ನೀರಾವರಿ ಯೋಜನೆ: ‘ಸರ್ಕಾರದ ದಿಟ್ಟ ನಿರ್ಧಾರ’23-11-2017 218

ಬೆಳಗಾವಿ: ಕೃಷ್ಣಾ ನದಿ ಪಾತ್ರದ ನೀರಾವರಿ ಯೋಜನೆಗಳಿಗೆ ರೈತರಿಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪುನರ್ ವಸತಿ ಕಲ್ಪಿಸಲು 450ಕೋಟಿ ರೂ ಅಗತ್ಯವಿದ್ದು, ಈಗಾಗಲೇ 192ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ವಿಧಾನಸಭೆಗಿಂದು ತಿಳಿಸಿದರು.

ನಿಯಮ 69ರಡಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ಮುಳುಗಡೆ ಗ್ರಾಮಗಳಿಗೆ ಪರಿಹಾರ ಮತ್ತು ಪುನರ್ ವಸತಿಗಾಗಿ 600 ರಿಂದ 700 ಕೋಟಿ ರೂ.ಗಳಷ್ಟು ನೀಡಬೇಕೆಂಬ ಬೇಡಿಕೆ ಇದೆ. ಆಲಮಟ್ಟಿ ಜಲಾಶಯದಿಂದ ಸುಮಾರು 1.33ಲಕ್ಷ ಎಕರೆ ಪ್ರದೇಶ ಮುಳುಗಡೆಯಾಗಲಿದ್ದು, ಜಲಾಶಯಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ 2013ರ ಮಾರ್ಗಸೂಚಿ ಅನ್ವಯ ಪರಿಹಾರ ನೀಡಲು ಉದ್ದೇಶಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸುವ ಮೊದಲೇ ರಾಜ್ಯ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಭೂಸ್ವಾಧೀನ ಹಾಗೂ ಇತರೆ ಕಾಮಗಾರಿಗೆ ಕ್ರಿಯಾ ಯೋಜನೆಯನ್ನ ಸಿದ್ಧಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಅಧಿಸೂಚನೆ ಹೊರಡಿಸುವವರೆಗೂ ಕಾಯ್ದಿದ್ದರೆ ನೀರಾವರಿ ಯೋಜನೆಗಳ ಕಾರ್ಯಾರಂಭ ಇನ್ನೂ 10 ವರ್ಷಗಳಷ್ಟು ವಿಳಂಬ ಆಗುತ್ತಿತ್ತು. ಕಳೆದ ನಾಲ್ಕು ವರ್ಷದಲ್ಲಿ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಆಡಳಿತ ಪಕ್ಷದ ಶಾಸಕ ಜೆ.ಟಿ.ಪಾಟೀಲ್, ನೀರಾವರಿಗಾಗಿ ಭೂಮಿ ಕಳೆದಕೊಂಡ ರೈತರಿಗೆ ಎಕರೆಗೆ 40 ಲಕ್ಷ ರೂ ಪರಿಹಾರ ನೀಡಬೇಕು ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮಾಡಿದರು. ಶಾಸಕ ಹೆಚ್.ವೈ.ಮೇಟಿ ಮಾತನಾಡಿ, ಭೂಮಿಗೆ ಬೆಲೆ ನಿಗಿದಿಪಡಿಸಲು ಸಮಿತಿ ರಚಿಸ ಬೇಕು. ಜನಪ್ರತಿನಿಧಿಗಳು ಹಾಗೂ ನಿರಾಶ್ರಿತರು ಇರಬೇಕು ಎಂದು ಹೇಳಿದರು.

ಬಿಜೆಪಿ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ನೀರಾವರಿ ಯೋಜನೆ ಮುಳುಗಡೆಯಾದ ಪ್ರದೇಶದವರಿಗೆ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಬೇಕು. ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಬೆಳಗಾವಿ ಅಥವಾ ಬೆಂಗಳೂರಿನಲ್ಲಿ ಕರೆಯಬೇಕು ಎಂದು ಆಗ್ರಹಿಸಿದರು.

ಶಾಸಕ ಸಿದ್ದುನ್ಯಾಮಗೌಡ ಮಾತನಾಡಿ, ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ  ನೀಡುವುದರ ಜತೆಗೆ ಈ ಭಾಗದಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನಾರಾಯಣಪುರ ಹಿನ್ನೀರಿನ ಮುಳುಗಡೆ ಗ್ರಾಮಗಳಿಗೆ ಸೂಕ್ತ ಪುನರ್‍ ವಸತಿ ಹಾಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಅಪ್ಪಾಜಿ ಚನ್ನಬಸಪ್ಪ ನಾಡಗೌಡ ಮಾತನಾಡಿ, ಮುಳುಗಡೆ ಪ್ರದೇಶಕ್ಕೆ ಪ್ರತ್ಯೇಕ ನೇಮಕಾತಿ ಮಾಡಬೇಕು. ಪುನರ್ ವಸತಿ ಜತೆಗೆ ಜನರ ಮುಂದಿನ ಜೀವನಕ್ಕೆ ಬೇಕಾದ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ