿದೆ. ಇದನ್ನು ಪರಿಗಣಿಸಲು ಸಾಧ್ಯವಿಲ್ಲ. ನಾನು 10 ಗಂಟೆ 5 ನಿಮಿಷಕ್ಕೆ ನಮ್ಮ ಕಚೇರಿಗೆ ಬಂದಿರುವ ಎಲ್ಲಾ ಸೂಚನೆಗಳನ್ನು ಪರಿಶೀಲಿಸಿದ್ದೇನೆ. ಆ ವೇಳೆ ನೈಸ್ ಸಂಬಂಧಿತ ಯಾವುದೇ ಸೂಚನೆಗಳು ಬಂದಿರಲಿಲ್ಲ. ಅರ್ಧ ಗಂಟೆ ತಡವಾಗಿ ನೀಡಿರುವುದರಿಂದ ಇದನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು.

ಬೆಳಗಾವಿಯಲ್ಲಿ ಸುವರ್ಣಸೌಧಕ್ಕೂ ಸಭಾಪತಿ ಮತ್ತು ಶಾಸಕರ ವಾಸ್ತವ್ಯಕ್ಕೂ ತುಂಬಾ ಅಂತರ ಇದೆ. ಹೀಗಾಗಿ ವಿಳಂಬವಾಗಿದೆ. ಇದು 30 ಸಾವಿರ ಕೋಟಿ ರೂಪಾಯಿ ಹಗರಣ. ಸಾರ್ವಜನಿಕವಾಗಿ ಅತ್ಯಂತ ಮಹತ್ವದ್ದು. ದಯವಿಟ್ಟು ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಇದನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಿದ ಸಭಾಪತಿಯವರು ಈಗಾಗಲೇ ರೂಲಿಂಗ್ ನೀಡಲಾಗಿದೆ. ಹಾಗಾಗಿ ಜೆಡಿಎಸ್ ಶಾಸಕರು ಸಮಯ ವ್ಯರ್ಥ ಮಾಡದೆ ಮುಂದಿನ ಕಲಾಪಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು. ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡಲಾಗಿದೆ ಎಂದು ಸಭಾಪತಿ ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

D.H.Shankaramurthy NICE Scandal ಸಭಾಪತಿ ನಿಲುವಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ