‘1 ತಿಂಗಳಲ್ಲಿ ವಿವಾದ ಬಗೆಹರಿದರೆ ಸಂತೋಷ’22-11-2017

ಬೆಳಗಾವಿ: ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ಒಂದು ತಿಂಗಳಲ್ಲಿ ಬಗೆಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹೇಳಿದ್ದಾರೆ. ಅಲ್ಲಿಯವರೆಗೆ ನಾವೂ ಕಾದು ನೋಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ರಾಜ್ಯ ಬಿಜೆಪಿ ನಾಯಕರು ಈ ಭಾಗದಲ್ಲಿ ಪರಿವರ್ತನಾ ಯಾತ್ರೆ ಮಾಡುತ್ತಿದ್ದಾರೆ. ಹೀಗಾಗಿ ಜನರ ಕಣ್ಣೊರೆಸುವ ತಂತ್ರವಾಗಿ ವಿವಾದ ಬಗೆಹರಿಸುವುದಾಗಿ ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ ಅಷ್ಟೇ ಎಂದರು.

ವಿವಾದದ ಬಗ್ಗೆ ಇದುವರೆಗೂ ಮಾತೇ ಆಡದ ಬಿಜೆಪಿ ನಾಯಕರು ಈಗ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಭಾರಿ ಉತ್ಸಾಹ ತೋರುತ್ತಿದ್ದಾರೆ. ಅದೆಲ್ಲ ಪರಿವರ್ತನಾ ಯಾತ್ರೆಗಾಗಿ. ಒಂದು ತಿಂಗಳಲ್ಲಿ ವಿವಾದ ಬಗೆಹರಿದಿದ್ದೇ ಆದರೆ ಬಹಳ ಸಂತೋಷ. ಇದರಿಂದ ಜನರಿಗೂ ಕುಡಿಯುವ ನೀರು ಸಿಗುತ್ತದೆ ಎಂದು ಸಿಎಂ ತಿಳಿಸಿದರು.

ಮಹಾದಾಯಿ ವಿವಾದ ಬಗೆಹರಿಸಲು ಮಧ್ಯಪ್ರವೇಶ ಮಾಡುವಂತೆ ಸರ್ವಪಕ್ಷ ನಿಯೋಗದೊಂದಿಗೆ ಹೋಗಿ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಇದೇ ಬಿಜೆಪಿ ನಾಯಕರು ತುಟಿ ಬಿಚ್ಚಲಿಲ್ಲ. ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ಈಶ್ವರಪ್ಪ, ಅನಂತಕುಮಾರ್ ಅವರುಗಳು ಒಂದೇ ಒಂದು ಮಾತು ಹೇಳಲಿಲ್ಲ. ಪ್ರಧಾನಿಯವರ ಮೇಲೆ ಒತ್ತಡವನ್ನೂ ಹಾಕಲಿಲ್ಲ.

ಮಹಾದಾಯಿ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ. ಅದರಲ್ಲಿ ಕುಡಿಯುವ ಉದ್ದೇಶಕ್ಕೆ 7.56 ಟಿಎಂಸಿ ಕೊಡಿ ಎಂಬುದು ನಮ್ಮ ಬೇಡಿಕೆ. ಈ ವಿಚಾರ ನ್ಯಾಯ ಮಂಡಳಿ ಮುಂದೆ ಇದೆ. ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ನ್ಯಾಯ ಮಂಡಳಿ ಸಹ ಹೇಳಿದೆ.

ಮಾತುಕತೆಗೆ ವೇದಿಕೆ ಕಲ್ಪಿಸುವ ಕಾರ್ಯವನ್ನು ಪ್ರಧಾನಿಯವರು ಮಾಡಬೇಕಿದೆ. ಮಾತುಕತೆಗೆ ಬನ್ನಿ ಎಂದು ನಾನು ಗೋವಾ ಮುಖ್ಯಮಂತ್ರಿಯವರಿಗೆ ಎರಡು ಬಾರಿ ಪತ್ರ ಬರೆದರೂ ಪ್ರತಿಕ್ರಿಯೆ ಬರಲಿಲ್ಲ. ಹೇಗಿದ್ದರೂ ಯಡಿಯೂರಪ್ಪ ಅವರು ಒಂದು ತಿಂಗಳ ಸಮಯ ಕೇಳಿದ್ದಾರೆ. ನಾವೂ ಕಾದು ನೋಡುತ್ತೇವೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಕಮಿಷನ್ ದಂಧೆ ನಡೆಯುತ್ತಿದೆ ಎಂಬ ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು ಯಾರು ? ಊಟ ಮಾಡಲು ಅಥವಾ ಸಂಬಂಧ ಬೆಳೆಸಲು ಅವರು ಜೈಲಿಗೆ ಹೋಗಿದ್ದರೇ ? ನಮ್ಮದು ಹಗರಣ ಮುಕ್ತ ಸರ್ಕಾರ. ನಮ್ಮಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಇಂಧನ ಇಲಾಖೆಯಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಯಾವ ಸಂಸ್ಥೆಗೆ ವಹಿಸಬೇಕು ಎಂಬುದನ್ನು ಸರ್ಕಾರ ಶೀಘ್ರವೇ ನಿರ್ಧರಿಸುತ್ತದೆ. ಎಂದು ತಿಳಿಸಿದರು.

ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿಲ್ಲ. ಈಗ ಸಿಬಿಐ ಸಂಸ್ಥೆ ಮೇಲೆ ಆ ಪಕ್ಷದ ನಾಯಕರಿಗೆ ಪ್ರೀತಿ ಬಂದಿದೆ. ಸಿಬಿಐ ಎಂದರೆ ಚೋರ್ ಬಚಾವೋ ಸಂಸ್ಥೆ ಎನ್ನುತ್ತಿದ್ದವರು. ಈಗ ಆ ತನಿಖಾ ಸಂಸ್ಥೆಯ ಜಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ರಕ್ಷಣೆ ಪಡೆಯುವುದು ಇದರ ಉದ್ದೇಶ ಎಂದು ಟೀಕಿಸಿದರು.

ಸಿಬಿಐ ಎಫ್‍ಐಆರ್ ದಾಖಲು ಮಾಡಿದೆ ಎಂದ ಮಾತ್ರಕ್ಕೆ ಜಾರ್ಜ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಅದು ಕೇವಲ ಪ್ರಾಥಮಿಕ ವರದಿ ಅಷ್ಟೇ. ಯಡಿಯೂರಪ್ಪ ಅವರ ವಿರುದ್ಧವೂ ಹಲವಾರು ಎಫ್‍ಐಆರ್ ಗಳು ದಾಖಲಾಗಿವೆ. ಹೀಗಾಗಿ ಅವರೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಲ್ಲವೇ ? ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದರು.


ಸಂಬಂಧಿತ ಟ್ಯಾಗ್ಗಳು

siddaramaiah B.S yeddyurappa ಮಹಾದಾಯಿ ಚಿಕ್ಕೋಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ