‘ರಾಜ್ಯದಲ್ಲಿ ಮದ್ಯಪಾನ ನಿಷೇಧ ಅಸಾಧ್ಯ’

No plan to ban liquor in state: CM Siddaramaiah

21-11-2017 770

ಬೆಂಗಳೂರು: ಮದ್ಯಪಾನ ನಿಷೇಧ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ವಿಧಾನಸಭೆಯಲ್ಲಿಂದು ಕೋಲಾಹಲ ಸೃಷ್ಟಿಸಿತು. ಇದರ ಪರಿಣಾಮ ಪ್ರಶ್ನೋತ್ತರ ಕಲಾಪದಲ್ಲಿ ಎರಡು ಬಾರಿ ಸದನ ಮುಂದೂಡುವ ಪರಿಸ್ಥಿತಿ ನಿರ್ಮಾಣವಾಯಿತು.

ಪ್ರಶ್ನೋತ್ತರ ಕಲಾಪದಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಸಂಪೂರ್ಣ ಪಾನನಿಷೇಧ ಜಾರಿ ಅಸಾಧ್ಯ. ಈ ಕುರಿತು ರಾಷ್ಟ್ರೀಯ ನೀತಿ ಜಾರಿಯಾದಲ್ಲಿ ಅದನ್ನು ರಾಜ್ಯ ಸರ್ಕಾರ ಬೆಂಬಲಿಸಲಿದೆ. ಈ ಮುನ್ನ ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಿದ್ದರಿಂದ ಭ್ರಷ್ಟಾಚಾರ ಹೆಚ್ಚಾಯಿತು. ಗ್ರಾಮೀಣ ಭಾಗದಲ್ಲಿ ಕಿರಾಣಿ ಮತ್ತು ಟೀ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುವಂತಾಯಿತು. ಬಿಜೆಪಿ ಆಡಳಿತ ಇರುವ ಗುಜರಾತ್‍ನಲ್ಲಿ 1959 ರಿಂದಲೂ ಪಾನ ನಿಷೇಧವಿದೆಯಾದರೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.  ಕೆಲವು ರಾಜ್ಯಗಳಲ್ಲಿ ಪಾನ ನಿಷೇಧ ಮಾಡಿ ನಂತರ ವಾಪಸ್ ಪಡೆದಿರುವ ಉದಾಹರಣೆಗಳಿವೆ ಎಂದರು.

ಬಿಜೆಪಿಯ ಶಾಸಕ ಸಿ.ಟಿ.ರವಿ ಅವರು ಮಾತನಾಡಿ, ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸುವ ಚಿಂತನೆ ಇದೆಯೇ? ಆಗಿದ್ದರೆ ಯಾವಾಗಾ ನಿಷೇಧಿಸಲಾಗುವುದು? ಮದ್ಯ ಸೇವನೆಯಿಂದ ಬಡ ಕುಟುಂಬಗಳು ಬೀದಿಪಾಲಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬೀದಿಪಾಲಾಗುವ  ಕುಟುಂಬಗಳಿಗೆ ಸರ್ಕಾರ ಪರಿಹಾರ ಕೊಡಲಿದೆಯೇ  ಎಂದು ಪ್ರಶ್ನಿಸಿದರಲ್ಲದೆ, ಸರ್ಕಾರ ಜಾಣ ಕಿವುಡು, ಜಾಣ ಕುರುಡು ನೀತಿ ಅನುಸರಿಸುತ್ತಿದೆ. ಲಕ್ಷಾಂತರ ಕುಟುಂಬಗಳ ಬದುಕು ಬೀದಿಪಾಲಾಗಿದೆ. ಮದ್ಯಪಾನ ಸಂಯಮ ಮಂಡಳಿ ಸ್ಥಾಪಿಸಿ  ಆ ಮೂಲಕ ಕುಡಿದರೆ ಮನೆ ಹಾಳು ಎಂಬ ಗೋಡೆ ಬರಹ ಬರೆಸಲಾಗಿದೆ. ಇನ್ನು ಮುಂದೆ ಕುಡಿದವರು ಸಂತೋಷದಿಂದ ಇರುತ್ತಾರೆ ಎಂದು ಬರೆಸಿ ಎಂದು ತರಾಟೆಗೆ ತೆಗೆದುಕೊಂಡರು. ಸಈ ಹಂತದಲ್ಲಿ  ಆಡಳಿತ ಪಕ್ಷದ ಕೆಲವು ಶಾಸಕರು ರವಿ ಅವರ ಮಾತಿಗೆ ಆಕ್ಷೇಪಿಸಿದರು.

ಮಾತು ಮುಂದುವರೆಸಿದ ರವಿ, ನಮ್ಮ ಸರ್ಕಾರ ಸಾರಾಯಿ ನಿಷೇಧ ಮಾಡಿತ್ತು. ದೇಶದ ಕೆಲವು ರಾಜ್ಯಗಳಲ್ಲಿ ಸಂಪೂರ್ಣ ಪಾನ ನಿಷೇಧ ಇದೆ. ಕರ್ನಾಟಕದಲ್ಲೂ ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್, ಸಂಪೂರ್ಣ ಪಾನ ನಿಷೇಧದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಅಬಕಾರಿ ಇಲಾಖೆಯಿಂದ ಹದಿನೆಟಂಟು ಸಾವಿರದ ಐವತ್ತು ಕೋಟಿ ರೂ ರಾಜಸ್ವ ಸಂಗ್ರಹದ ನಿರೀಕ್ಷೆ ಇದೆ. ಈವರೆಗೂ ಹನ್ನೊಂದು ಸಾವಿರ ಕೋಟಿ ರೂ ಸಂಗ್ರಹವಾಗಿದೆ.  ಮದ್ಯಪಾನ ಸೇವನೆಯಿಂದ ಬೀದಿಗೆ ಬಿದ್ದ ಕುಟುಂಬಗಳ ಮಾಹಿತಿಯನ್ನು ಆರೋಗ್ಯ ಸಚಿವ ರಮೇಶ್‍ಕುಮಾರ್ ಅವರಿಂದ ಪಡೆದು ಒದಗಿಸುತ್ತೇನೆ ಎಂದು ವಿವರಣೆ ನೀಡಿದರು. ಬಿಜೆಪಿ ಶಾಸಕ ಸುರೇಶ್‍ಕುಮಾರ್ ಅವರು, ಕುಡಿದು ಬೀದಿ ಪಾಲಾದ ಕುಟುಂಬಗಳ ಉಸ್ತುವಾರಿ ಆರೋಗ್ಯ ಇಲಾಖೆಗೆ ಯಾವಾಗ ವರ್ಗಾವಣೆ ಆಯಿತು ಎಂದು ಛೇಡಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಅವರು, ನಾವು ಬೀದಿ ಪಾಲಾಗಿರುವವರ ಬಗ್ಗೆ ಮಾತನಾಡುತ್ತೇವೆ. ನೀವು ಭದ್ರವಾಗಿರುವವರ ಬಗ್ಗೆ ಚರ್ಚೆ ಮಾಡುತ್ತೀರಾ ಎಂದು ಮಾರ್ಮಿಕವಾಗಿ ಹೇಳಿದರು. ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ಮದ್ಯಪಾನ ನಿಷೇಧದ ಬಗ್ಗೆ ಈಗ ಜ್ಞಾನೋದಯವಾಗಿದೆ. ಎಸ್.ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಬಕಾರಿ ಸಚಿವರಾಗಿದ್ದ ಯಶೋಧರ ದಾಸಪ್ಪ ಅವರ ಕಾಲದಿಂದಲೂ ಸಂಪೂರ್ಣ ಪಾನ ನಿಷೇಧ ಕುರಿತು ಚರ್ಚೆ ನಡೆಯುತ್ತಿದೆ. ಅದು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದಾಗ ಯಶೋಧರದಾಸಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಪ್ರಸ್ತಾಪಿಸಿದರು. ಇದೊಂದು ಒಂದು ರಾಜ್ಯದ ನಿರ್ಣಯ ಆಗಬಾರದು. ರಾಷ್ಟ್ರೀಯ ನೀತಿ ಆಗಬೇಕು. ಅದಕ್ಕೆ ನಮ್ಮ ಸರ್ಕಾರದ ಬೆಂಬಲವಿದೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಸರಾಯಿ ನಿಷೇಧ ಮಾಡಿದ ನಂತರ ಭ್ರಷ್ಟಾಚಾರ ಹೆಚ್ಚಾಯಿತು. ಟೀ, ಬೀಡಿ ಅಂಗಡಿಗಳಲ್ಲಿ ಬಾಟೆಲ್‍ಗಳು ಮಾರಾಟವಾದವು. ಈ ಮೊದಲು 12ರೂ.ಗೆ ಒಂದು ಪ್ಯಾಕೆಟ್ ಸಾರಾಯಿಯಂತೆ ಎರಡು ಪ್ಯಾಕೆಟ್ ಸಾರಾಯಿ ಕುಡಿದರೆ ಸಾಕಿತ್ತು. ಅದಕ್ಕೆ 24ರೂ. ಖರ್ಚಾಗುತ್ತಿತ್ತು. ಒಂದು ಚಾಕ್ಣ ತಿಂದಿದ್ದರೆ 30ರೂ. ನಲ್ಲಿ ಬಡವನ ಚಟ ತೀರುತಿತ್ತು. ಈಗ ಒಂದು ಕ್ವಾಟರ್‍ಗೆ 70ರೂ. ಇದೆ. ನಿಶೆ ಏರಬೇಕಾದರೆ ಎರಡು ಕ್ವಾಟರ್ ಕುಡಿಯಬೇಕು. 150ರೂ. ಖರ್ಚಾಗುತ್ತಿದೆ. ಇದರಿಂದ ಬಡವರಿಗೆ ಅನುಕೂಲ ವಾಯಿತಾ ಎಂದು ಖಾರವಾಗಿ ಪ್ರಶ್ನಿಸಿದರು.

ಆಗಿದ್ದರೆ ನಿಮ್ಮ ಸರ್ಕಾರ ಸಾರಾಯಿ ಭಾಗ್ಯ ಕರುಣಿಸಲಿದೆಯೇ ಎಂದು ಸಿ.ಟಿ.ರವಿ ಮತ್ತು ಸುನೀಲ್ ಕುಮಾರ್ ಕೆಣಕಿದರು. ಮಹಾತ್ಮ ಗಾಂಧೀಜಿ ಹುಟ್ಟಿದ ನಾಡು ಎಂಬ ಕಾರಣಕ್ಕೆ 1950ರಿಂದಲೂ ಗುಜರಾತಿನಲ್ಲಿ ಪಾನ ನಿಷೇಧ ಇದೆ. ಯಶಸ್ವಿಯಾಗಿದೆಯೇ ಎಂದು ಹೋಗಿ ನೋಡಿಕೊಂಡು ಬನ್ನಿ. ಈ ಹಿಂದೆ ಜನತಾದಳದ ಸರ್ಕಾರದಲ್ಲಿ ಮದ್ಯಪಾನದ ನಿಷೇಧದದ ಚರ್ಚೆ ಬಂದಾಗ ನನ್ನ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆಯಾಯಿತು. ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರ ಸಂಪುಟದಲ್ಲಿದ್ದ ಪಿ.ಜಿ.ಆರ್.ಸಿಂಧ್ಯಾ ಎಂ.ಸಿ.ನಾಣಯ್ಯ ಅವರಿದ್ದರು. ನಾವೆಲ್ಲ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಿಗೆ ಹೋಗಿ ಅಧ್ಯಯನ ಮಾಡಿದಾಗ ಈ ಯೋಜನೆ ಎಲ್ಲಿಯೂ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಯಾವುದೋ ಒಂದು ರಾಜ್ಯ ಪಾನ ನಿಷೇಧ ಮಾಡಿದರೆ ನೆರೆ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸರಬರಾಜಾಗುತ್ತದೆ. ಇಲ್ಲಿ ಅಕ್ರಮ ವಹಿವಾಟು ಹೆಚ್ಚಾಗುತ್ತದೆ. ಸರ್ಕಾರದ ಆದಾಯಕ್ಕೂ ನಷ್ಟವಾಗಲಿದೆ. ಒಂದು ರಾಜ್ಯದ ಪಾನ ನಿಷೇಧದಿಂದ ಜನರ ಆರೋಗ್ಯವೂ ಸುಧಾರಿಸುವುದಿಲ್ಲ. ಆರ್ಥಿಕ ಮಟ್ಟವೂ ಹೆಚ್ಚಾಗುವುದಿಲ್ಲ. ಬದಲಾಗಿ ರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣ ಪಾನ ನಿಷೇಧವಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿಯವರು ಹೇಳಿ ಈ ಕೆಲಸ ಮಾಡಿಸಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. ರಾಜ್ಯದಲ್ಲಂತೂ ಸಂಪೂರ್ಣ ಪಾನ ನಿಷೇಧ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.

ಜಗದೀಶ್‍ಶೆಟ್ಟರ್ ಮಾತನಾಡಿ, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟವಾಗುತ್ತಿದೆ. ನಿಮ್ಮ ಸರ್ಕಾರದಿಂದ ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದಾಗ? ನೀವು ಮುಖ್ಯಮಂತ್ರಿಯಾಗಿದ್ದಾಗ ನಿಯಂತ್ರಣವಾಗಿತ್ತೇ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಇದು ಆಡಳಿತ ಹಾಗೂ ಪ್ರತಿಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ನಿಮ್ಮ ಕಾಲದಿಂದಲೇ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಆರಂಭವಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿಗೆ ಇಳಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು.

ರಾಜ್ಯ ಸರ್ಕಾರ ನಿರ್ದಿಷ್ಟ ಪ್ರಮಾಣದ ಮದ್ಯ ಮಾರಾಟ ಮಾಡಲೇಬೇಕು ಎಂದು ಮದ್ಯದಂಗಡಿಗಳಿಗೆ ಗುರಿ ನಿಗದಿ ಮಾಡಿದೆ. ಇದರಿಂದ ಜನರಿಗೆ ಬಲವಂತವಾಗಿ ಕುಡಿಸುವ ಅನಿವಾರ್ಯತೆ ಮದ್ಯದಂಗಡಿಗಳಿಗೆ ಎದುರಾಗಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿದರು. ಲೈಸೆನ್ಸ್ ಇಲ್ಲದ ಅಂಗಡಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಪ್ಪಿಸಲು ಅಧಿಕೃತ ಪರವಾನಗಿದಾರರು ಪ್ರತೀ ತಿಂಗಳು ಖರೀದಿಸುವಷ್ಟು ಮದ್ಯ ಖರೀದಿಸಿ ಎಂದು ಇಲಾಖೆ ಸೂಚನೆ ನೀಡಿದೆ. ಹಾಗೆಂದ ಮಾತ್ರಕ್ಕೆ ಬಲವಂತವಾಗಿ ಕುಡಿಸಿ ಎಂದರ್ಥವಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಚರ್ಚೆಯ ನಡುವೆ ಸಿದ್ದರಾಮಯ್ಯ ಅವರು ಸಾರಾಯಿ ನಿಷೇಧ ಮಾಡಿದ್ದು ಬಿಜೆಪಿಯವರಲ್ಲ. ಸಮ್ಮಿಶ್ರ ಸರ್ಕಾರದಲ್ಲಿ  ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸಾರಾಯಿ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಅದನ್ನು ಜಾರಿಗೆ ತಂದರು ಎಂದು ಹೇಳಿಕೆ ನೀಡಿ ಸದನದಲ್ಲೇ ಇದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಮರ್ಥಿಸುವಂತೆ ಮನವಿ ಮಾಡಿದರು.

ಇದನ್ನು ವಿರೋಧಿಸಿ ಜಗದೀಶ್ ಶೆಟ್ಟರ್ ಅವರು ಸದನದಲ್ಲಿಲ್ಲದ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುವುದು ನಿಯಮ ಉಲ್ಲಂಘನೆಯಾಗಿದೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ಕಡತದಿಂದ ತೆಗೆಯಿರಿ ಎಂದು ಆಗ್ರಹಿಸಿದರು. ಇದಕ್ಕೆ ಬಿಜೆಪಿ ಎಲ್ಲಾ ಶಾಸಕರು ಬೆಂಬಲ ವ್ಯಕ್ತಪಡಿಸಿದಾಗ ಸದನದಲ್ಲಿ  ಆರೋಪ, ಪ್ರತ್ಯಾರೋಪಗಳು ನಡೆದು ಗದ್ದಲ, ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಂದಿನ ಶೈಲಿನಲ್ಲಿ ವಾಗ್ದಾಳಿ ಮುಂದುವರೆಸಿ ಬಿಜೆಪಿಯವರಿಗೆ ಸಂಸ್ಕೃತಿ ಗೊತ್ತಿಲ್ಲ. ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರಿಗೆ ಸಂಸ್ಕೃತಿ ಗೊತ್ತಿದೆಯಾ? ನಟಿ ದೀಪಿಕಾ ಪಡುಕೋಣೆ ತಲೆ ಕತ್ತರಿಸಿದವರಿಗೆ ಬಿಜೆಪಿ ನಾಯಕರು ಬಹುಮಾನ ಘೋಷಿಸಿದ್ದಾರೆ. ಇಂಥಹವರಿಂದ ನಾವು ಪಾಠ ಕಲಿಯಬೇಕೇ ಎಂದು ತಿರುಗೇಟು ನೀಡಿದರು. ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುರಿತು ನೀಡಿದ ಹೇಳಿಕೆಯನ್ನು ಕಡತದಿಂದ ತೆಗೆಯಬೇಕೆಂದು ಒತ್ತಾಯಿಸಿ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಏಕಾಂಗಿಯಾಗಿ ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದಾಗ ಇತರೆ ಬಿಜೆಪಿಯ ಶಾಸಕರು ಹಿಂಬಾಲಿಸಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ಧರಣಿ ನಡೆಸಿದರು. ಜೆಡಿಎಸ್ ಉಪನಾಯಕ ವೈ.ಎಸ್.ವಿ.ದತ್ತ ಮಾತನಾಡಿ, ಸಾರಾಯಿ ನಿಷೇಧಕ್ಕೆ ಯಡಿಯೂರಪ್ಪ ಒಪ್ಪಿರಲಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿದರು. ಅಲ್ಲದೆ, ಬಿಜೆಪಿ ಪ್ರತೀ ದಿನ ದರಣಿ ಮಾಡುತ್ತಲೇ ಇದ್ದರೆ ಮಹದಾಯಿ ಹಾಗೂ  ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚಿಸುವುದು ಯಾವಾಗ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಜೆಡಿಎಸ್‍ನ ಶಾಸಕ ಶಿವಲಿಂಗೇಗೌಡ ದಾಖಲೆಯಿಂದ ಯಾವ ಹೇಳಿಕೆಗಳನ್ನೂ ತೆಗೆಯಬಾರದು ಎಂದು ಒತ್ತಾಯಿಸಿದರು.

ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾದಾಗ ಸದನದ ಕಾರ್ಯಕಲಾಪಗಳನ್ನು ಕೆಲ ಕಾಲ ಮುಂದೂಡಿದರು. ಮತ್ತೆ ಸದನ ಸೇರಿದಾಗ ಧರಣಿ ನಿರತ ಬಿಜೆಪಿ ಶಾಸಕರು ಪಟ್ಟು ಸಡಿಲಿಸಲಿಲ್ಲ. ಈ ಹಂತದಲ್ಲಿ ಮತ್ತೆ ಆರೋಪ ಪ್ರತ್ಯಾರೋಪಗಳು ಆಡಳಿತ ಬಿಜೆಪಿ ಶಾಸಕರಿಂದ ಕೇಳಿಬಂದವು. ಸಂಪೂರ್ಣ ಕಡತವನ್ನು ಪರಿಶೀಲಿಸಿ ಮುಖ್ಯಮಂತ್ರಿ ಬಳಸಿರುವ ಶಬ್ದಗಳಲ್ಲಿ ಯಾವುದೇ ಲೋಪವಿಲ್ಲ ಎಂದು ಸಭಾಧ್ಯಕ್ಷರು ರೂಲಿಂಗ್ ನೀಡಿದಾಗ ಬಿಜೆಪಿ ಶಾಸಕರು ರೂಲಿಂಗ್ ಮರು ಪರಿಶೀಲಿಸುವಂತೆ ಮನವಿ ಮಾಡುತ್ತಾ ಆಗ್ರಹಿಸಿ ಧರಣಿ ಮುಂದುವರಿಸಿದರು. ಪರಿಸ್ಥಿತಿ ತಿಳಿಗೊಳ್ಳದ ಕಾರಣ ಸಭಾಧ್ಯಕ್ಷರು ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಬಿಜೆಪಿ ಶಾಸಕರು ಸರ್ಕಾರದ ಧೋರಣೆಯನ್ನು ಪ್ರತಿಭಟಿಸಿ ಘೋಷಣೆ ಕೂಗಿದರೆ, ಕಾಂಗ್ರೆಸ್ ಶಾಸಕರು ಪ್ರತಿ ಘೋಷಣೆ ಕೂಗಿದ್ದರಿಂದ ಗೊಂದಲದ ವಾತಾವರಣ ಉಂಟಾಯಿತು. ಜೆಡಿಎಸ್ ಶಾಸಕರು ತಟಸ್ಥವಾಗಿದ್ದರು. ಆಡಳಿತ - ಪ್ರತಿ ಪಕ್ಷದ ನಡುವೆ ಸಮನ್ವಯ ಸಾಧಿಸಲು ಸಭಾಧ್ಯಕ್ಷರು ಸದನದ ನಾಯಕರನ್ನು ಸಭೆ ಕರೆದಿರುವುದಾಗಿ ಘೋಷಿಸಿ ಕಲಾಪವನ್ನು ಕೆಲ ಕಾಲ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ ಧರಣಿ ನಿರತ ಬಿಜೆಪಿ ಶಾಸಕರಿಗೆ ಸಭಾಧ್ಯಕ್ಷರು ನೀಡಿದ ಭರವಸೆ ತೃಪ್ತಿ ತಂದಿತು. ಬಳಿಕ ಧರಣಿ ಕೈ ಬಿಟ್ಟು ಮುಂದಿನ ಕಲಾಪದಲ್ಲಿ ಕೈಗೊಂಡರು.

                       
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ