ನಿಮ್ಮ ಚೆಕ್ ಬುಕ್ಕಿನ ಕತೆ, ಖತಂ…!

Next big move by Modi..?

18-11-2017

ನಿಮ್ಮ ಬಳಿ ಇರೋ ಚೆಕ್ ಬುಕ್ಕಿನ ಆಯುಷ್ಯ ಮುಗೀತಾ ಬಂದಿರೋ ಹಾಗೆ ಕಾಣ್ತಿದೆ. ಮುಗೀಲಿ ಬಿಡ್ರಿ, ಹೊಸ ಚೆಕ್ ಬುಕ್ ತಗೋತೀವಿ ಅಂತೀರಾ? ಅಲ್ಲೇ ಇರೋದು ನೋಡಿ ವಿಷ್ಯ. ಇನ್ಮೇಲೆ ಬ್ಯಾಂಕ್ ನೋರು ಚೆಕ್ ಬುಕ್ ಕೊಡೋ ಸಾಧ್ಯತೆ ಕಡಿಮೆ ಸ್ವಾಮಿ. ಯಾಕ್ರೀ ಕೊಡಲ್ಲ, ಎಷ್ಟೋ ವರ್ಷದಿಂದ ಆ ಬ್ಯಾಂಕ್‌ ನಲ್ಲಿ ನಮ್ಮ ಅಕೌಂಟಿದೆ, ಅದು ಹೇಗೆ ಕೊಡಲ್ಲ ಅಂತ ನಾವೂ ನೋಡ್ತೀವಿ ಅನ್ನೋದಕ್ಕೆ ಹೋಗಬೇಡಿ, ಯಾಕೆ ಅಂದ್ರೆ, ಇಡೀ ದೇಶದಲ್ಲಿ ಚೆಕ್ ಬಳಕೆ ನಿಲ್ಲಿಸೋ ಬಗ್ಗೆ ಕೇಂದ್ರ ಸರ್ಕಾರ ಯೋಚನೆ ಮಾಡ್ತಾ ಇದೆಯಂತೆ.

ದೇಶದ ಜನರು ನಡೆಸೋ ಹೆಚ್ಚೂ ಕಮ್ಮಿ ಎಲ್ಲಾ ವ್ಯವಹಾರಗಳೂ ಕೂಡ ಡಿಜಿಟಲ್ ಆಗಬೇಕು ಅನ್ನೋದು ಸರ್ಕಾರದ ಚಿಂತನೆ. ಹೀಗಾಗಿ, ನೀವು ಚೆಕ್ ಕೊಡೋ ಬದಲು ನಿಮ್ಮ ಡೆಬಿಟ್ ಕಾರ್ಡ್ ಅಥವ ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ ಮಾಡೋಹಾಗೆ ಮಾಡಬೇಕು ಅನ್ನೋದೆ ಕೇಂದ್ರ ಸರ್ಕಾರದ ಉದ್ದೇಶವಂತೆ.

ಸರ್ಕಾರದವರು ನೋಟು ಪ್ರಿಂಟ್ ಮಾಡೋದಕ್ಕೆ 25  ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡ್ತಾರಂತೆ ಮತ್ತು ಆ ನೋಟುಗಳ ಭದ್ರತೆ ಇತ್ಯಾದಿಗಳ ವೆಚ್ಚ ಇನ್ನೂ 6 ಸಾವಿರ ಕೋಟಿ ರೂಪಾಯಿ ಆಗುತ್ತಂತೆ. ಕ್ಯಾಷ್ ಲೆಸ್ ವ್ಯವಹಾರ ಜಾಸ್ತಿ ಆದ್ರೆ, ನೋಟುಗಳ ಬಳಕೆ ಕಡಿಮೆ ಆಗುತ್ತೆ. ಇದರಿಂದ, ನೋಟುಗಳ ಮುದ್ರಣ ಇತ್ಯಾದಿಗಳಿಗೆ ಖರ್ಚಾಗೋ ಹಣ ಉಳಿಯುತ್ತೆ. ಹೀಗೆ ಉಳಿಯೋ ಹಣವನ್ನು, ಈ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ ಮಾಡೋ ಗ್ರಾಹಕರಿಗೆ ಬ್ಯಾಂಕ್ ನವರು ವಿಧಿಸೋ  ಶೇ.1 ರಷ್ಟು ಅಥವ ಶೇ.2 ರಷ್ಟು ಶುಲ್ಕ ತಪ್ಪಿಸೋದಕ್ಕೆ ಬಳಸಿಕೊಳ್ಳಬಹುದು ಅಂತ ಯೋಚನೆ ಮಾಡಲಾಗುತ್ತಿದೆ.

ಸದ್ಯಕ್ಕೆ ದೇಶದಲ್ಲಿ ಸುಮಾರು 80 ಕೋಟಿ ಎಟಿಎಮ್ ಕಾರ್ಡ್ ಅಥವ ಡೆಬಿಟ್ ಕಾರ್ಡ್‌ಗಳಿವೆ, ಆದರೆ ಇವುಗಳಲ್ಲಿ ಕೇವಲ ಶೇ.5ರಷ್ಟು ಕಾರ್ಡ್‌ಗಳನ್ನು ಮಾತ್ರ ಕ್ಯಾಷ್ ಲೆಸ್ ಟ್ರಾನ್ಸಾಕ್ಷನ್‌ ಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಉಳಿದ ಶೇ. 95ರಷ್ಟು ಕಾರ್ಡ್‌ ಗಳು ಕೇವಲ ಎಟಿಮ್ ನಿಂದ ಕ್ಯಾಷ್ ತೆಗೆಯೋದಕ್ಕೆ ಮಾತ್ರ ಬಳಕೆ ಆಗುತ್ತಿವೆ.

ಈಗಾಗಲೇ ಈ ನಿಟ್ಟಿನಲ್ಲಿ ಹೊಸ ಅಭಿಯಾನ ಆರಂಭಿಸಿರೋ ಅಖಿಲ ಭಾರತ ವ್ಯಾಪರಸ್ಥರ ಮಹಾ ಮಂಡಳಿ ಮತ್ತು ಮಾಸ್ಟರ್ ಕಾರ್ಡ್ ಸಂಸ್ಥೆಯವರು, ನಗದು ರಹಿತ ವ್ಯವಹಾರ ಪ್ರೋತ್ಸಾಹಿಸಿಸೋದಕ್ಕಾಗಿ ‘ಡಿಜಿಟಲ್ ರಥ್’ ಎಂಬ ಯೋಜನೆ ಜಾರಿಗೆ ತಂದಿದ್ದಾರೆ. ‘ಕ್ಯಾಷ್ ಲೆಸ್ ಬನೋ ಇಂಡಿಯ’ ಅನ್ನೋದು ಇವರ ಹೊಸ ಘೋಷಣೆ ಆಗಿದೆ.

ಇದೆಲ್ಲಾ ಸರಿ ಆದರೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕು ಅಂದ್ರೆ ಕೊಡ್ಬೇಕಲ್ಲ, ಅದೇ ಸ್ವಾಮಿ ಎಲ್ಲರಿಗೂ ಗೊತ್ತಿರೋದು, ಹೂಂ ಅದೇ, ಅದೂ ಕೂಡ ಕ್ಯಾಷ್ ಲೆಸ್ ಆಗುತ್ತಾ?


ಸಂಬಂಧಿತ ಟ್ಯಾಗ್ಗಳು

Debit Card Credit Card ಡಿಜಿಟಲ್ ‘ಕ್ಯಾಷ್ ಲೆಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ