ಐಟಿ ಇಂದ ಜೈಲಲ್ಲೇ ಶಶಿಕಲಾ ವಿಚಾರಣೆ..?

IT interrogation on Sasikala in jail

21-11-2017

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಕೆ ನಾಯಕಿ ಶಶಿಕಲಾ ನಟರಾಜನ್ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಸಾವಿರಾರು ಕೋಟಿ ರೂ. ಅಕ್ರಮ ಆಸ್ತಿ-ಪಾಸ್ತಿ, ಬೇನಾಮಿ ಹೆಸರಲ್ಲಿ ಕಂಪನಿ ತೆರೆದು ಹೂಡಿಕೆ ಮಾಡಿ ತೆರಿಗೆ ವಂಚಿಸಿರುವ ಶಶಿಕಲಾ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಳೆ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ದಾಳಿ ವೇಳೆ ಸಿಕ್ಕ ಕೆಲ ದಾಖಲೆಗಳಲ್ಲಿ ಶಶಿಕಲಾ ಹೆಸರು ಇರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪತ್ರ ಬರೆದು ಶಶಿಕಲಾ ವಿಚಾರಣೆಗೆ ಅವಕಾಶ ಕಲ್ಪಿಸುವಂತೆ ಕೇಳಿದ್ದಾರೆ.

ಶುಕ್ರವಾರವೇ ಐಟಿ ಅಧಿಕಾರಿಗಳ ಪತ್ರ ಜೈಲಾಧಿಕಾರಿಗಳಿಗೆ ತಲುಪಿದ್ದು ಇನ್ನು ಕೆಲ ದಿನಗಳಲ್ಲಿ ಐಟಿ ಅಧಿಕಾರಿಗಳು ಪರಪ್ಪನ ಅಗ್ರಹಾರದಲ್ಲಿ ಶಶಿಕಲಾರನ್ನು ವಿಚಾರಣೆಗೊಳಪಡಿಸಲಿದ್ದಾರೆ. ಒಂದು ವಾರದ ಹಿಂದೆ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಏಕಕಾಲಕ್ಕೆ 180 ಸ್ಥಳಗಳಲ್ಲಿ ಶಶಿಕಲಾ ಮತ್ತು ಆಕೆಯ ಆಪ್ತರನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು.

ಟಿಟಿವಿ ದಿನಕರನ್ ಮನೆ ಮತ್ತು ಕಚೇರಿಗಳ ಮೇಲೆ ಮತ್ತು ಜಯಲಲಿತಾ ವಾಸವಿದ್ದ ಪೋಯೆಸ್ ಗಾರ್ಡನ್ ಮನೆ ಮೇಲೂ ದಾಳಿ ನಡೆದಿತ್ತು. ದಾಳಿ ವೇಳೆ ಲಭ್ಯವಾದ ದಾಖಲೆಗಳಲ್ಲಿ ಶಶಿಕಲಾ ಹೆಸರು ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ಶಶಿಕಲಾರನ್ನು ವಿಚಾರಣೆಗೊಳಪಡಿಸಲು ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಶಶಿಕಲಾ ನಟರಾಜನ್, ಕುಟುಂಬದ ಸದಸ್ಯರು, ಆಪ್ತರ ಮೂಲಕ ವಿವಿಧ ಕಂಪನಿಗಳಲ್ಲಿ ಬಂಡವಾಳ ತೊಡಗಿಸಿರುವ ಮೂಲಗಳನ್ನು ಪತ್ತೆ ಹಚ್ಚಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜೈಲಿನಲ್ಲೇ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಕಳೆದ ವಾರ ಶಶಿಕಲಾ ಹಾಗೂ ಅವರ ಸಂಬಂಧಿಕರು, ಆಪ್ತರ ನಿವಾಸ,ಕಚೇರಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಒಂದೂವರೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದು, ಈ ಕಂಪನಿಗಳಲ್ಲಿ ಶಶಿಕಲಾ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜೈಲಿನಲ್ಲೇ ವಿಚಾರಣೆಗೊಳಪಡಿಸಲು ಕಳೆದ 17 ರಂದು ಐಟಿ ಅಧಿಕಾರಿಗಳು ಜೈಲಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ ಶಶಿಕಲಾ ಅವರನ್ನು ಜೈಲಿನಲ್ಲೇ ವಿಚಾರಣೆಗೊಳಪಡಿಸಿ, ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಆಸ್ತಿ-ಪಾಸ್ತಿ, ದಾಳಿ ವೇಳೆ ದೊರೆತಿರುವ ಚಿನ್ನಾಭರಣ, ನಗದು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ