ಯುವತಿ ಸೊಂಟ ಹಿಡಿದು ಎಳೆದಾಡಿದವನ ಬಂಧನ !

Sexual harassment man detain

20-11-2017

ಬೆಂಗಳೂರು: ನಗರದ ಹೆಚ್‍ಎಸ್‍ಆರ್ ಲೇಔಟ್‍ನ 6ನೇ ಬ್ಲಾಕ್‍ನಲ್ಲಿ ಜಿಮ್‍ಗೆ ಹೋಗಿ ಅಲ್ಲಿಂದ ಹತ್ತಿರದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಸೊಂಟ ಹಿಡಿದು ಎಳೆದು ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನನ್ನು ಆಕೆಯ ಸ್ನೇಹಿತನೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ಥ ಯುವತಿಯ ಸ್ನೇಹಿತ ಹಿಡಿದುಕೊಟ್ಟ ಕಾಮುಕನನ್ನು ಬೇಗೂರಿನ ಮರಳು ವ್ಯಾಪಾರಿ ನಾರಾಯಣ ಸ್ವಾಮಿ(55)ಎಂದು ಗುರುತಿಸಲಾಗಿದ್ದು, ಆತನನ್ನು ಹೆಚ್‍ಎಸ್‍ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕುಡಿದ ಅಮಲಿನಲ್ಲಿ ತಿಳಿಯದಂತೆ ಕೃತ್ಯ ನಡೆಸಿರುವುದಾಗಿ ವಿಚಾರಣೆಯಲ್ಲಿ ಆರೋಪಿ ತಿಳಿಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಹೆಚ್‍ಎಸ್‍ಆರ್ ಲೇಔಟ್‍ನ ಕಲಬುರಗಿ ಮೂಲದ ಖಾಸಗಿ ಕಂಪೆನಿಯ ಉದ್ಯೋಗಿ ಸಂತ್ರಸ್ಥ ಯುವತಿಯು ಕಳೆದ ಶುಕ್ರವಾರ ರಾತ್ರಿ 8ರ ವೇಳೆ ಜಿಮ್‍ಗೆ ಹೋಗಿ ಮನೆಗೆ ನಡೆದುಕೊಂಡು ಬರುತ್ತಿದ್ದಾಗ, ಬೈಕ್‍ನಲ್ಲಿ ಹಿಂದೆ ಕುಳಿತುಕೊಂಡು ಬರುತ್ತಿದ್ದ ಕುಡಿದ ಅಮಲಿನಲ್ಲಿದ್ದ ಆರೋಪಿ ನಾರಾಯಣಸ್ವಾಮಿ ಯುವತಿಯ ಸೊಂಟವನ್ನು ಹಿಡಿದು ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ನಂತರ ಯುವತಿ ಜೋರಾಗಿ ಕೂಗಿಕೊಂಡಾಗ ತಕ್ಷಣ ಸವಾರ ವೇಗವಾಗಿ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ಸ್ಥಳದಲ್ಲಿಯೇ ಇದ್ದ ಯುವತಿಯ ಸ್ನೇಹಿತ ಮತ್ತೊಬ್ಬ ಸ್ನೇಹಿತನ ಜೊತೆ ರಕ್ಷಣೆಗೆ ಧಾವಿಸಿ ಸುಮಾರು ಅರ್ಧ ಕಿ.ಮೀ ದೂರ ಬೈಕ್ ಬೆನ್ನಟ್ಟಿಸಿಕೊಂಡು ಹೋಗಿ ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಮತ್ತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅಲ್ಲಿ ಸೇರಿದ್ದ ಸಾರ್ವಜನಿಕರು ಅವರನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಜೊತೆಗಿದ್ದ ಇನ್ನೊಬ್ಬನ ತಪ್ಪಿಲ್ಲದ ಕಾರಣ ಆತನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆರೋಪಿ ನಾರಾಯಣ ಸ್ವಾಮಿ ಬಂಧಿಸಿ ಐಪಿಸಿ ಸೆಕ್ಷನ್ 354 ರಡಿ ಪ್ರಕರಣ ದಾಖಲಿಸಿರುವ ಪೊಲೀಸರು, ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ ಎಂದು, ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ