ಖತರ್ನಾಕ್ ಸರಗಳ್ಳರ ಗ್ಯಾಂಗ್ ಬಂಧನ

Chain snatch gang arrested

23-11-2017

ಬೆಂಗಳೂರು: ಮೈಸೂರಿನಿಂದ ನಗರಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ನ್ನು ಪತ್ತೆಹಚ್ಚಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ನಾಲ್ವರನ್ನು ಬಂಧಿಸಿ, 14 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ ಸುಜುಕಿ ಬೈಕನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರಿನ ಮಂಡಿ ಮೊಹಲ್ಲಾದ ಮಹಮ್ಮದ್ ಫಹಜ್ ಖಾನ್ ಅಲಿಯಾಸ್ ದೇವಿ (25), ನೂರ್ ಅಹಮದ್ ಅಲಿಯಾಸ್ ಸದ್ದಾಂ (26), ಕನಕನಗರದ ಸಯ್ಯದ್ ಹಬೀಬ್ ಅಲಿಯಾಸ್ ಹನಿ ಸಿಂಗ್(21), ಅಂಜನಾಪುರದ ಸೈಯ್ಯದ್ ತಬ್ರೇಜ್ (25)ಎಂದು ಬಂಧಿತ ಆರೋಪಿಗಳನ್ನು ಗುರುತಿಸಲಾಗಿದೆ.

ಸುಮಾರು 23 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಮೋಜಿನ ಜೀವನ ನಡೆಸುತ್ತಿದ್ದ, ಸಯ್ಯದ್ ಹಬೀಬ್ ಮತ್ತೊಬ್ಬ ಆರೋಪಿ ನೂರ್ ಅಹಮ್ಮದ್ ಜೊತೆ ನಗರಕ್ಕೆ ಬಂದು ಕೋಣನಕುಂಟೆಯ ಎಂ.ಕೆ.ಎಸ್. ಲೇಔಟ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಇನ್ನಿಬ್ಬರು ಆರೋಪಿಗಳ ಜೊತೆ ಗ್ಯಾಂಗ್ ಕಟ್ಟಿಕೊಂಡಿದ್ದ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಗ್ಯಾಂಗ್‍ನಲ್ಲಿದ್ದ ನಾಲ್ವರು ಎರಡು ತಂಡಗಳಾಗಿ ನಗರದ ಕೆ.ಎಸ್. ಲೇಔಟ್, ಸುಬ್ರಮಣ್ಯಪುರ, ಗಿರಿನಗರ, ಬಸವನಗುಡಿ, ಇನ್ನಿತರ ಕಡೆಗಳಲ್ಲಿ ಬೈಕ್‍ನಲ್ಲಿ ಸಂಚರಿಸುತ್ತಾ, ಒಂಟಿ ಮಹಿಳೆಯರ ಸರ ಕಳವು ಮಾಡಿ ಪರಾರಿಯಾಗುತ್ತಿದ್ದರು. ಇದಲ್ಲದೆ, ಮಂಡ್ಯ, ಮೈಸೂರು, ನಂಜನಗೂಡು, ಚಾಮರಾಜನಗರಗಳಲ್ಲೂ ಆರೋಪಿಗಳು ಬೈಕ್‍ನಲ್ಲಿ ಸುತ್ತಾಡುತ್ತಾ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದರು. ಕಳವು ಮಾಡಿದ ಸರಗಳನ್ನು ಮಂಡ್ಯ ಮತ್ತು ಮೈಸೂರಿನಲ್ಲಿ ವಿಲೇವಾರಿ ಮಾಡಿ ನಗರಕ್ಕೆ ಬಂದು ಸಬ್ಯಸ್ಥರಂತೆ ವಾಸಿಸುತ್ತಿದ್ದರು.

ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದಿದ್ದ ಸರಗಳ್ಳತನದ ಜಾಡು ಹಿಡಿದ ಇನ್ಸ್ ಪೆಕ್ಟರ್ ಗುರುಪ್ರಸಾದ್ ಅವರನ್ನೊಳಗೊಂಡ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನದಿಂದ ಕುಮಾರಸ್ವಾಮಿ ಲೇಔಟ್ 3, ಸುಬ್ರಮಣ್ಯಪುರ 2, ಗಿರಿನಗರ, ಬಸವನಗುಡಿ ತಲಾ ಒಂದು ಸೇರಿ 7 ಅಲ್ಲದೆ, ಮಂಡ್ಯ, ಶ್ರೀರಂಗಪಟ್ಟಣದ ತಲಾ 2, ಮೈಸೂರಿನ ಕೆ.ಆರ್. ನಗರ,ಕೊಳ್ಳೆಗಾಲ, ನರಸಿಂಹರಾಜ ತಲಾ ಒಂದು ಸೇರಿ, 14 ಸರಗಳವು ಪ್ರಕರಣಗಳು, ಒಂದು ಡಕಾಯಿತಿ ಪ್ರಕರಣ ಪತ್ತೆಯಾಗಿವೆ. ಆರೋಪಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಯಾವುದೇ ಕೆಲಸಕ್ಕೆ ಹೋಗದೆ ಮಹಿಳೆಯರ ಚಿನ್ನದ ಸರಗಳನ್ನು ಕಸಿಯುವುದರಲ್ಲಿ ನಿಪುಣರಾಗಿ ಅದರಿಂದಲೇ ಜೀವನ ಸಾಗಿಸುತ್ತಿರುವುದು ಪತ್ತೆಯಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ