1 ಲಕ್ಷಕ್ಕೂ ಹೆಚ್ಚು ಜನರಿಗೆ ಹಾವು ಕಡಿತ…

Snake bite cases in India..!

20-11-2017 1177

ಭಾರತದಲ್ಲಿ ಈ ವರ್ಷ ಏಪ್ರಿಲ್ ಒಂದರಿಂದ ಅಕ್ಟೋಬರ್ 31ರ ವರೆಗೂ ಒಂದು ಲಕ್ಷ ಹದಿನಾಲ್ಕು ಸಾವಿರ ಹಾವು ಕಡಿತದ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಹಾವು ಕಡಿತದ ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು 24,437 ಪ್ರಕರಣಗಳು ವರದಿಯಾಗಿವೆ. ಪಶ್ಚಿಮ ಬಂಗಾಳದಲ್ಲಿ 23,666 ಪ್ರಕರಣಗಳು, ಆಂಧ್ರ ಪ್ರದೇಶದಲ್ಲಿ 10,735, ಒಡಿಶಾದಲ್ಲಿ 7,657, ಕರ್ನಾಟಕದಲ್ಲಿ 7619, ಉತ್ತರ ಪ್ರದೇಶದಲ್ಲಿ 6,976, ತಮಿಳುನಾಡಿನಲ್ಲಿ 4,567, ತೆಲಂಗಾಣದಲ್ಲಿ 4,079 ಹಾವು ಕಡಿತದ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ, ಒಟ್ಟಾರೆಯಾಗಿ ಸುಮಾರು ಒಂದು ಲಕ್ಷ ಹಾವು ಕಡಿತದ ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗಿವೆ.

ದೇಶದಲ್ಲಿ ವರದಿಯಾಗುವ ಹಾವು ಕಡಿತದ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ, ಪ್ರತಿವರ್ಷ ಸುಮಾರು 50 ಸಾವಿರ ಎಂದು ಹೇಳಲಾಗುತ್ತದೆ. ಆದರೆ, ಇದು ಲೆಕ್ಕಕ್ಕೆ ಸಿಕ್ಕಿರುವ ಮಾಹಿತಿ ಮಾತ್ರ. ವಾಸ್ತವದಲ್ಲಿ ಹಾವು ಕಡಿತದಿಂದ ಸಾಯುವವರ ಸಂಖ್ಯೆ ಒಂದು ಲಕ್ಷವನ್ನೂ ದಾಟಬಹುದು. ಅತ್ಯಂತ ಹೆಚ್ಚಿನ ಸಂಖ್ಯೆಯ ಹಾವು ಕಡಿತದ ಪ್ರಕರಣಗಳು ಗ್ರಾಮೀಣ ಪ್ರದೇಶದಿಂದಲೇ ವರದಿಯಾಗುತ್ತವೆ.

ತಜ್ಞರು ಹೇಳುವಂತೆ, ಹಾವು ಕಡಿತದ ಪ್ರಕರಣಗಳಿಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ಕತ್ತಲೆಯಲ್ಲಿ ಓಡಾಟ ಮತ್ತು ಎಲ್ಲಾ ಕಡೆ ಕಸಕಡ್ಡಿಗಳನ್ನು ತುಂಬಿರುವುದು ಮುಖ್ಯ ಕಾರಣ. ಇದರ ಜೊತೆಗೆ ರಾತ್ರಿವೇಳೆಯಲ್ಲಿ ಬಯಲಿನಲ್ಲಿ ಮಲ ವಿಸರ್ಜನೆಗೆ ಹೋಗುವವರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹಾವು ಕಡಿತಕ್ಕೆ ತುತ್ತಾಗುತ್ತಾರೆ.

ಹೀಗಾಗಿ, ‘ಭಾರತದಲ್ಲಿ ಹಾವು ಕಡಿತ ಅನ್ನುವುದು ಬಡತನಕ್ಕೆ ಸಂಬಂಧಿಸಿದ ಒಂದು ಕಾಯಿಲೆ’ ಎಂದು ಹೇಳಲಾಗುತ್ತದೆ. ಹಾವು ಕಡಿತಕ್ಕೆ ಒಳಗಾದವರಲ್ಲಿ ಬಹುತೇಕರು ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಾರೆ. ಹೋಬಳಿ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ಸೂಕ್ತ ಚಿಕಿತ್ಸೆಯೇ ಸಿಗುವುದಿಲ್ಲ, ಅಲ್ಲಿನ ವೈದ್ಯರಿಗೆ ಹಾವು ಕಡಿತದ ಪ್ರಕರಣಗಳನ್ನು ನಿಭಾಯಿಸಲು ವಿಶೇಷ ತರಬೇತಿಯನ್ನೂ ನೀಡಿರುವುದಿಲ್ಲ. ಹೀಗಾಗಿ, ಹಾವು ಕಡಿತಕ್ಕೊಳಗಾದವರು ಪಟ್ಟಣ, ನಗರ ತಲುಪಿ ಚಿಕಿತ್ಸೆ ಪಡೆಯುವಷ್ಟರಲ್ಲಿ ಕೊನೆಯುಸಿರೆಳೆದಿರುತ್ತಾರೆ.

ಈ ರೀತಿ ಆಗುವುದನ್ನು ತಪ್ಪಿಸಲು, ಇನ್ನು ಮುಂದಿನ ದಿನಗಳಲ್ಲಿ ಹಾವು ಕಡಿತ ಅನ್ನುವುದನ್ನು ಪೋಲಿಯೊ, ಮಲೇರಿಯದಂತೆ ಒಂದು ಅಧಿಸೂಚಿತ ಕಾಯಿಲೆ ರೀತಿಯಲ್ಲಿ ಪರಿಗಣಿಸಬೇಕು. ವೈದ್ಯರಿಗೆ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ, ವಿಷಕಾರಿ ಹಾವುಗಳನ್ನು ಮತ್ತು ಅವುಗಳು ಕಡಿದಾಗ ಉಂಟಾಗುವ ಲಕ್ಷಣಗಳನ್ನು ಗುರುತಿಸುವ ಬಗ್ಗೆ ತರಬೇತಿ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸದಾ ಕಾಲ ಹಾವು ಕಡಿತಕ್ಕೆ ಸರಿಯಾದ ಚಿಕಿತ್ಸೆ ವ್ಯವಸ್ಥೆ ಇರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ