‘ಕೇಂದ್ರ ನಾಯಕರ ಮೇಲೆ ಉಗ್ರರ ಕೆಂಗಣ್ಣು’..?

terrorist target on central ministers

22-11-2017

ಬೆಂಗಳೂರು: ದೇಶದ ಪ್ರಭಾವಿ ಕೇಂದ್ರ ಸಚಿವರು ಹಾಗೂ ಪ್ರಮುಖ ರಾಜ್ಯವೊಂದರ ಮುಖ್ಯಮಂತ್ರಿ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಹತ್ಯೆ ಮಾಡಲು ಜೈಶ್-ಎ-ಮೊಹಮ್ಮದ್(ಜೆಇಎಂ) ಮತ್ತು ಲಷ್ಕರೆ-ಎ-ತೊಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಪ್ರಭಾವಿಗಳ ಹತ್ಯೆಯ ಸಂಚನ್ನು ಕಾರ್ಯಗತಗೊಳಿಸಲು ಬಾಂಗ್ಲಾದೇಶ ಮೂಲದ ಸದಸ್ಯರ ಘಟಕಕ್ಕೆ ಹೊಣೆ ವಹಿಸಲಾಗಿದ್ದು, ಈಗಾಗಲೇ ಈ ತಂಡದ ಸದಸ್ಯರು ಗಡಿ ದಾಟಿ ಭಾರತ ಪ್ರವೇಶಿಸಿರುವ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿವೆ.

ಕಳೆದ ವಾರ ದೆಹಲಿಯಲ್ಲಿ ನಡೆದ ಗುಪ್ತಚರ ವಿಭಾಗದ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ಅಲ್ಲಿಂದ ಪ್ರಭಾವಿ ಕೇಂದ್ರ ಸಚಿವರು, ಬಂಧಪಟ್ಟ ಮುಖ್ಯಮಂತ್ರಿಗೆ ಭದ್ರತೆ ಹೆಚ್ಚಿಸಲಾಗಿದೆ. ಪ್ರಭಾವಿ ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿ ಯಾರು ಟಾರ್ಗೆಟ್ ಎಂಬುದನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿಲ್ಲ. ವಿದೇಶಿ ಗುಪ್ತಚರ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ಆಧರಿಸಿ ಢಾಕಾದ ಅಡಗುತಾಣಕ್ಕೆ ದಾಳಿ ನಡೆಸಿದ್ದರೂ ಅಲ್ಲಿ ಯಾವುದೇ ದಾಳಿಯ ಸಂಚು ರೂಪಿಸಿರುವುದು ಪತ್ತೆಯಾಗಿಲ್ಲ, ಆದರೂ ಗುಪ್ತಚರ ಇಲಾಖೆಯ ನಿರ್ದೇಶನದಂತೆ ದೇಶದ ಪ್ರಮುಖ ನಾಯಕರಿಗೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿಗೆ ಭಾರತದ ಭದ್ರತಾ ಸಿಬ್ಬಂದಿ ಜೈಶ್ ತಂಡದ ಅಝರ್ ಮತ್ತು ತಲ್ಹಾ ಎಂಬ ಕುಖ್ಯಾತರನ್ನು ಸದೆಬಡಿದ ಹಿನ್ನೆಲೆಯಲ್ಲಿ ಪ್ರತೀಕಾರಕ್ಕೆ ಜೈಶ್ ಮುಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ಈ ದಾಳಿ ರೂಪಿಸಿದ್ದಾನೆ ಎನ್ನಲಾಗಿದೆ. ತಲ್ಹಾನ ಹತ್ಯೆ ಜೈಷ್‍ಗೆ ಭಾರಿ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈತ ಹಲವು ದಾಳಿಗಳನ್ನು ನಡೆಸಿ ಸಾವು ನೋವುಗಳಿಗೆ ಕಾರಣನಾಗಿದ್ದ. ಪುಲ್ವಾಮ ಪೊಲೀಸ್ ಚೌಕಿ ಮತ್ತು ಶ್ರೀನಗರ ವಿಮಾನ ನಿಲ್ದಾಣದ ಮೇಲೂ ಇತ್ತೀಚೆಗೆ ನಡೆದ ದಾಳಿಯಲ್ಲಿ ಈತನ ಕೈವಾಡವಿತ್ತು.

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಜೆಇಎಂ ಉಗ್ರರು ಹಲವು ದಾಳಿಗಳನ್ನು ನಡೆಸಿ ಶಾಂತಿ ಕದಡುತ್ತಿದ್ದಾರೆ. ಲಷ್ಕರ್ ತೊಯ್ಬಾದ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಜೆಇಎಂ ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ದಾಳಿ ನಡೆಸುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಕಾಶ್ಮೀರದ ಬುದ್ಗಾಮ್ ಪ್ರದೇಶದಲ್ಲಿ ಮೂವರು ಜೈಶ್ ಉಗ್ರರು ಬಂಧನಕ್ಕೊಳಲಾಗಿದ್ದರು. ಪುಲ್ವಾಮ ಜಿಲ್ಲೆಯ ಬಂಡ್‍ಜೂ ಮೂಲದ ಮುಹಮ್ಮದ್ ಮಕ್ಬೂಲ್ ಮುಲ್ಲಾ, ಗೌಹರ್ ಅಹ್ಮದ್, ಪುಲ್ವಾಮ ಜಿಲ್ಲೆಯ ಕಕಪೊರನ ಲೆಹರ್‍ನ ಅಝರ್ ಅಹ್ಮದ್ ಬಂಧಿತ ಆರೋಪಿಗಳಾಗಿದ್ದಾರೆ. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಅವರು ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅವರಿಂದ ಎಸ್‍ಎಲ್‍ಆರ್, ಪಿಸ್ತೂಲ್, ಗ್ರೆನೇಡ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ