ವಿಧಾನಪರಿಷತ್ ನಲ್ಲಿ ಬಿಜೆಪಿ ಪ್ರತಿಭಟನೆ

BJP protests at Vidhan Parishad

23-11-2017 675

ಬೆಳಗಾವಿ: ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕರಣಗಳ ಕುರಿತು ಬಿಜೆಪಿ ಸದಸ್ಯರು ವಿಧಾನ ಪರಿಷತ್ತಿನಲ್ಲಿಂದು ಪ್ರತಿಭಟನೆ ನಡೆಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕರಾದ ಸೋಮಣ್ಣ  ಬೇವಿನ ಮರದ ಅವರು, ರಾಜ್ಯದಲ್ಲಿ ಕಳೆದ ಆರು ವರ್ಷಗಳಲ್ಲಿ ನಡೆದ ಕೊಲೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳೆಷ್ಟು? ನಾಲ್ಕು ವರ್ಷಗಳಿಂದೀಚೆಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಮತ್ತು ಅವರ ಮೇಲಾದ ಹಲ್ಲೆಪ್ರಕರಣಗಳೆಷ್ಟು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರ ನೀಡಲು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸಮಯ ಕೇಳಿದರು. ರಾಜ್ಯದಲ್ಲಿ 15 ಜನ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಸಚಿವರೊಬ್ಬರ ಕೈವಾಡದಿಂದ ಇಲ್ಲಿ ಕೊಲೆಯಾಗಿತ್ತು. ಪ್ರಕರಣವನ್ನು ಮುಚ್ಚಿ ಹಾಕಲು ಖುದ್ದಾಗಿ ಸಚಿವರೇ ಹತ್ಯೆಯಾದ ಜಿ.ಪಂ. ಸದಸ್ಯನ ಮನೆಗೆ ಹೋಗಿ ತನ್ನ ಪರವಾಗಿ ಸಾಕ್ಷಿ ಹೇಳಬೇಕೆಂದು ಹತ್ಯೆಯಾದವರ ಪತ್ನಿಯನ್ನು ಬೆದರಿಸಿದ್ದಾರೆ ಎಂದು ಸೋಮಣ್ಣ ಬೇವಿನಮರದ ಆರೋಪಿಸಿದರು.

ಹಿರಿಯ ಸದಸ್ಯರಾದ ಗಣೇಶ್‍ಕಾರ್ನಿಕ್, ಪ್ರಾಣೇಶ್ ಮತ್ತಿತರರು ಇದಕ್ಕೆ  ಬೆಂಬಲ ವ್ಯಕ್ತಪಡಿಸಿದರು. ಸಭಾನಾಯಕರಾದ ಎಂ.ಆರ್.ಸೀತಾರಾಮ್, ಮುಖ್ಯ ಸಚೇತಕ ಐವಾನ್ ಡಿಸೋಜಾ ಮತ್ತಿತರರು ವಿರೋಧ ವ್ಯಕ್ತಪಡಿಸಿದರು. ಈ ಹಂತದಲ್ಲಿ ಬಿಜೆಪಿ ಸದಸ್ಯರಾದ ಸೋಮಣ್ಣ ಬೇವಿನಮರದ, ತಾರಾ ಅನುರಾಧಾ, ಪ್ರಾಣೇಶ್,ಡಿ.ಎಸ್.ವೀರಯ್ಯ ಮತ್ತಿತರರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು.

ಯಾವ ಕಾರಣಕ್ಕಾಗಿ ಧರಣಿ ನಡೆಸುತ್ತಿದ್ದೀರಾ ಎಂದು ಸಭಾಪತಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಬಿಜೆಪಿ ಸದಸ್ಯರಾದ ವಿ.ಸೋಮಣ್ಣ ಅವರು, ಈ ಪ್ರಶ್ನೆಗೆ ನಾಳೆ ಸರ್ಕಾರ ಉತ್ತರ ನೀಡಬೇಕು. ಆದ್ಯತೆ ಮೇರೆಗೆ ಚರ್ಚೆಗೆ ಅವಕಾಶ ನೀಡಬೇಕು ಎಂಬುದು ನಮ್ಮ ಪಕ್ಷದವರ ಆದ್ಯತೆಯಾಗಿದೆ ಎಂದು ತಿಳಿಸಿದರು. ನಾಳೆ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ಅವರು ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ