ಆಸ್ತಿ ಜೊತೆ ಆಧಾರ್ ಲಿಂಕ್ ಕಡ್ಡಾಯ..?

Mandatory Aadhaar linkage with property..?

21-11-2017

ಮಿಕ್ಕಿದ್ದೆಲ್ಲಾ ಹೆಚ್ಚೂ ಕಮ್ಮಿ ಆಗಿತ್ತು, ಇದೊಂದು ಬಾಕಿ ಇತ್ತು. ಆಗಿದ್ದು ಯಾವುದೆಲ್ಲಾ ಅನ್ನೋದು ನಿಮಗೆಲ್ಲಾ ಚೆನ್ನಾಗಿ ಗೊತ್ತೇ ಇದೆಯಲ್ಲ. ಕಪ್ಪು ಹಣಕ್ಕೆ ಕಡಿವಾಣ ಹಾಕ್ತೀವಿ ಅಂತ ಹಳೇ ಐನೂರು ಮತ್ತು ಸಾವಿರ ರೂಪಾಯಿ ನೋಟು ರದ್ದು ಮಾಡಿದ್ದಾಯ್ತು. ಮತದಾರರ ಪತ್ರ, ರೇಷನ್ ಕಾರ್ಡ್, ಅಡುಗೆ ಅನಿಲ(ಎಲ್‌ಪಿಜಿ), ಫೋನ್ ನಂಬರ್ ಮತ್ತು ಬ್ಯಾಂಕ್ ಅಕೌಂಟಿನ ಜೊತೆಗೂ ಆಧಾರ್ ಸಂಖ್ಯೆ ಸೇರಿಸಿದ್ದಾಯ್ತು. ಇದೀಗ ನಿಮ್ಮ ಆಸ್ತಿಯ ಸರದಿ, ಆಸ್ತಿ ಅಂದ್ರೆ ಅದೇ ಸ್ಥಿರಾಸ್ತಿ ವಿಚಾರ. ಹೌದು ನೀವು ಖರೀದಿ ಮಾಡೋ ಜಮೀನು, ಸೈಟು, ಮನೆ, ಶಾಪಿಂಗ್ ಕಾಂಪ್ಲೆಕ್ಸ್, ಸಿನಿಮಾ ಥಿಯೇಟರ್ ಅಥವ ಇನ್ಯಾವುದೇ ರೀತಿಯ ಸ್ಥಿರಾಸ್ತಿ ಕೊಳ್ಳೋದಾಗಲಿ, ಮಾರೋದಾಗಲಿ ಮಾಡೋವಾಗ ನಿಮ್ಮ ವ್ಯವಹಾರದ ಜೊತೆ ಆಧಾರ್ ನಂಬರ್  ಸೇರಿಸಲೇ ಬೇಕಾದ ಸಮಯ ಹತ್ತಿರ ಬಂದಿದೆ.  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಥದ್ದೊಂದು  ಕ್ರಮ ಕೈಗೊಳ್ಳುವ ದಿನಗಳು ತುಂಬಾ ಹತ್ತಿರ ಇವೆ ಅಂತ ಕೇಂದ್ರ ವಸತಿ ಖಾತೆ ಸಚಿವ ಹರ್ ದೀಪ್ ಪುರಿ ಹೇಳಿದ್ದಾರೆ.

ಹೋದ ವರ್ಷ ನೋಟು ರದ್ದತಿ ನಿರ್ಧಾರ ಕೈಗೊಳ್ಳೊ ವೇಳೆ, ಇದು ಕಪ್ಪು ಹಣ ನಿರ್ಮೂಲನೆ ಮಾಡೋದಕ್ಕಾಗಿ ಮಾಡ್ತಿರೋ ಕ್ರಮ ಅಂತ ಹೇಳಿದ್ರು. ಆದರೆ, ಸರ್ಕಾರ ಚಾಪೆ ಕೆಳಗೆ ನುಗ್ಗಿದರೆ, ಕಪ್ಪುಹಣದ ಕುಳಗಳು ರಂಗೋಲಿ ಕೆಳಗೆ ನುಗ್ಗಿ ಬಚಾವಾಗಿದ್ದರು. ಕಪ್ಪು ಹಣ ಕೊಟ್ಟು ಬಂಗಾರ, ಸೈಟು, ಮನೆ ಇತ್ಯಾದಿಗಳನ್ನು ಕೊಂಡ್ರೇ ಹೊರತು ನಷ್ಟ ಏನೂ ಮಾಡ್ಕೊಳ್ಲಿಲ್ಲ. ಹೀಗಾಗಿ, ಮೋದಿ ಸರ್ಕಾರದ ನೋಟು ರದ್ದತಿ ನಿರ್ಧಾರ ಪಲ್ಟಿ ಹೊಡೀತು. ಸರ್ಕಾರದ ನಿರ್ಧಾರದಿಂದ ಸಣ್ಣ ವ್ಯಾಪಾರಿಗಳಿಗೆ, ವ್ಯವಹಾರಸ್ಥರಿಗೆ ತೊಂದ್ರೆ ಆಯ್ತು, ದೇಶದ ಆರ್ಥಿಕತೆ ಮೇಲೂ ಪ್ರಭಾವ ಆಯ್ತು, ಮೋದಿ ಸರ್ಕಾರಕ್ಕೆ ಒಂದಿಷ್ಟು ಕೆಟ್ಟ ಹೆಸರೂ ಬಂತು.

ಆದರೆ, ಈಗ ಬಹಿರಂಗವಾಗ್ತಿರೋ ಸುದ್ದಿ ನೋಡಿದ್ರೆ, ಮೋದಿ ಸರ್ಕಾರದವರು ಸುಮ್ಮನೆ ಅಂತೂ ಕೂರೋದಿಲ್ಲ ಅನ್ನೋದು ಖಾತ್ರಿ ಆಗಿದೆ. ಎಲ್ಲಾ ಆಸ್ತಿ ಖರೀದಿ, ಮಾರಾಟದಲ್ಲಿ ಎರಡೂ ಕಡೆಯವರ ಆಧಾರ್ ಸಂಖ್ಯೆ ದಾಖಲಾದ್ರೆ, ವ್ಯವಹಾರದಲ್ಲಿ ಪಾರದರ್ಶಕತೆ ಬರಬಹುದು. ಎಲ್ಲಾ ಆಸ್ತಿಪಾಸ್ತಿಗಳ ಜೊತೆ ಅದರ ಮಾಲೀಕರು ಅನ್ನಿಸಿಕೊಂಡವರ ಆಧಾರ್ ನಂಬರ್ ಸೇರ್ಪಡೆ ಆದ್ರೆ ಅಸಂಖ್ಯಾತ ಬೇನಾಮಿ ಆಸ್ತಿಗಳೂ ಕೂಡ ಪತ್ತೆ ಆಗಬಹುದು.

ಆದ್ರೆ, ಆಧಾರ್ ಅನ್ನುವುದರ ಬಳಕೆ ಅತಿ ಆಗ್ತಿರೋದರ ಬಗ್ಗೆ, ಆಧಾರ್ ಅನ್ನುವುದು ವ್ಯಕ್ತಿಗಳ ಖಾಸಗಿತನಕ್ಕೆ ತಂದೊಡ್ಡಿರೋ ಬೆದರಿಕೆ ಬಗ್ಗೆ, ಎಲ್ಲಕ್ಕೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಆಗ್ತಿರೋದರ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ನಡೀತಾ ಇದೆ. ಆಧಾರ್ ಕಡ್ಡಾಯಗೊಳಿಸ್ತಿರೋ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ಕೂಡ ಇನ್ನೂ ಅಂತಿಮ ತೀರ್ಪು ಕೊಟ್ಟಿಲ್ಲ, ಹೀಗಾಗಿ ಸ್ಥಿರಾಸ್ತಿಗಳು ಮತ್ತು ರಿಯಲ್ ಎಸ್ಟೇಟ್ ವ್ಯವಹಾರದ ಜೊತೆಗೆ ಆಧಾರ್ ಸೇರಿಸೋ ನಿರ್ಧಾರ ಕೈಗೊಳ್ಳೊ ಮೊದಲು, ಮೋದಿ ಸರ್ಕಾರ ಸಾಕಷ್ಟು ಯೋಚನೆ, ಯೋಜನೆ ಮತ್ತು ಹೋಮ್ ವರ್ಕ್ ಮಾಡಿದ ನಂತರವೇ ನಿರ್ಧಾರ ಕೈಗೊಳ್ಳೊ ಸಾಧ್ಯತೆ ಹೆಚ್ಚು ಅನ್ನಿಸುತ್ತದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ